ಮಲಯಾಳಂ ನಟ ಮತ್ತು ಮಿಮಿಕ್ರಿ ಕಲಾವಿದ ಕಲಾಭವನ್ ನವಾಸ್ ಶುಕ್ರವಾರ ಕೊಚ್ಚಿಯ ಚೊಟ್ಟನಿಕ್ಕರದಲ್ಲಿರುವ ಹೋಟೆಲ್ನಲ್ಲಿ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ ಸುಮಾರು 51 ವರ್ಷ ವಯಸ್ಸಾಗಿತ್ತು. ವರದಿಗಳ ಪ್ರಕಾರ, ಶುಕ್ರವಾರ ಸಂಜೆ ಅವರು ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಕಲಾಭವನ್ ನವಾಸ್ ಅವರ ತಂದೆ ಚಲನಚಿತ್ರ ನಟ ಅಬೂಬಕರ್. ನವಾಸ ಮಿಮಿಕ್ರಿ ಮೂಲಕವೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. 1995 ರಲ್ಲಿ ಬಿಡುಗಡೆಯಾದ ಚೈತನ್ಯಂ ಚಿತ್ರದ ಮೂಲಕ ತನ್ನ ಸಿನಿಮಾ ರಂಗ ಪ್ರಾರಂಬಿಸಿದರು. ನಂತರ, ಅನೇಕ ಚಿತ್ರಗಳಲ್ಲಿ ಸಣ್ಣ ಮತ್ತು ದೊಡ್ಡ ಪಾತ್ರಗಳನ್ನು ನಿರ್ವಹಿಸಿದವರು. ಹಿರಿಯ ನಿರ್ದೇಶಕ ಬಲುಕಿರಿಯಾತ್ ಅವರು 38 ಮಿಮಿಕ್ರಿ ಕಲಾವಿದರೊಂದಿಗೆ ಮಿಮಿಕ್ರಿ ಆಕ್ಷನ್ 500 ಚಿತ್ರದಲ್ಲಿ ಅವರಿಗೆ ಮೊದಲ ಗಮನಾರ್ಹ ಪಾತ್ರವನ್ನು ನೀಡಿದರು. ತಿಲ್ಲಾನ ತಿಲ್ಲಾನ, ಮಾಯಾಜಾಲಂ, ಜೂನಿಯರ್ ಮಂದ್ರಕೆ, ಮೈಲಾಂಚಿ ಮೊಂಚುಲ್ಲ ವೀಡು, ಕಸಬಾ, ಮಟ್ಟುಪೆಟ್ಟಿ ಮಚ್ಚಾನ್ ನವಾಸ್ ನಟಿಸಿದ ಕೆಲವು ಚಿತ್ರಗಳು.