ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರಲ್ಲಿ ವಂಚನೆ ಮಾಡಲಾಗಿದ್ದು, ವ್ಯಕ್ತಿಯೊಬ್ಬರು ಲಿಂಕ್ ಕ್ಲಿಕ್ ಮಾಡಿ ಬರೋಬ್ಬರಿ 22.59 ಲಕ್ಷ ರೂ. ಕಳೆದುಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಕಂಕನಾಡಿ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿರ್ಮಲಾ ಸೀತಾರಾಮನ್ ಅವರು ಫೇಸ್ಬುಕ್ ನಲ್ಲಿ ಆನ್ಲೈನ್ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನುವ ನಕಲಿ ವಿಡಿಯೋ ನಂಬಿ ಅದರ ಕೆಳಗೆ ಇದ್ದ ಲಿಂಕ್ ಕ್ಲಿಕ್ ಮಾಡಿ ವ್ಯಕ್ತಿಯೊಬ್ಬರು 22.59 ಲಕ್ಷ ರೂ. ಕಳೆದುಕೊಂಡಿದ್ದಾರೆ.
ವಂಚನೆಯ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರು ತಮ್ಮ ಹೆಸರು, ಮೊಬೈಲ್ ಸಂಖ್ಯೆ ನೋಂದಾಯಿಸಿದ್ದಾರೆ. ಬಳಿಕ ಅವರ ಮೊಬೈಲ್ ಗೆ ಒಬ್ಬ ವ್ಯಕ್ತಿಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತಾನು ಅನುರಾಗ್ ಶರ್ಮಾ ಎಂದು ಪರಿಚಯಿಸಿಕೊಂಡು ಖಾತೆಗೆ 12,600 ರೂ. ಹಾಕುವಂತೆ ಹೇಳಿದ್ದಾನೆ. ದೂರುದಾರ ಹಣ ಕಳುಹಿಸಿದ್ದಾರೆ. ಹೀಗೆ ಬೇರೆಬೇರೆ ಹೆಸರಿನಲ್ಲಿ ಕರೆ ಮಾಡಿದವರಿಗೆ ಒಟ್ಟು 22,59,613 ರೂಪಾಯಿ ವರ್ಗಾಯಿಸಿದ್ದು, ವಂಚನೆಗೊಳಗಾಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ.