ವಿದ್ಯಾಕ್ಷೇತ್ರದಲ್ಲಿ ಗುರಿಯೊಂದಿಗೆ ಪರಿಶ್ರಮವೇ ಯಶಸ್ಸಿನ ಮೆಟ್ಟಿಲು: ಡಾ. ಕೆ.ವಿ. ಚಿದಾನಂದ
ದೂರದೃಷ್ಟಿಯೊಂದಿಗೆ ಸಾಗಿದ ವಿದ್ಯಾರ್ಥಿ ಖಂಡಿತ ಯಶಸ್ವಿ: ಚಂದ್ರಶೇಖರ್ ಪೇರಾಲು
ಎನ್.ಎಂ.ಸಿ, ಆ.01; ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ನೂತನವಾಗಿ ಪ್ರವೇಶ ಪಡೆದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಆಗಸ್ಟ್ 01 ಶುಕ್ರವಾರದಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ನಡೆಯಿತು. ಗಣ್ಯರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭಾಧ್ಯಕ್ಷತೆಯನ್ನು ವಹಿಸಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ ಕೆ.ವಿ ಚಿದಾನಂದರವರು ಮಾತನಾಡುತ್ತಾ “ಪದವಿಯ ನಂತರ ವಿದ್ಯಾರ್ಥಿಗಳಿಗೆ ಹಲವಾರು ವೃತ್ತಿಪರ ಅವಕಾಶಗಳು ಲಭ್ಯವಿರುವುದರಿಂದ ಪದವಿ ಶಿಕ್ಷಣ ಒಂದು ಉತ್ತಮ ಹಾದಿಯಾಗಿದೆ. ಗುರಿ ಸ್ಪಷ್ಟವಾಗಿದ್ದು, ಸಮಯಪಾಲನೆ, ಪರಿಶ್ರಮ ಮತ್ತು ಪ್ರಮಾಣಿಕತೆ ಇರಬೇಕಾಗಿದೆ. ಉಪನ್ಯಾಸಕರ ಮಾರ್ಗದರ್ಶನವನ್ನು ಆಲಿಸಿ ಮುನ್ನಡೆದರೆ ಖಂಡಿತ ಯಶಸ್ಸು ನಿಮ್ಮದು” ಎಂದು ಹೇಳಿದರು ಹಾಗೂ ನೂತನ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು.
ಬಳಿಕ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು ಮಾತನಾಡಿ “ವಿದ್ಯಾರ್ಥಿಯು ದೂರದೃಷ್ಟಿಯೊಂದಿಗೆ ಜ್ಞಾನ ಮತ್ತು ಕೌಶಲ್ಯಾರ್ಜನೆಗೆ ಒತ್ತು ನೀಡಿದರೆ, ತಾನು ಬಯಸಿದ ಉನ್ನತ ಸ್ಥಿತಿಗೆ ತಲುಪುವುದು ಸಾಧ್ಯವಿದೆ. ಮುಂದಿನ ಮೂರು ವರ್ಷಗಳಲ್ಲಿ ಶಿಕ್ಷಣದಲ್ಲಿ ಹೆಚ್ಚು ಆಸಕ್ತಿ ತೆಗೆದುಕೊಂಡು ಶ್ರದ್ಧೆಯಿಂದ ಪ್ರಯತ್ನಿಸಿ” ಎಂದು ಸ್ಪೂರ್ತಿದಾಯಕ ಮಾತುಗಳನ್ನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಮ್ ಎಮ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾಲೇಜಿನ ಕುರಿತು ಸವಿವರವಾದ ಮಾಹಿತಿಯನ್ನು ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಬಳಿಕ ಪದವಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಿಥಾಲಿ ಪಿ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ವಿಶ್ವನಾಥ್ ಕೆ. ಟಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶಶ್ಮಿ ಭಟ್ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ ಸ್ವಾಗತಿಸಿ, ಆಂತರಿಕ ಗುಣಮಟ್ಟ ಖಾತರಿ ಕೋಶ ಸಂಯೋಜಕಿ ಡಾ. ಮಮತಾ ಕೆ ವಂದಿಸಿದರು.
ಕಾಲೇಜಿನ ದ್ವಿತೀಯ ವಿಜ್ಞಾನ ಪದವಿ ವಿದ್ಯಾರ್ಥಿ ಅಭಿಷೇಕ್ ಪ್ರಾರ್ಥಿಸಿ, ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಪ್ರೀಕ್ಷ ಮತ್ತು ಅಂತಿಮ ಬಿ.ಕಾಂ ವಿದ್ಯಾರ್ಥಿನಿ ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಉಪನ್ಯಾಸಕ ಉಪನ್ಯಾಸಕೇತರ ವೃಂದದವರು, ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.