ಮೊಟ್ಟ ಮೊದಲನೆಯದಾಗಿ ನಾಡಿನ ಸಮಸ್ತ ಜನತೆಗೆ ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು.ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಭಾರತ ದೇಶವು ಸಾಮಾನ್ಯವಾಗಿ ಎರಡು ಸಂಸ್ಕೃತಿಗಳನ್ನು ಮುಖ್ಯವಾಗಿ ಅನುಸರಿಸುವಂತದ್ದು ಒಂದು ಸರ್ವೇ ಜನ ಸುಖಿನೋ ಭವಂತು ಮತ್ತು ವಸುದೈವ ಕುಟುಂಬಕಂ ಸಾಮಾನ್ಯವಾಗಿ ಯಾರೇ ಅಥಿತಿಗಳಾಗಿ ಬಂದರು ಕೂಡ ಅವರಿಗೆ ಆಥಿತ್ಯ ಮಾಡಿ ಕಳುಹಿಸುವಂತಹ ಉತ್ತಮ ಸಂಸ್ಕಾರ ನಮ್ಮ ಭಾರತೀಯರದ್ದು ಆದರೆ ಕೆಲವರು ಅದನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಆಶ್ರಯಕೊಟ್ಟವರ ಮೇಲೆಯೇ ಬೂಟು ಕಾಲನಿಟ್ಟು ಅದೆಷ್ಟೋ ವರ್ಷಗಳ ಕಾಲ ನಮ್ಮನ್ನೇ ಆಳಿದರು.
ಒಂದು ಸಂದರ್ಭದಲ್ಲಿ ನಮ್ಮ ಭಾರತ ದೇಶವು ಅತ್ಯಂತ ಸಂಪತ್ಬರಿತವಾದ ದೇಶವಾಗಿತ್ತು.ಕೃಷ್ಣ ದೇವರಾಯನ ಆಡಳಿತದ ಕಾಲದಲ್ಲಂತೂ ಚಿನ್ನವನ್ನು ಸೇರಿನಲ್ಲಿ ಅಳೆದು ಕೊಡಲಾಗುತ್ತಿತ್ತು.ಅಷ್ಟೇ ಅಲ್ಲ ಹನ್ನೆರಡನೇ ಶತಮಾನದಲ್ಲಿ ಖ್ಯಾತ ವಚನಕಾರರಾದಂತಹ ಬಸವಣ್ಣನವರು ಒಂದು ಮಾತನ್ನು ಹೇಳುತ್ತಾರೆ “ನಮ್ಮ ಸಂಸ್ಥಾನದಲ್ಲಿ ಕೊಡುವವರು ಕೊಂಬುವವರು ಬೇಕಾದಷ್ಟು ಜನರಿದ್ದಾರೆ ಆದರೆ ಬೇಡುವವರು ಯಾರು ಇಲ್ಲ”ವೆಂದು ಅವರ ಮಾತಿನಲ್ಲೇ ತಿಳಿಯುತ್ತದೆ ಆ ಸಂದರ್ಭದಲ್ಲಿ ನಮ್ಮ ದೇಶ ಎಷ್ಟು ಸಂಪತ್ಬರಿತವಾಗಿತ್ತು ಎಂದು.
ಹೀಗೆ ಸಂಪತ್ಬರಿತವಾಗಿ ಕಂಗೊಳಿಸುತ್ತಿದ್ದ ನಮ್ಮ ಭಾರತ ದೇಶಕ್ಕೆ ಮೊದಲು ಪೋರ್ಚುಗೀಸರು ಬರ್ತಾರೆ ತದನಂತರ ಬ್ರಿಟಿಷರು, ಫ್ರೆಂಚರು, ಡಚ್ಚರು ಬರ್ತಾರೆ ಇವರೆಲ್ಲಾ ಭಾರತಕ್ಕೆ ತಕ್ಕಡಿ ಹಿಡಿದುಕೊಂಡು ಕೇವಲ ವ್ಯಾಪಾರದ ಉದ್ದೇಶದಿಂದ ಬಂದದ್ದು.ವ್ಯಾಪಾರಕ್ಕಾಗಿ ಬಂದವರು ನಮ್ಮ ಮೇಲೆಯೇ ಬೂಟು ಕಾಲನಿಟ್ಟು ನಮ್ಮನ್ನೇ ಆಳುವಂತಾದದ್ದು ಹೇಗೆಂದರೆ ಆಗಿನ ಸಂದರ್ಭದಲ್ಲಿ ಭಾರತೀಯರಲ್ಲಿ ಆಂತರಿಕ ಕಲಹವೇ ಹೆಚ್ಚಾಗಿತ್ತು.ಒಗ್ಗಟ್ಟಿರಲಿಲ್ಲ ಇದನ್ನೆಲ್ಲಾ ಬ್ರಿಟೀಷರು ಚೆನ್ನಾಗಿ ಉಪಯೋಗಿಸಿಕೊಂಡು ನಮ್ಮನ್ನೇ ಅಳುತ್ತಾರೆ .
ಆದರೆ ಬ್ರಿಟೀಷರ ದಬ್ಬಾಳಿಕೆಯನ್ನು ಸಹಿಸದೆ ಅನೇಕ ಭಾರತೀಯರು ಅವರ ವಿರುದ್ಧ ಧಂಗೆ ಏಳುತ್ತಾರೆ ಹೋರಾಟವನ್ನು ಮಾಡುತ್ತಾರೆ ಅಷ್ಟೇ ಅಲ್ಲ ಅದೆಷ್ಟೋ ಜನ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಭಾರತ ಮಾತೆಯ ಮಡಿಲಿಗೆ ಅರ್ಪಿಸಿದ್ದಾರೆ ಅವರಲ್ಲಿ ಪ್ರಮುಖರೆಂದರೆ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್,ಲಾಲಾ ಲಜಪತ್ ರಾಯ್ ಹೀಗೆ ಅನೇಕರು ತನ್ನ ಪ್ರಾಣವನ್ನೇ ಸ್ವಾತಂತ್ರ್ಯಕ್ಕಾಗಿ ಅರ್ಪಿಸಿದ್ದಾರೆ.ಇದೆಲ್ಲದರ ಫಲವಾಗಿ ನಮಗೆ ಕೊನೆಗೆ ಗಾಂಧೀಜಿ ಅವರ ಸತ್ಯಾಗ್ರಹದ ಮೂಲಕ 1947ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕಿತು.
ಇಂದಿಗೆ ನಮಗೆ ಸ್ವಾತಂತ್ರ್ಯ ಸಿಕ್ಕಿ ಸುಮಾರು ಎಪ್ಪತ್ತ ಒಂಬತ್ತು ವರುಷಗಳಾಗಿವೆ.ಈ ಸ್ವಾತಂತ್ರ್ಯ ಎಂಬುದು ನಮಗೆ ಸುಲಭವಾಗಿ ಸಿಕ್ಕಿದ್ದಲ್ಲ ಜಾತಿ,ಮಾತ,ಧರ್ಮಗಳ ಬೇಧ ಮರೆತು ಎಲ್ಲರೂ ಒಟ್ಟಾಗಿ ಹೋರಾಡಿದ ಫಲವೇ ಸ್ವಾತಂತ್ರ್ಯ.ಅದನ್ನು ಇಂದಿನವರು ಮರೆಯಬಾರದು.ಅಲ್ಲಿಂದ ಇಲ್ಲಿಯವರೆಗೆ ನಮ್ಮ ದೇಶ ಅಭಿವೃದ್ಧಿ ಹೊಂದುತ್ತಾ ಬಂದಿದೆ ಇಂದು ನಮ್ಮ ದೇಶ ಯಾವುದೇ ಕ್ಷೇತ್ರದಲ್ಲೂ ಕೂಡ ಕಡಿಮೆ ಇಲ್ಲ ಅದು ಆರ್ಥಿಕವಾಗಿ ಇರಬಹುದು, ಸಾಮಾಜಿಕವಾಗಿ,ಅಥವಾ ಕ್ರೀಡಾ ಕ್ಷೇತ್ರವೇ ಇರಬಹುದು.

ಆದರೆ ಬೇಸರದ ಸಂಗತಿ ಏನೆಂದರೆ ನಮ್ಮ ದೇಶದ ಕೆಲವೊಂದು ಪರಿಸ್ಥಿತಿಗಳು ಪ್ರತಿಯೊಂದರಲ್ಲೂ ಹೊಲಸು ರಾಜಕಾರಣ ಮಾಡುವ ಕೆಲವು ರಾಜಕಾರಣಿಗಳು, ಜಾತಿ ಧರ್ಮಗಳ ಮಧ್ಯೆ ಕಚ್ಚಾಟ, ಭ್ರಷ್ಟಾಚಾರ ಹೀಗಾದರೆ ನಮ್ಮ ದೇಶ ಮುಂದೆ ಹೋಗಲು ಸಾಧ್ಯವೇ? ಸ್ವಾತಂತ್ರ್ಯ ಎಂದರೆ ಬರೀ ಘೋಷಣೆ ಕೂಗುವುದು, ಹಬ್ಬ ಆಚರಿಸುವುದು, ಸಿಹಿ ಹಂಚುವುದು ಮಾತ್ರವಲ್ಲ ಭಾರತವು ಹಿಂದೆ ನಡೆದು ಬಂದಂತಹ ಪಥದತ್ತ ಹಿನ್ನೋಟವನ್ನು ಚೆಲ್ಲಿ ಮುಂದಿನ ಪ್ರಗತಿಯ ಪಥದತ್ತ ಮುನ್ನೋಟವನ್ನು ಬೀರಬೇಕು ಅದುವೇ ನಿಜವಾದ ಸ್ವಾತಂತ್ರ್ಯ.
ಪ್ರತಿಯೊಬ್ಬರಲ್ಲೂ ಕೂಡ ನಾನು ದೇಶಕ್ಕಾಗಿ ಏನು ಮಾಡಿದೆ ಎನ್ನುವ ಭಾವನೆ ಬರಬೇಕೇ ಹೊರತು ನನಗಾಗಿ ದೇಶ ಏನು ಮಾಡಿದೆ ಎನ್ನುವ ಭಾವನೆ ಅಲ್ಲ.ದೇಶ ಕಟ್ಟುವಲ್ಲಿ ಜಾತಿ ಮತದ ಬೇಧ ಮರೆತು ಒಟ್ಟಾಗಿ ಕೈ ಜೋಡಿಸಿದಾಗ ಮಾತ್ರ ಸ್ವಾತಂತ್ರ್ಯಕ್ಕಾಗಿ ರಕ್ತ ಅರ್ಪಿಸಿದ ಅದೆಷ್ಟೋ ವೀರರಿಗೆ ಶಾಂತಿ ದೊರಕುವುದೇ ಹೊರತು ನಮ್ಮ ನಮ್ಮಲ್ಲೇ ಕಚ್ಚಾಡಿದರೆ ಅಲ್ಲ.
Prapthi Gowda
