ರಾಜಸ್ಥಾನ ಅಗಸ್ಟ್ 13: ರಾಜಸ್ಥಾನದ ದೌಸಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 7 ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿದ ಭೀಕರ ಘಟನೆ ನಡೆದಿದೆ. ಅಪಘಾತದಲ್ಲಿ ಸಾವನಪ್ಪಿದವರಲ್ಲಿ 7 ಮಕ್ಕಳು ಮತ್ತು 4 ಮಹಿಳೆಯರು ಸೇರಿದ್ದಾರೆ. ಈ ಅಪಘಾತ ಎಷ್ಟು ಭೀಕರವಾಗಿತ್ತೆಂದರೆ, ಹೆದ್ದಾರಿಯಲ್ಲಿ ಸಾವಿನ ದೃಶ್ಯವನ್ನು ನೋಡಿದ ಯಾರಿಗಾದರೂ ನಡುಕ ಹುಟ್ಟಿಸುವಂತಿತ್ತು. ಪಿಕಪ್ ವ್ಯಾನ್ನಲ್ಲಿ 20 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಅವರೆಲ್ಲರೂ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಉತ್ತರ ಪ್ರದೇಶದ ಇಟಾದಲ್ಲಿರುವ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದ ವೇಳೆ ಮನೋಹರ್ಪುರ ಹೆದ್ದಾರಿಯಲ್ಲಿ ಬೆಳಿಗ್ಗೆ 4 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ದೌಸಾ ಪೊಲೀಸ್ ವರಿಷ್ಠಾಧಿಕಾರಿ ಸಾಗರ್ ತಿಳಿಸಿದ್ದಾರೆ. ಹೆದ್ದಾರಿಯ ಸರ್ವಿಸ್ ಲೇನ್ನಲ್ಲಿ ನಿಂತಿದ್ದ ಟ್ರಕ್ಗೆ ಪಿಕಪ್ ವ್ಯಾನ್ ಡಿಕ್ಕಿ ಹೊಡೆದಿದೆ. ಏಳು ಮಕ್ಕಳು ಸೇರಿದಂತೆ ನಾಲ್ವರು ಮಹಿಳೆಯರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಅವರು ಹೇಳಿದ್ದಾರೆ. ಈ ಭೀಕರ ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಉತ್ತರ ಪ್ರದೇಶದ ಇಟಾ ಜಿಲ್ಲೆಯ ನಿವಾಸಿಗಳು. ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ, ಅನೇಕ ಜನರು ಸ್ಥಳದಲ್ಲೇ ಸಾವನ್ನಪ್ಪಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ