ಇತ್ತೀಚೆಗಷ್ಟೇ ರೈಲು ಸಂಖ್ಯೆ ೧೨೬೧೯ ಮತ್ಸ್ಯಗಂಧ ಎಕ್ಸ್ ಪ್ರೆಸ್ ನ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸಂಭವನೀಯ ಭಾರೀ ಅನಾಹುತ ತಪ್ಪಿದ್ದು, ಪ್ರತಿ ಸಿಬ್ಬಂದಿ ಸದಸ್ಯರಿಗೆ 15,000 ರೂ. ನಗದು ಬಹುಮಾನ ನೀಡಿ ಪ್ರಶಂಸೆ ವ್ಯಕ್ತಪಡಿಸಲಾಯಿತು. ಬಾರ್ಕೂರು-ಉಡುಪಿ ವಿಭಾಗದ ನಡುವೆ ಬರುತ್ತಿದ್ದಾಗ ಲೊಕೊ ಪೈಲಟ್ ಮತ್ತು ಸಹಾಯಕ ಲೊಕೊ ಪೈಲಟ್ ಟ್ರ್ಯಾಕ್ಗೆ ಅಡ್ಡಲಾಗಿ ಬಿದ್ದಿದ್ದ ದೊಡ್ಡ ಮರವನ್ನು ಗಮನಿಸಿದರು. ಈ ವೇಳೆ ತುರ್ತು ಬ್ರೇಕ್ ಹಾಕಿ ರೈಲನ್ನು ಯಾವುದೇ ತೊಂದರೆಗಳಿಲ್ಲದೆ ಯಶಸ್ವಿಯಾಗಿ ನಿಲ್ಲಿಸಿದ್ದಾರೆ. ಒಹೆಚ್ಇ ತಂಡವು ಟ್ರ್ಯಾಕ್ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸಿದ ಬಳಿಕ ರೈಲು ತನ್ನ ಪ್ರಯಾಣವನ್ನು ಬೆಳೆಸಿತು.ದೊಡ್ಡ ಅನಾಹುತವನ್ನು ತಪ್ಪಿಸಿ, ಸಮಯಪ್ರಜ್ಞೆಯಿಂದ ನಿರ್ಣಾಯಕ ಕ್ರಮವನ್ನು ಕೈಗೊಂಡಿರುವ ಸಿಬ್ಬಂದಿಯನ್ನು ಗುರುತಿಸಿ, ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್ಸಿಎಲ್) ನ ಸಿಎಂಡಿ ಸಂತೋಷ್ ಕುಮಾರ್ ಝಾ ಅವರು ಪ್ರತಿ ಸಿಬ್ಬಂದಿ ಸದಸ್ಯರಿಗೆ 15,000 ರೂ. ನೀಡಿದರು.