ಮಂಗಳೂರು : ಮಂಗಳೂರು ಹೊರವಲಯದ ಸುರತ್ಕಲ್ ಜೋಕಟ್ಟೆಯಲ್ಲಿ ಭಾರೀ ಗಾಳಿ-ಮಳೆಗೆ ಮನೆ ಮೇಲೆ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಬಾಲಕ ಮೃತಪಟ್ಟ ಘಟನೆ ಗುರುವಾರ ಮುಂಜಾನೆ ನಡೆದಿದೆ. ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್ (17) ಮೃತ ಬಾಲಕ. ಕುಸಿದು ಬಿದ್ದ ಈ ಮನೆಗೆ ಬಾಲಕ ಶೈಲೇಶ್ ಅತಿಥಿಯಾಗಿ ಬಂದಿದ್ದ ಎನ್ನಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮಳೆ ಸಂಬಂದಿಸಿದ ಸಾವನಪ್ಪಿದವರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ. ಈ ಬಾರಿ ಮುಂಗಾರು ಮಳೆ ದಕ್ಷಿಣಕನ್ನಡದ ಸಂಕಷ್ಟ ತಂದಿದ್ದು, ಮಳೆಯಿಂದಾಗಿ ಅತೀ ಹೆಚ್ಚು ಸಾವು ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಗಾಳಿ-ಮಳೆಯಾಗಿದ್ದು, ಕೆಲವೆಡೆ ನಷ್ಟ ಉಂಟಾಗಿದೆ. ಮಂಗಳೂರು ನಗರದಲ್ಲಿ ದಿನವಿಡೀ ಬಿಟ್ಟು ಬಿಟ್ಟು ಮಳೆಯಾಗಿದೆ. ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜುಲೈ 25ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಜುಲೈ 26, 27ರಂದು ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.