ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಹಲವು ಅತ್ಯುತ್ತಮ ಹಾಡುಗಳನ್ನು ಹಾಡಿರುವ ಗಾಯಕ ಜುಬೀನ್ ಗರ್ಗ್ ಸಿಂಗಪುರದಲ್ಲಿ ನಡೆದ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ (ಆಳ ಸಮುದ್ರದಲ್ಲಿ ಈಜಾಟ) ಸಾಹಸ ಮಾಡುವಾಗ ಜುಬೀನ್ ಗರ್ಗ್ ನಿಧನ ಹೊಂದಿದ್ದಾರೆ ಎನ್ನಲಾಗಿದೆ. ಸಿಂಗಪುರದ ಸ್ಥಳೀಯ ಪೊಲೀಸರ ವರದಿಯಂತೆ ಜುಬೀನ್ ಗರ್ಗ್ ಅವರನ್ನು ನದಿಯೊಂದರಿಂದ ಹೊರಗೆ ತೆಗೆಯಲಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಂತೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಜುಬೀನ್ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ. ಮೂಲದವರಾದ ಜುಬೀನ್ ಗರ್ಗ್ ಅವರು ಅಸ್ಸಾಮಿ ಸಿನಿಮಾಗಳ ಖ್ಯಾತ ನಟ ಆಗಿದ್ದರು. ಮಾತ್ರವಲ್ಲದೆ ಹಲವಾರು ಹಿಂದಿ, ಬೆಂಗಾಲಿ, ಅಸ್ಸಾಮಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ, ಒಡಿಯಾ, ಬೋಡೊ, ಕರ್ಬಿ, ತಿವಾ, ನೇಪಾಳಿ, ಭೋಜ್ಪುರಿ, ಭಿಷ್ಣುಪ್ರಿಯ ಮಣಿಪುರಿ ಇನ್ನೂ ಕೆಲವು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದರು. ಎಆರ್ ರೆಹಮಾನ್ ಸೇರಿದಂತೆ ಇನ್ನೂ ಕೆಲವು ಅತ್ಯುತ್ತಮ ಸಂಗೀತ ನಿರ್ದೇಶಕರುಗಳ ಮೆಚ್ಚಿನ ಗಾಯಕರಾಗಿದ್ದರು ಜುಬೀನ್ ಗರ್ಗ್. ಕನ್ನಡದಲ್ಲಿ ಗಣೇಶ್ ನಟಿಸಿರುವ ‘ಹುಡುಗಾಟ’ ಸಿನಿಮಾದ ‘ಒಮ್ಮೊಮ್ಮೆ ಹೀಗೂ’, ‘ಮಹಾರುದ್ರ’ ಸಿನಿಮಾದ ‘ಅಮ್ಮಾ ನೀನು’, ‘ಪರಿಚಯ’ ಸಿನಿಮಾದ ಹಾಡುಗಳನ್ನು ಜುಬೀನ್ ಗರ್ಗ್ ಹಾಡಿದ್ದಾರೆ. ಹಿಂದಿಯಲ್ಲಿ ‘ದಿಲ್ ಸೇ’ , ‘ಗ್ಯಾಂಗ್ಸ್ಟರ್’, ‘ಅಶೋಕಾ’, ‘ಕ್ರಿಶ್’,‘ಆನ್’, ಇನ್ನೂ ಹಲವಾರು ಜನಪ್ರಿಯ ಸಿನಿಮಾಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ‘ಗ್ಯಾಂಗ್ಸ್ಟರ್’ ಸಿನಿಮಾದ ‘ಯಾ ಆಲಿ’ ಹಾಡು ಭಾರಿ ದೊಡ್ಡ ಹಿಟ್ ಆಗಿತ್ತು, ‘ದಿಲ್ ಸೇ’ ಸಿನಿಮಾದ ‘ಪಾಕಿ ಪಾಕಿ ಪರದೇಸಿ’ ‘ಕಾಂಟೆ’ ಸಿನಿಮಾದ ‘ಮಾಹಿ ವೇ’ ಇನ್ನೂ ಹಲವಾರು ಹಾಡುಗಳನ್ನು ಜುಬೀನ್ ಗರ್ಗ್ ಹಾಡಿದ್ದರು. ಬಹುಮುಖ ಪ್ರತಿಭೆ ಹೊಂದಿದ್ದ ಜುಬೀನ್ ಗಾಯಕರಾಗಿ ಮಾತ್ರವೇ ಅಲ್ಲದೆ ಅಸ್ಸಾಮಿ ಭಾಷೆಯ ಹಲವಾರು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದಾರೆ. ಜೊತೆಗೆ ಸಂಗೀತ ನಿರ್ದೇಶನ, ಗೀತ ರಚನೆ, ಚಿತ್ರಕತೆ ರಚನೆ, ಸಿನಿಮಾ ನಿರ್ಮಾಣಗಳನ್ನು ಸಹ ಜುಬೀನ್ ಗರ್ಗ್ ಮಾಡಿದ್ದಾರೆ. ಇದೀಗ ಖ್ಯಾತ ಗಾಯಕನ ನಿಧನಕ್ಕೆ ಹಲವಾರು ಸಂಗೀತಗಾರರು, ಸಂಗೀತ ನಿರ್ದೇಶಕರುಗಳು ಕಂಬನಿ ಮಿಡಿದಿದ್ದಾರೆ. ಸಿನಿಮಾ ನಟರುಗಳು ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *