ದೇವದ ಶಕ್ತಿ, ಮಹಿಳೆ, ದೈವದೊಂದಿಗೆ ಕರಾವಳಿ, ಮಲೆನಾಡಿನ ಜನರಿಗಿರುವ ಸಂಬಂಧ, ಭಕ್ತಿಯನ್ನು ಎತ್ತಿ ತೋರಿಸುವ ಸಿನಿಮಾ ‘ಕಾಂತಾರ’ ಮತ್ತು ಈಗ ಬಿಡುಗಡೆ ಆಗಿರುವ ‘ಕಾಂತಾರ: ಚಾಪ್ಟರ್ 1’. ಎರಡೂ ಸಿನಿಮಾಗಳನ್ನು ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದಾರೆ. ನಿರ್ಮಾಣ ಮಾಡಿರುವುದು ಹೊಂಬಾಳೆ ಫಿಲಮ್ಸ್.

ಆದರೆ ‘ಕಾಂತಾರ’ ಸಿನಿಮಾಗಳ ಬಗ್ಗೆ ಕೆಲ ದೈವಾರಾಧಕರು ಅಸಮಾಧಾನ ವ್ಯಕ್ತಪಡಿಸಿದ್ದು, ಇಂದು ದೈವದ ಮುಂದೆಯೇ ಈ ಬಗ್ಗೆ ದೂರು ಹೇಳಿದ್ದಾರೆ.

ಕಾಂತಾರ ಸಿನಿಮಾದ ಮೂಲಕ ದೈವಾರಾಧನೆಗೆ ಅಪಚಾರ ಮಾಡಲಾಗಿದೆ ಎಂದು ಪಿಲಿಚಂಡಿ, ಬಲವಂಡಿ ದೈವದ ಮೊರೆ ಹೋದ ದೈವ ನರ್ತಕರು, ದೈವಾರಾಧಕರು ಅಸಮಾಧಾನ ವ್ಯಕ್ತಪಡಿಸಿದ್ದು, ಮಂಗಳೂರು ಹೊರವಲಯದ ಬಜಪೆ ಸಮೀಪದ ‌ಶ್ರೀ ಕ್ಷೇತ್ರ ಪೆರಾರ, ಬ್ರಹ್ಮದೇವರು,ಇಷ್ಟ ದೇವತಾ ಬಲವಂಡಿ, ಪಿಲಿಚಂಡಿ ದೈವಸ್ಥಾನ, ಬಲವಂಡಿ, ಪಿಲಿಚಂಡಿ ದೈವದ ಮುಂದೆ ದೈವಾರಾಧನೆಯ ಅಪಹಾಸ್ಯದ ವಿರುದ್ಧ ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ. ಸಿನಿಮಾದಲ್ಲಿ ದೈವಾರಾಧನೆ ಬಳಕೆ ಬಗ್ಗೆ ದೂರು ಹೇಳಿದ್ದು, ದೈವದ ಆವೇಶವನ್ನು ಅನುಕರಣೆ ಮಾಡುತ್ತಿರುವ ಬಗ್ಗೆ ದೈವರಾಧಕರ ಬೇಸರ ವ್ಯಕ್ತಪಡಿಸಿದ್ದಾರೆ.

ಈ ವೇಳೆ ದೈವವು ನುಡಿದಿದ್ದು, ‘ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನಾನು ನೋಡಿಕೊಳ್ಳುತ್ತೇನೆ. ಹಣವೆಲ್ಲ‌ ಆಸ್ಪತ್ರೆ ಸೇರುವಂತೆ ಮಾಡುತ್ತೇನೆ. ಅಪಚಾರ ಮಾಡುವವರಿಗೆ ನಾನು ಬುದ್ದಿ ಕಲಿಸುತ್ತೇನೆ. ಇನ್ಮುಂದೆ ಎಲ್ಲಾ ದೈವಸ್ಥಾನಗಳಲ್ಲಿ ಚಿತ್ರೀಕರಣ ನಿಲ್ಲಿಸಿ. ನೀವು ಹೋರಾಟವನ್ನು ಮುಂದುವರಿಸಿ. ನಾನು ನಿಮ್ಮ ಬೆನ್ನ ಹಿಂದೆ ಇದ್ದೇನೆ’ ಎಂದಿದೆ.

ಕಾಂತಾರ’ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಸಿನಿಮಾ ನೋಡಿದ ಕೆಲವರು ದೈವದ ಅನುಕರಣೆ ಮಾಡುತ್ತಿದ್ದಾರೆ. ಅಸಲಿಗೆ 2022 ರಲ್ಲಿ ಮೊದಲ ‘ಕಾಂತಾರ’ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಇದನ್ನು ರಿಷಬ್ ಶೆಟ್ಟಿ, ಹೊಂಬಾಳೆ ವಿರೋಧಿಸುತ್ತಲೇ ಬಂದಿದೆ. ಇತ್ತೀಚೆಗೆ ಸಹ ಪೋಸ್ಟ್ ಹಂಚಿಕೊಂಡಿದ್ದ ಹೊಂಬಾಳೆ ಫಿಲಮ್ಸ್, ದೈವದ ಅನುಕರಣೆ ಮಾಡುವುದು ಬೇಡ ಎಂದು ಮನವಿ ಮಾಡಿತ್ತು. ಆದರೂ ಅದು ಮುಂದುವರೆದಿದೆ. ಇದು ದೈವಾರಾಧಕರಿಗೆ, ದೈವ ನರ್ತಕರಿಗೆ ಬೇಸರ ಮೂಡಿಸಿದೆ.

ಅಲ್ಲದೆ ಕೆಲವು ದೈವನರ್ತಕರು, ದೈವಾರಾಧಕರು ರಿಷಬ್ ಶೆಟ್ಟಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೈವದ ಬಗ್ಗೆ ಸಿನಿಮಾ ಮಾಡಬಾರದಿತ್ತು, ದೈವವನ್ನು, ದೈವ ನರ್ತನವನ್ನು ಭಕ್ತಿಯಿಂದ ನೋಡಬೇಕು, ಆದರೆ ಸಿನಿಮಾ ಮಾಡುವ ಮೂಲಕ ಉದ್ಯಮದ ದೃಷ್ಟಿಯಿಂದ ನೋಡಲಾಗಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಣ ಮಾಡಲು ದೈವವನ್ನು ಬಳಸಿಕೊಂಡಿದ್ದಾರೆ ಎಂದು ಕೆಲವರು ಟೀಕೆ ಮಾಡಿದ್ದಾರೆ.

Source : tv9

Leave a Reply

Your email address will not be published. Required fields are marked *