ಟ್ಟಿಂಗ್ ಆ್ಯಪ್ ಪ್ರಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಕ್ಕು ವಿಲವಿಲ ಎಂದು ಒದ್ದಾಡುತ್ತಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಶಿಖರ್ ಧವನ್ ಹಾಗೂ ಸುರೇಶ್ ರೈನಾಗೆ ಜಾರಿ ನಿರ್ದೇಶನಾಲಯ ಮತ್ತೊಂದು ಆಘಾತ ನೀಡಿದೆ. ಈ ಇಬ್ಬರು ಕ್ರಿಕೆಟಿಗರಿಗೆ ಸೇರಿರುವ ಒಟ್ಟು 11.14 ಕೋಟಿ ರೂ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ತಾತ್ಕಾಲಿಕವಾಗಿ 2002 ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ.
ಮುಟ್ಟುಗೋಲು ಹಾಕಿಕೊಂಡಿರುವ 11.14 ಕೋಟಿ ರೂ ಮೊತ್ತದಲ್ಲಿ ಸುರೇಶ್ ರೈನಾ ಅವರ ಹೆಸರಿನಲ್ಲಿರುವ 6.64 ಕೋಟಿ ರೂ. ಮೌಲ್ಯದ ಮ್ಯೂಚುವಲ್ ಫಂಡ್ ಹೂಡಿಕೆಗಳು ಮತ್ತು ಶಿಖರ್ ಧವನ್ ಅವರ ಹೆಸರಿನಲ್ಲಿರುವ 4.5 ಕೋಟಿ ರೂ ಮೌಲ್ಯದ ಸ್ಥಿರ ಆಸ್ತಿ ಸೇರಿವೆ.
ಶಿಖರ್ ಧವ್ನ ಹಾಗೂ ಸುರೇಶ್ ರೈನಾ ಇಬ್ಬರೂ ವಿದೇಶಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಕ್ರಮ ಬೆಟ್ಟಿಂಗ್ ಪ್ಲಾಟ್ಫಾರ್ಮ್ 1xBet ಅನ್ನು ಪ್ರಚಾರ ಮಾಡಿದ್ದಾರೆ ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ. ಹಾಗೆಯೇ ಇವರಿಬ್ಬರು 1xBet ಮತ್ತು ಅದರ ಅಂಗಸಂಸ್ಥೆಗಳನ್ನು ಉತ್ತೇಜಿಸಲು ವಿದೇಶಿ ಸಂಸ್ಥೆಗಳೊಂದಿಗೆ ಗೊತ್ತಿದ್ದೂ ಜಾಹೀರಾತು ಒಪ್ಪಂದಗಳನ್ನು ಮಾಡಿಕೊಂಡಿರುವುದು ಖಚಿತವಾಗಿದೆ. ಹೀಗಾಗಿ ಇವರಿಬ್ಬರ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.




