ಭರವಸೆ ಈಡೇರಿಸದ ನಗರಾಡಳಿತದ ವಿರುದ್ಧ ಆಕ್ರೋಶ

ಜಯನಗರ: ಇಲ್ಲಿನ ಮುಖ್ಯರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು ಪ್ರಯಾಣಿಕರಿಗೆ  ಕಷ್ಟಕರ ಆಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪತ್ರಕರ್ತ ನಿವಾಸಿಗಳು ರಸ್ತೆಗಿಳಿದು ಪ್ರತಿಭಟನೆ ಮಾಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನ. 20 ರಂದು ಜಯನಗರ ದಲ್ಲಿ ನಡೆಯಿತು.

ಹಳೆಗೇಟಿನಿಂದ ಜಯನಗರ ಕುದ್ಪಾಜೆ ಯವರೆಗೆ ಅಲ್ಲಲ್ಲಿ ರಸ್ತೆಗಳಲ್ಲಿ ಗುಂಡಿ ಆವರಿಸಿ ಸಾರ್ವಜನಿಕರಿಗೆ ವಾಹನಗಳಲ್ಲಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಸ್ಥಳೀಯ ನಿವಾಸಿಗಳು ಅನೇಕ ಬಾರಿ ಹೋರಾಟಗಳನ್ನು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಗಳನ್ನು ನೀಡಿದ್ದು, ಈ ವಿಷಯಗಳನ್ನು ಪತ್ರಿಕೆಯ ಮೂಲಕ ಈ ಭಾಗದ ವರದಿಗಾರರು ಪ್ರಕಟಿಸಿ ಅಧಿಕಾರಿಗಳ ಗಮನಕ್ಕೆ ತಂದರು ಇದುವರೆಗೆ ಯಾವುದೇ ಸ್ಪಂದನೆಗಳು ಸಿಗಲಿಲ್ಲ.

ಈ ಹಿನ್ನೆಲೆಯಲ್ಲಿ ಸ್ಥಳೀಯ ಪತ್ರಕರ್ತರಾದ ಹಸೈನಾರ್ ಜಯನಗರ, ಕರ್ನಾಟಕ ಜರ್ನಿಸ್ಟ್ ಯೂನಿಯನ್ ನ ಅಧ್ಯಕ್ಷರಾದ ಕೊಂಯಿಗೋಡಿ ನಿವಾಸಿ ಶ್ರೀಮತಿ ಜಯಶ್ರೀ ಕೊಯಿಂಗೋಡಿ ಜಯನಗರ ಮಿಲಿಟರಿ ಗ್ರೌಂಡ್ ನಿವಾಸಿ ಶ್ರೀಮತಿ ರೇಖಾ, ಸುಳ್ಯ ಪ್ರೆಸ್ ಕ್ಲಬ್ಬಿನ ಅಧ್ಯಕ್ಷರು ಜಟ್ಟಿಪಳ್ಳ ನಿವಾಸಿ ಹಾಗೂ ಜಯನಗರದಲ್ಲಿ ನಿವೇಶನ ಹೊಂದಿರುವ ಶರೀಫ್ ಜಟ್ಟಿಪಳ್ಳ ಇವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಗರ ಪಂಚಾಯತ್ ಮುಖ್ಯ ಅಧಿಕಾರಿ ಬಸವರಾಜ್ ರವರು ರಸ್ತೆ ಅಭಿವೃದ್ಧಿ ಮಾಡುವ ಭರವಸೆಯನ್ನು ಪ್ರತಿಭಟನಾ ಕಾರರಿಗೆ ನೀಡಿದರು.
ಆದರೆ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಈ ರೀತಿಯ ಭರವಸೆಗಳನ್ನು ಅನೇಕ ಬಾರಿ ನೀವು ಇಲ್ಲಿ ಹೇಳಿ ಹೋಗಿರುತ್ತೀರಿ. ಆದರೆ ಯಾವುದನ್ನು ಕೂಡ ಕಾರ್ಯಗತ ಮಾಡಲಿಲ್ಲ. ಆದ್ದರಿಂದ ನೀವು ನಾಳೆನೇ ರಸ್ತೆ ದುರಸ್ಥಿಕರಣಕ್ಕೆ ಕಾಮಗಾರಿ ಆರಂಭಿಸಬೇಕೆಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಮುಖ್ಯ ಅಧಿಕಾರಿಗಳು ಪತ್ರಕರ್ತರನ್ನು ಸಮಾಧಾನಪಡಿಸಿ ಒಂದು ವಾರದಲ್ಲಿ ಕೆಲಸ ಆರಂಭಿಸುವ ಭರವಸೆಯನ್ನು ನೀಡಿದರು.
ಇದಕ್ಕೆ ಒಪ್ಪಿದ ಪತ್ರಕರ್ತರು ತಾವು ಹೇಳಿದಂತೆ ಒಂದು ವಾರದಲ್ಲಿ ಕೆಲಸ ಆರಂಭಿಸದಿದ್ದಲ್ಲಿ ಮುಂದಿನ ಗುರುವಾರ ನಗರ ಪಂಚಾಯತ್ ಆವರಣದಲ್ಲಿ ಬಂದು ಕುಳಿತು ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡಿ ಪ್ರತಿಭಟನೆಯನ್ನು ಹಿಂಪಡೆದುಕೊಂಡರು.
ಪ್ರತಿಭಟನಾ ಸ್ಥಳಕ್ಕೆ ಸುಳ್ಯದ ಸುದ್ದಿ ಪತ್ರಿಕೆಯ ಹಿರಿಯ ವರದಿಗಾರರಾದ ಹರೀಶ್ ಬಂಟ್ವಾಳ್,ದುರ್ಗಾ ಕುಮಾರ್ ನಾಯಕೆರೆ, ಪ್ರಸ್ ಕ್ಲಬ್ ಸದಸ್ಯರಾದ ಗಂಗಾಧರ ಕಲ್ಲಪಳ್ಳಿ, ಶಿವಪ್ರಸಾದ್ ಕೇರ್ಪಳ ಇವರುಗಳು ಭೇಟಿ ನೀಡಿದರು.

Leave a Reply

Your email address will not be published. Required fields are marked *