ಸೌದಿ ಅರೇಬಿಯಾ: ಇಬ್ಬರು ಸಹೋದರರು ತಮ್ಮ ವೃದ್ಧ ತಾಯಿಯ ಆರೈಕೆಯ ಹಕ್ಕಿಗಾಗಿ ನ್ಯಾಯಾಲಯದ ಮೊರೆ ಹೋದ ಅಪರೂಪದ ಘಟನೆ ವರದಿಯಾಗಿದೆ.
ಹಿಜಾಮಿ ಅಲ್ ಘಮ್ದಿ ಎಂಬ ವ್ಯಕ್ತಿ ತನ್ನ ತಮ್ಮನ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಈ ಅಣ್ಣ ತಮ್ಮಂದಿರ ನಡುವಿನ ವಾದ-ವಿವಾದ ತಂದೆ-ತಾಯಿಯ ಸಂಪತ್ತು, ಚಿನ್ನ, ಅಥವಾ ಸೊತ್ತಿಗೆ ಬೇಕಾಗಿ ಅಲ್ಲ…!! ಬದಲಾಗಿ ತಮ್ಮನ್ನು ಸಾಕಿ ಸಲಹಿದ ತಾಯಿಯ ಆರೈಕೆಯನ್ನು ನಾನು ಮಾಡುತ್ತೇನೆ, ನನಗೆ ಬಿಟ್ಟುಕೊಡಿ ಎಂದಾಗಿತ್ತು ಈರ್ವರ ವಾದ. ಇಲ್ಲಿ ತನಕ ಹಿರಿಯ ಮಗ ತನ್ನ ತಾಯಿಯನ್ನು ನೋಡಿಕೊಳ್ಳುತ್ತಿದ್ದನು. ಇದಕ್ಕಾಗಿ ಮದುವೆ ಕೂಡಾ ಆಗದೆ, ಕೆಲಸಕ್ಕೂ ಕೂಡ ಹೋಗದೆ ತಾಯಿಯ ಶುಶ್ರೂಷೆ ಮಾಡುತ್ತಿದ್ದರು, ಇದರಲ್ಲಿಯೇ ಸಂತೋಷ ಸಮಾಧಾನ ಅನುಭವಿಸುತ್ತಿದ್ದ ಹಿರಿಯ ಮಗ. ಇದೀಗ ಆಕೆಯ ಆರೈಕೆ ನನಗೆ ಬೇಕೆಂದು ತಮ್ಮ ಕೂಡಾ ಹೇಳಿ, ಕೇಸ್ ಕೋರ್ಟ್ ಮೆಟ್ಟಿಲೇರಿದೆ.
ಹೀಗಿತ್ತು ಕೋರ್ಟಿನಲ್ಲಿನ ನಡೆದ ಘಟನೆ:
ಹಿರಿಯ ಮಗ (ಅಣ್ಣ) “ನನ್ನ ತಾಯಿಯನ್ನು, ನಾನೇ ನೋಡಿಕೊಳ್ಳುತ್ತೇನೆ, ತಾಯಿಯ ಸೇವೆ ಮುಂದುವರಿಸಲು ನನಗೆ ಅವಕಾಶ ನೀಡಿ, ಎಂದು ಹಿಜಾಮ್ ಬಲವಾಗಿ ವಾದಿಸಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ತಮ್ಮ “ಅಣ್ಣನಿಗೆ ವಯಸ್ಸಾಗಿದೆ. ತಾಯಿಯನ್ನು ಕಾಳಜಿಯಿಂದ ಆರೈಕೆ ಮಾಡುವ ಶಕ್ತಿಯಿಲ್ಲ. ತಾಯಿಯ ಹೊಣೆಯನ್ನು ನನಗೆ ನೀಡಿ” ಎನ್ನುವುದಾಗಿತ್ತು.
ಇಬ್ಬರೂ ಸಹೋದರರು ನ್ಯಾಯಾಧೀಶರ ಮುಂದೆ ತಮ್ಮ ತಾಯಿಯನ್ನು ನೋಡಿಕೊಳ್ಳುವುದಕ್ಕಾಗಿ ಅಂಗಲಾಚಿ ಕೋರಿದಾಗ ನ್ಯಾಯಾಲಯವು ಭಾವುಕವಾಯಿತು. ಇದರಿಂದ ತೀರ್ಪು ನೀಡುವುದು ನ್ಯಾಯಾಧೀಶರಿಗೆ ಕಷ್ಟಕರವಾಯಿತು. ಕೊನೆಗೆ ಆಯ್ಕೆಯ ಹಕ್ಕನ್ನು ನ್ಯಾಯಾಧೀಶರು ಆ ವೃದ್ಧ ತಾಯಿಗೆ ಬಿಟ್ಟರು.
ಆಕೆಯ ಉತ್ತರಕ್ಕಾಗಿ, ಎಲ್ಲರೂ ಕಾತುಕುಳಿತ್ತಿದ್ದರು. ಉತ್ತರ ಕೇಳಿ ಎಲ್ಲರ ಮನ ತಟ್ಟಿತು. “ನನ್ನ ಇಬ್ಬರು ಪುತ್ರರು ನನ್ನ ಎಡ ಮತ್ತು ಬಲ ಕಣ್ಣುಗಳಂತೆ, ಆದರಿಂದ ಆಯ್ಕೆ ಮಾಡಲು ನನ್ನಿಂದ ಸಾಧ್ಯವಿಲ್ಲ” ಎಂದು ತಾಯಿ ತಿಳಿಸಿದರು. ತಾಯಿ ನಿರ್ಧರಿಸಲು ಸಾಧ್ಯವಾಗದ ಕಾರಣ, ಕೊನೆಗೆ ನ್ಯಾಯಾಧೀಶರೇ ತೀರ್ಪು ನೀಡಬೇಕಾಯಿತು.
ವಯಸ್ಸಿನಲ್ಲಿ ಸಣ್ಣವನೂ, ಶಕ್ತಿವಂತನೂ ತಮ್ಮ ಆಗಿದ್ದರಿಂದ ತಾಯಿಯ ಆರೈಕೆ ಜವಬ್ದಾರಿ ಕಿರಿಯ ಮಗನಿಗೆ ನೀಡಿದರು. ತೀರ್ಪು ಕೇಳಿದ್ದೆ ತಡ ಹಿರಿಯ ಸೋದರ ಹಿಜಾಮ್, ತಾಯಿಯ ಸೇವೆಯ ಅವಕಾಶ ಕಳೆದು ಕೊಂಡದ್ದಕ್ಕಾಗಿ ನ್ಯಾಯಾಧೀಶರ ಮುಂದೆಯೇ ಗಳಗಳನೇ ಅಳ ತೊಡಗಿದರು. ಈ ಕ್ಷಣ ನೋಡಿದ ಇಡೀ ನ್ಯಾಯಾಲಯವೇ ಕಣ್ಣೀರಿನಿಂದ ಭಾವುಕವಾಯಿತು. ಇದು ನಿಜವಾಗಿಯೂ ಸ್ವಲ್ಪ ಹಳೆಯ ಕಥೆ, ಕೆಲ ದಿನಗಳಿಂದೀಚೆಗೆ ವೈರಲ್ ಆಗುತ್ತಿದೆ.
