ನಿವೃತ್ತ ಉಪನ್ಯಾಸಕ ವೃಂದ, ಸಿಬ್ಬಂದಿಗಳು ಮತ್ತು ಗಣ್ಯರು ಭಾಗಿ
ಎನ್.ಎಂ.ಸಿ, ಸುಳ್ಯ: ಕೆವಿಜಿ ಸಮೂಹ ಸಂಸ್ಥೆಗಳ ಮಾತೃ ಸಂಸ್ಥೆ ದಿವಂಗತ ಕುರುಂಜಿ ವೆಂಕಟರಮಣ ಗೌಡರು ಸ್ಥಾಪಿಸಿದ ನೆಹರು ಮೆಮೋರಿಯಲ್ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಐದು ದಶಕಗಳ ಸಾಧನೆ, ಸೇವೆ ಮತ್ತು ಊರಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಸುಳ್ಯದ ಬೆಳವಣಿಗೆಗೆ ಕಾರಣವಾಗಿರುವ ಹಿರಿಯ ವಿದ್ಯಾಸಂಸ್ಥೆ. 1976 ರಲ್ಲಿ ಸ್ಥಾಪನೆಯಾಗಿ ಈ ಶೈಕ್ಷಣಿಕ ವರ್ಷದಲ್ಲಿ 50 ವರ್ಷಗಳನ್ನು ಪೂರೈಸುವ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಸುವರ್ಣ ಮಹೋತ್ಸವವನ್ನು ಆಚರಿಸುವ ದೃಷ್ಟಿಯಿಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ (ರಿ.) ವತಿಯಿಂದ ಪೂರ್ವಭಾವಿ ಸಭೆ ಡಿಸೆಂಬರ್ 20, ಶನಿವಾರದಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷ ಡಾ. ಕೆ.ವಿ. ಚಿದಾನಂದರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನೆಹರು ಮೆಮೋರಿಯಲ್ ಕಾಲೇಜು ಗ್ರಾಮೀಣ ಪ್ರದೇಶದಲ್ಲಿ ಉನ್ನತ ಶಿಕ್ಷಣದ ದೀಪವಾಗಿ ಬೆಳಗಿದ ರೀತಿಯನ್ನು ತಿಳಿಸಿ ಸಂಸ್ಥೆಯನ್ನು ಬೆಳೆಸಿದ ಗುರುಗಳು, ಸಿಬ್ಬಂದಿ ಹಾಗೂ ಹಿರಿಯ ವಿದ್ಯಾರ್ಥಿಗಳ ಕೊಡುಗೆಗಳನ್ನು ಗೌರವ ಪೂರ್ವಕವಾಗಿ ಸ್ಮರಿಸಿದರು. ಸುವರ್ಣ ಮಹೋತ್ಸವವು ಹಿಂದಿನ ಸಾಧನೆಗಳ ಸಂಭ್ರಮ ಮಾತ್ರವಲ್ಲದೆ ಭವಿಷ್ಯದ ದೃಷ್ಟಿಕೋನವನ್ನು ರೂಪಿಸುವ ಅವಕಾಶವಾಗಬೇಕೆಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಸೇವೆ ಸಲ್ಲಿಸಿದ ನಿವೃತ್ತ ಅಧ್ಯಾಪಕರು, ಸಿಬ್ಬಂದಿ ವರ್ಗ, ಕಾಲೇಜಿನ ಹಿತೈಷಿಗಳು ಹಾಗೂ ಊರಿನ ಗಣ್ಯರು ತಮ್ಮ ಅಭಿಪ್ರಾಯಗಳು, ಸಲಹೆ ಸೂಚನೆಗಳನ್ನು ಹಂಚಿಕೊಂಡರು. ಸುವರ್ಣ ಮಹೋತ್ಸವವನ್ನು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಚಟುವಟಿಕೆಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲು, ಸುವರ್ಣ ಮಹೋತ್ಸವದ ಪ್ರಯುಕ್ತ ಮುಂದಿನ ಕಾರ್ಯ ಯೋಜನೆಗಳ ಕುರಿತು ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ. ಕೆ.ಟಿ. ವಿಶ್ವನಾಥರವರು ಎಲ್ಲ ಹಿರಿಯ ವಿದ್ಯಾರ್ಥಿಗಳ ಸಹಕಾರವನ್ನು ಕೋರಿದರು. ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ. ಅವರು ಸ್ವಾಗತ ನುಡಿಗಳನ್ನು ಸಲ್ಲಿಸಿ, ಕಾಲೇಜಿನ ಸುವರ್ಣ ಮಹೋತ್ಸವದ ಉದ್ದೇಶ, ಮಹತ್ವ ಕುರಿತು ತಿಳಿಸಿದರು. ಸುವರ್ಣ ಮಹೋತ್ಸವವನ್ನು ಕೇವಲ ಆಚರಣೆಯಾಗಿ ಅಲ್ಲದೆ, ಸಂಸ್ಥೆಯ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಹಿರಿಮೆಯನ್ನು ಪ್ರತಿಬಿಂಬಿಸುವ ಮಹತ್ವದ ಸಂದರ್ಭವಾಗಿ ರೂಪಿಸುವ ಆಶಯವನ್ನು ವ್ಯಕ್ತಪಡಿಸಿದರು.
ಕಾಲೇಜಿನ ಸಸ್ಯಶಾಸ್ತ್ರ ಉಪನ್ಯಾಸಕಿ ಕೃತಿಕ ಅಶೋಕ್ ಬೊಳುಗಲ್ಲು ಪ್ರಾರ್ಥಿಸಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಿಥಾಲಿ ಪಿ ರೈ ವಂದಿಸಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕುಲದೀಪ್ ಪೆಲ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎಲ್ಲ ಉಪನ್ಯಾಸಕ ಉಪನ್ಯಾಸಕೇತರ ವೃಂದದವರು ಸಹಕರಿಸಿದರು.
