ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಜೀವಶಾಸ್ತ್ರ ವಿಭಾಗಗಳಾದ ಸಸ್ಯಶಾಸ್ತ್ರ (Botany), ಪ್ರಾಣಿಶಾಸ್ತ್ರ (Zoology) ಹಾಗೂ ರಸಾಯನಶಾಸ್ತ್ರ (Chemistry) ವಿಭಾಗಗಳು ಹಾಗೂ ಪ್ರಕೃತಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ 2025ರ ಡಿಸೆಂಬರ್ 16 ಮತ್ತು 17ರಂದು ಕೊಲ್ಲಮೊಗ್ರ ಗ್ರಾಮದ ಬಂಬಿಲ ಮನೆಯಲ್ಲಿ ಎರಡು ದಿನಗಳ ಪ್ರಕೃತಿ ಶಿಬಿರ ಮತ್ತು ಮಾಯಿಲ ಕೋಟೆ ಟ್ರೆಕ್ಕಿಂಗ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಶಿಬಿರವನ್ನು ಕೊಲ್ಲಮೊಗ್ರ ಗ್ರಾಮದ ಬಂಬಿಲ ದುರ್ಗಾದಾಸ್ ರವರ ಕೃಷಿ ಭೂಮಿಯಲ್ಲಿ ಏರ್ಪಡಿಸಿದ್ದು ಮೊದಲ ದಿನ ವಿದ್ಯಾರ್ಥಿಗಳು ಅಡಿಕೆ ತೋಟದ ಕೆಲಸ ಕಾರ್ಯಗಳಲ್ಲಿ ಭಾಗವಹಿಸಿ, ಕೃಷಿ ಜೀವನ ಕ್ರಮಗಳ ಬಗ್ಗೆ ಅನುಭವ, ಮಿಶ್ರ ಕೃಷಿ ಪದ್ಧತಿ, ನೀರಾವರಿ, ಗೊಬ್ಬರ ಪೂರೈಕೆ, ಬೆಳೆ ಸಂಬಂಧಿತ ರೋಗಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸಂಕಷ್ಟದಲ್ಲಿರುವ ಅಡಿಕೆ ಕೃಷಿಗೆ ಪರ್ಯಾಯವಾಗಿ ಹಣ್ಣಿನ ಬೆಳೆಗಳ ಬಗ್ಗೆ ಚರ್ಚಿಸಿ ಕೆಲವು ಹಣ್ಣಿನ ಗಿಡಗಳನ್ನು ನೆಡಲಾಯಿತು.
ಎರಡನೇ ದಿನ ಮಾಯಿಲ ಕೋಟೆ ಟ್ರೆಕ್ಕಿಂಗ್ ಮೂಲಕ ಅರಣ್ಯ ಪ್ರದೇಶದ ವಿವಿಧ ಪರಿಸರ ವ್ಯವಸ್ಥೆಗಳ ಅಧ್ಯಯನ ನಡೆಸಲಾಯಿತು. ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಡಾ. ದೀಪಕ್ ನಾಯ್ಕ್, ಸಂಶೋಧಕ ಹಾಗೂ ಸಹಾಯಕ ಪ್ರಾಧ್ಯಾಪಕರು, ಮಂಗಳೂರು ವಿಶ್ವವಿದ್ಯಾಲಯ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಅರಣ್ಯ ಪ್ರದೇಶದಲ್ಲಿ ಟ್ರೆಕ್ಕಿಂಗ್ ನಡೆಸಿ ಅರಣ್ಯ ಪರಿಸರ ವ್ಯವಸ್ಥೆ, ಸಸ್ಯ ವೈವಿಧ್ಯ, ಔಷಧೀಯ ಸಸ್ಯಗಳು, ಕಾಡುಜೀವಿಗಳ ವಾಸಸ್ಥಾನ ಹಾಗೂ ಜೀವ ವೈವಿಧ್ಯದ ಸಂರಕ್ಷಣೆಯ ಮಹತ್ವ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು. ಅರಣ್ಯ ವೀಕ್ಷಕರಾದ ಸಜ್ಜನ್, ಸ್ಥಳೀಯರಾದ ಯೋಗೀಶ್, ಲವಿತ್ ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳು ಪ್ರಕೃತಿಯೊಂದಿಗೆ ನೇರ ಸಂಪರ್ಕ ಸಾಧಿಸಿ ಕ್ಷೇತ್ರ ಅಧ್ಯಯನ ನಡೆಸಿದುದು ಶಿಬಿರದ ವಿಶೇಷ ಆಕರ್ಷಣೆಯಾಗಿತ್ತು. ಶಿಬಿರದ ಅವಧಿಯಲ್ಲಿ ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆಯ ನಿಯಂತ್ರಣ ಹಾಗೂ ಸರಳ ಜೀವನಶೈಲಿಯ ಅಗತ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
ಈ ಶಿಬಿರದ ನೇತೃತ್ವವನ್ನು ಎನ್ನೆಂಸಿ ನೇಚರ್ ಕ್ಲಬ್ ಸಂಚಾಲಕ ಕುಲದೀಪ್ ಪೆಲ್ತಡ್ಕ ಹಾಗೂ ಉಪನ್ಯಾಸಕರಾದ ಕೃತಿಕಾ ಕೆ ಜೆ, ಪಲ್ಲವಿ ಕೆ.ಎಸ್, ಜಿತೇಶ್ ಹೆಚ್ ಜಿ, ಅಭಿಜ್ಞಾ ಎ, ಭಾವನ ಕೆ ಎನ್ ವಹಿಸಿದ್ದರು. ಎಲ್ಲಾ ನೇಚರ್ ಕ್ಲಬ್ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.
