ಈ ಸೃಷ್ಟಿಯೇ ವಿಚಿತ್ರ!ಮಾನವನ ಊಹೆಗೂ ನಿಲುಕದ ಈ ಸೃಷ್ಟಿಯಯಲ್ಲಿ ಅದೆಷ್ಟೋ ಜೀವ ರಾಶಿಗಳಿವೆ.ಕಣ್ಣಿಗೆ ಕಾಣದಂತಹ ಸೂಕ್ಷ್ಮಾತಿ ಸೂಕ್ಷ್ಮ ಜೀವಿಗಳೂ ನಮ್ಮ ಸೃಷ್ಟಿಯಲ್ಲಿವೆ.ಅದರಲ್ಲೂ ಕೆಲವೊಂದು ಜೀವಿಗಳ ಸೃಷ್ಟಿ ವೈಶಿಷ್ಟ್ಯತೆ ನಮ್ಮಲ್ಲಿ ಬೆರಗು ಮೂಡಿಸುತ್ತದೆ.ಅಂತಹ ಹಲವಾರು ಸಣ್ಣ ಪುಟ್ಟ ಜೀವಿಗಳನ್ನು ನಾವು ಕಾಣಬಹುದು.ಅವುಗಳನ್ನೆಲ್ಲಾ ಕಣ್ತುಂಬಿಕೊಳ್ಳುವುದು ಕಣ್ಣಿಗೇ ಒಂದು ಹಬ್ಬ.ಅಂತಹಾ ಜೀವಿಗಳು ನಮಗೆ ಹೆಚ್ಚಾಗಿ ಕಾಣಸಿಗುವುದು ಹಳ್ಳಿಗಳಲ್ಲಿ.ಆದರೆ ಅಂತಹ ಅದೆಷ್ಟೋ ಜೀವಿಗಳು ಇಂದು ಕಣ್ಮರೆಯಾಗುತ್ತಿವೆ ಅಳಿವಿನ ಅಂಚಿನಲ್ಲಿವೆ! ಇಂತಹ ಅದೆಷ್ಟೋ ಜೀವಿಗಳು ಇಂದು ನಮಗೆ ಕಾಣ ಸಿಗುವುದೇ ಅಪರೂಪವಾಗಿವೆ.

ಇಂತಹದ್ದೇ ಒಂದು ಅಪರೂಪದ ಜೀವಿಯ ಬಗ್ಗೆ ಮಾತನಾಡೋಣ.ಇದೊಂದು ಸಣ್ಣ ಜೀವಿ ಸಾಮಾನ್ಯವಾಗಿ ಹಳ್ಳಿಯ ಜನಕ್ಕೆಲ್ಲಾ ಈ ಜೀವಿಯ ಪರಿಚಯ ಚೆನ್ನಾಗಿಯೇ ಇರುತ್ತದೆ , ಹಾಗು ಇದು ಹೆಚ್ಚಾಗಿ ಹಳ್ಳಿಗಳಲ್ಲೇ ಕಂಡು ಬರುತ್ತದೆ.ಈ ಸಣ್ಣ ಜೀವಿಯ ಹೆಸರು ‘ಇರುವೆ ಸಿಂಹ ‘ ಕೆಲವು ಕಡೆ ಈ ಜೀವಿಯನ್ನು ‘ಚಿಲಕ ಚಿರಣೆ’ಎಂದು ಕೂಡ ಕರೆಯುತ್ತಾರೆ.ಇಂಗ್ಲೀಷ್ ನಲ್ಲಿ ಈ ಜೀವಿಯನ್ನು ‘Doodle bug’ಎಂದು ಕರೆಯುತ್ತಾರೆ.ಎಲ್ಲರಿಗೂ ನೆನಪಿರಬಹುದು ಬಾಲ್ಯದಲ್ಲಿ ಈ ಜೀವಿಗಳ ಜೊತೆ ಆಟ ಆಡುತ್ತಿದ್ದದ್ದು. ಅವುಗಳನ್ನು ಮಣ್ಣಿನಿಂದ ಹೊರ ತೆಗೆದು ನಮ್ಮ ಕೈಯ ಮೇಲೆ ಹಾಕಿಕೊಂಡು ಇನ್ನೊಂದು ಬೆರಳಿನಿಂದ ಅದರ ಸುತ್ತ ವೃತ್ತಾಕಾರದಲ್ಲಿ ತಿರುಗಿಸಿದ ರೆ ಅದು ಕೂಡ ತಿರುಗುತ್ತದೆ.ಇದನ್ನೆಲ್ಲಾ ಬಾಲ್ಯದಲ್ಲಿ ಮಾಡಿದ ನೆನಪು ನಿಮಗೆಲ್ಲರಿಗೂ ಇರಬಹುದು. ಬೆಚ್ಚಗಿನ ಮಣ್ಣಿನಲ್ಲಿ ಶಂಕುವಿನ ಆಕಾರದ ಸಣ್ಣ ಗುಳಿಗಳನ್ನು ಮಾಡಿಕೊಂಡು ಈ ಜೀವಿಗಳು ವಾಸ ಮಾಡುತ್ತವೆ.

ಸಾಮಾನ್ಯವಾಗಿ ಡೂಡಲ್ ಬಗ್ ಎಂದು ಈ ಇರುವೆ ಸಿಂಹಗಳ ಲಾರ್ವಾ ಹಂತಕ್ಕೆ ಕರೆಯುವಂತಹದ್ದು.ಅಂದರೆ ಈ ಮರಿ ಇರುವೆ ಸಿಂಹಗಳನ್ನು ಕರೆಯುವಂತದ್ದು. ಇವುಗಳು ದೊಡ್ಡ ಮತ್ತು ಬಲವಾದ ದವಡೆಗಳನ್ನು ಹೊಂದಿರುತ್ತವೆ.ಈ ದೊಡ್ಡ ಮತ್ತು ಬಲವಾದ ದವಡೆಗಳು ಅವುಗಳಿಗೆ ಬೇಟೆಯಾಡಲು ಸಹಾಯ ಮಾಡುತ್ತವೆ.

ಇನ್ನು ಇವುಗಳ ಬೇಟೆಯಾಡುವ ಕ್ರಮಗಳ ಬಗ್ಗೆ ಹೇಳುವುದಾದರೆ ಇವುಗಳು ಮೃದುವಾದ ಮರಳು ಅಥವಾ ಮಣ್ಣಿನಲ್ಲಿ ಶಂಕುವಿನಾಕಾರದ ಗುಳಿಗಳನ್ನು ಮಾಡಿ ಅದರಲ್ಲಿ ಬೇಟೆಗಾಗಿ ಅಡಗಿ ಕುಳಿತಿರುತ್ತವೆ.ಚಿಟ್ಟೆಗಳು , ಚಿಕ್ಕ ಇರುವೆಗಳು ಈ ಗುಂಡಿಯೊಳಗೆ ಬಿದ್ದಾಗ ಅವುಗಳನ್ನು ಹಿಡಿದು ಇವುಗಳು ಆಹಾರವಾಗಿ ಸೇವಿಸುತ್ತಾರೆ. ಯಾವುದಾದರು ಇರುವೆ ಅಥವಾ ಸಣ್ಣ ಕೀಟ ಮರಳಿನ ಅಂಚಿಗೆ ಬಂದಾಗ‌ ಅದು ಜಾರುವ ಮರಳಿನಿಂದ ಜಾರಿ ಗುಂಡಿಯ ಮಧ್ಯಕ್ಕೆ ಬೀಳುತ್ತದೆ.ಇರುವೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಡೂಡಲ್ ಬಗ್ ತಲೆಯಿಂದ ಮರಳಿನ ಕಣಗಳನ್ನು ಎಸೆದು ಇರುವೆಯನ್ನು ಮತ್ತೆ ಕೆಳಗೆ ಜಾರಿಸುತ್ತವೆ.ಇದು ಅವುಗಳ ವಿಶೇಷ ಬೇಟೆಯ ತಂತ್ರ!

ಗುಂಡಿಯ ತಳದಲ್ಲಿರುವ ಡೂಡಲ್ ಬಗ್ ತನ್ನ ಬಲವಾದ ದವಡೆಗಳಿಂದ ಇರುವೆಗಳನ್ನು ಹಿಡಿದು ಅವುಗಳ ರಸವನ್ನು ಹೀರಿಕೊಳ್ಳುತ್ತವೆ! ತದ ನಂತರ ಇರುವೆಯ ಖಾಲಿ ದೇಹವನ್ನು ಹೊರಗೆ ಎಸೆದು ಮತ್ತೆ ಬೇಟೆಗೆ ಸಿದ್ದವಾಗುತ್ತವೆ.ಇದರ ಇನ್ನೊಂದು ವಿಶೇಷತೆ ಏನೆಂದರೆ ಇವುಗಳು ಸಾಮಾನ್ಯವಾಗಿ ಹಿಂಬದಿಯಿಂದ ಚಲಿಸುತ್ತವೆ.ಮತ್ತು ಇವುಗಳು ತುಂಬಾ ಸಹನ ಶೀಲ ಬೇಟೆಗಾರರಾಗಿರುತ್ತವೆ.ಇವುಗಳು ಘಂಟೆಗಳ ಕಾಲ ಮರಳಿನೊಳಗೆ ನಿಶ್ಚಲವಾಗಿ ಕಾಯಬಲ್ಲವು! ಹೀಗಾಗಿ ಅವುಗಳನ್ನು ಮರಳಿನ ಬೇಟೆಗಾರ ಎಂದು ಕರೆಯುತ್ತಾರೆ.

ಈ ಇರುವೆ ಸಿಂಹಗಳು ಹುಟ್ಟಿನಿಂದ ಸಾಯುವವರೆಗೆ ಒಂದೇ ರೀತಿ ಇರುವುದಿಲ್ಲ.ಅವುಗಳಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತವೆ.ವಯಸ್ಸಾದಂತೆ ಅವುಗಳು ರೂಪಾಂತರ ಗೊಂಡು ಹಾರುವ ಕೀಟಗಳಾಗುತ್ತವೆ!

ಇವುಗಳ ಜೀವಿತಾವಧಿ ಎರಡರಿಂದ ಮೂರು ವರ್ಷ.ಅಂದರೆ ಅವುಗಳು ಚಿಕ್ಕದಿರುವಾಗ ಲಾರ್ವಾ ಹಂತದಲ್ಲಿ ಮಣ್ಣಿನಲ್ಲಿ ಅಡಗಿ ಕುಳಿತು ಬೇಟೆ ಮಾಡುವಂತದ್ದು.ಆದರೆ ರೂಪಾಂತರ ಗೊಂಡ ನಂತರ ಅದ್ಯಾವುದೂ ಸಾಧ್ಯವಿಲ್ಲ. ಅಂದರೆ ರೂಪಾಂತರ ಗೊಂಡ ವಯಸ್ಕ ಇರುವೆ ಸಿಂಹಗಳು ಕೇವಲ ಎರಡರಿಂದ ಮೂರು ವಾರಗಳಷ್ಟೇ ಬದುಕಲು ಸಾಧ್ಯ.

ಇನ್ನು ಇದರ ಜೀವನ ಚಕ್ರ ದ ಬಗ್ಗೆ ನೋಡುವುದಾದರೆ ಹೆಣ್ಣು ಇರುವ ಸಿಂಹ ಮರಳಿನಲ್ಲಿ ಸಣ್ಣ ಮೊಟ್ಟೆಗಳನ್ನು ಇಡುತ್ತದೆ. ಕೆಲವು ದಿನಗಳ ನಂತರ ಈ ಮೊಟ್ಟೆಗಳಿಂದ ಲಾರ್ವಾ ಹೊರ ಬರುತ್ತದೆ. ಇದೇ ಹಂತವನ್ನು ನಾವು ಸಾಮಾನ್ಯವಾಗಿ ಡೂಡಲ್ ಬಗ್ ಅಥವಾ ಇರುವೆ ಸಿಂಹ ಎಂದು ಕರೆಯುತ್ತೇವೆ. ಇವು ಆಗಲೇ ಹೇಳಿದ ಹಾಗೆ ಮರಳಿನಲ್ಲಿ ಶಂಕುವಿನ ಆಕಾರದ ಗುಂಡಿಗಳನ್ನು ಮಾಡಿ ಬೇಟೆಯಾಡುತ್ತವೆ. ಈ ಹಂತವು ಸುಮಾರು ಒಂದರಿಂದ ಎರಡು ವರ್ಷದವರೆಗೆ ಇರಬಹುದು. ತದನಂತರ ಪೂರ್ಣವಾಗಿ ಬೆಳೆಯದ ಲಾರ್ವಾ ಮರಳು ಮತ್ತು ತನ್ನ ಲಾಲಾ ರಸದಿಂದ ರೇಷ್ಮೆಯಂತಹ ಕೋಶ ವನ್ನು ನಿರ್ಮಿಸುತ್ತದೆ. ಈ ಹಂತದಲ್ಲಿ ಅದು ಚಲನೆಯೇ ಇಲ್ಲದೆ ಒಳಗೆ ರೂಪಾಂತರಗೊಳ್ಳುತ್ತದೆ. ಈ ಹಂತವನ್ನು ಪುಪಾ ಹಂತ ಎಂದು ಕರೆಯುತ್ತಾರೆ. ಪುಪಾ ಹಂತದ ನಂತರ ಪ್ರೌಢ ಆಂಟ್ ಲಯನ್ ಹೊರ ಬರುತ್ತದೆ. ಇದು ಡ್ರ್ಯಾಗನ್ ಫ್ಲೈ ಗೆ ಹೋಲುವಂತೆ ಕಾಣುತ್ತದೆ. ಮತ್ತು ಹಾರುತ್ತದೆ. ಪ್ರೌಢ ಹಂತದಲ್ಲಿ ಇದು ಹೆಚ್ಚಾಗಿ ಸಂತಾನೋತ್ಪತ್ತಿಗಾಗಿ ಬದುಕುತ್ತದೆ. ಇದು ಇರುವೆ ಸಿಂಹಗಳ ಜೀವನ ಚಕ್ರದ ಬಗೆಗಿನ ಮಾಹಿತಿ.

ಒಟ್ಟಾರೆಯಾಗಿ ಹೇಳುವುದಾದರೆ ಮಾನವರಿಗೆ ಯಾವುದೇ ಹಾನಿ ಮಾಡುವುದಿಲ್ಲ. ಮತ್ತು ಇದು ಪ್ರಕೃತಿಯ ಸಮತೋಲನಕ್ಕೆ ಸಹಾಯಕವಾಗಿದೆ. ಹಳ್ಳಿಯ ಕಡೆ ಇವುಗಳ ಬಗ್ಗೆ ಕೆಲವೊಂದು ಮೂಡ ನಂಬಿಕೆಗಳು ಕೂಡ ಇವೆ ಅವುಗಳನ್ನು ಮುಟ್ಟಬಾರದು, ಅವುಗಳು ಮನೆಯೊಳಗೆ ಬರಬಾರದು ಎಂದು ಆದರೆ ಇದ್ಯಾವುದು ಸತ್ಯವಲ್ಲ ಈ ಇರುವೆ ಸಿಂಹಗಳನ್ನು ಮುಟ್ಟುವುದರಿಂದ ಯಾವುದೇ ತೊಂದರೆಗಳಾಗುವುದಿಲ್ಲ ಬದಲಾಗಿ ಇದರಿಂದ ನಾವು ಎಷ್ಟೋ ವಿಚಾರಗಳನ್ನು ಕಲಿಯಬಹುದು. ಹಾಗೂ ಇರುವ ಸಿಂಹಗಳು, ಸಾಮಾನ್ಯವಾಗಿ ಮರಳು ಹಾಗೂ ಮಣ್ಣಿನಲ್ಲಿ ವಾಸಿಸುತ್ತಿರುತ್ತವೆ ಹಾಗಾಗಿ ಅವುಗಳು ಮನೆಯೊಳಗೆ ಬರುವುದೇ ಅಪರೂಪ. ಹಾಗಾಗಿ ಇದಕ್ಕೂ ಅಪಶಕುನಕ್ಕೂ ಯಾವುದೇ ಸಂಬಂಧವಿಲ್ಲ. ಇರುವೆ ಸಿಂಹಗಳು ಪ್ರಕೃತಿಗೆ ಒಂದು ಉಪಯುಕ್ತ ಜೀವಿಗಳಾಗಿವೆ.

ಪ್ರಾಪ್ತಿ ಗೌಡ

Leave a Reply

Your email address will not be published. Required fields are marked *