ಪಂಜ : ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ತೆರಳುತ್ತಿದ್ದ ಮಾರ್ಗಮಧ್ಯೆ ಆಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಇಂದು (ಜ. 15) ಮುಂಜಾನೆ ಪಂಜದಲ್ಲಿ ನಡೆದಿದೆ.

ಕುತ್ಕುಂಜ ಗ್ರಾಮದ ಯೋಗೇಶ್ ಎಂಬವರ ಪತ್ನಿ ಶ್ರೀಮತಿ ಯಶಕಲ ಅವರಿಗೆ ಇಂದು ಮುಂಜಾನೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಪಂಜದ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್‌ನ ಜೀವರಕ್ಷಕ ಆಂಬ್ಯುಲೆನ್ಸ್ ಮೂಲಕ ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.
ಆದರೆ, ಮುಂಜಾನೆ ಸುಮಾರು 5.10 ರ ವೇಳೆಗೆ ಆಂಬ್ಯುಲೆನ್ಸ್ ಪಂಜ ಪೇಟೆ ಸಮೀಪ ತಲುಪುತ್ತಿದ್ದಂತೆಯೇ ಯಶಕಲ ಅವರು ಆಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದು, ಪ್ರಾಥಮಿಕ ಆರೈಕೆಯ ನಂತರ ಅವರನ್ನು ಮುಂದಿನ ಚಿಕಿತ್ಸೆಗಾಗಿ ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಂಜದ ಪಂಚಶ್ರೀ ಆಂಬ್ಯುಲೆನ್ಸ್ ಸಿಬ್ಬಂದಿಯ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.



