​ಸುಳ್ಯ: ನಾಡು-ನುಡಿ ಹಾಗೂ ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣಕ್ಕಾಗಿ ರಾಜ್ಯಾದ್ಯಂತ ನಡೆಯುತ್ತಿರುವ ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದ ಸುಳ್ಯ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಪತ್ರಕರ್ತ ಹಸೈನಾರ್ ಜಯನಗರ ರವರನ್ನು ರಾಜ್ಯ ಸಮಿತಿಯ ನಿರ್ದೇಶನದ ಮೇರೆಗೆ ಆಯ್ಕೆ ಮಾಡಲಾಗಿದೆ

​ಸುಳ್ಯ ತಾಲೂಕಿನ ವಿವಿಧ ಸಾಮಾಜಿಕ ಹಾಗೂ ಶೈಕ್ಷಣಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಸೈನಾರ್ ಜಯನಗರ ಅವರು ಪ್ರಸ್ತುತ ಸುಳ್ಯ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾಗಿ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆ ಇದರ ಉಪಾಧ್ಯಕ್ಷರಾಗಿ, ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಇದರ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷರಾಗಿ, ಅಲ್ಲದೆ ವಿವಿಧ ಸಂಘ ಸಂಸ್ಥೆಗಳಲ್ಲಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಪತ್ರಿಕೋದ್ಯಮದ ಜೊತೆಗೆ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಇವರ ನಾಯಕತ್ವವು ತಾಲೂಕಿನಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಮತ್ತು ಸಂಘಟನೆಯ ಬಲವರ್ಧನೆಗೆ ಪೂರಕವಾಗಲಿದೆ ಎಂದು ಆಶಿಸಲಾಗಿದೆ.

​ಜವಾಬ್ದಾರಿಯ ಬಗ್ಗೆ ಹಸೈನಾರ್ ಮಾತು

ತಮ್ಮ ನೂತನ ಜವಾಬ್ದಾರಿಯ ಕುರಿತು ಮಾತನಾಡಿದ ಹಸೈನಾರ್ ಜಯನಗರ ಅವರು, “ಕನ್ನಡ ಶಾಲೆಗಳು ನಮ್ಮ ಸಂಸ್ಕೃತಿಯ ತಾಯಿಬೇರು. ಇಂದು ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸವಾಲುಗಳನ್ನು ಮೀರಿ, ಮೂಲಸೌಕರ್ಯಭಿವೃದ್ಧಿ ಮತ್ತು ಮಕ್ಕಳ ದಾಖಲಾತಿ ಹೆಚ್ಚಿಸಲು ಸಮಸ್ತ ಸಾರ್ವಜನಿಕರ ಸಹಕಾರದೊಂದಿಗೆ ಅಭಿಯಾನವನ್ನು ಮುನ್ನಡೆಸಲಾಗುವುದು” ಎಂದು ತಿಳಿಸಿದ್ದಾರೆ.

​ಹಸೈನಾರ್ ಅವರ ಈ ಆಯ್ಕೆಗೆ ತಾಲೂಕಿನ ವಿವಿಧ ಗಣ್ಯರು, ಕನ್ನಡಾಭಿಮಾನಿಗಳು ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಶಾಲಾ ಭೇಟಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಭಿಯಾನವು ಯೋಜಿಸಿದೆ.

Leave a Reply

Your email address will not be published. Required fields are marked *