ಸುಳ್ಯ: ಪಟ್ಟಣದ ಪ್ರೈವೇಟ್ ಬಸ್ ನಿಲ್ದಾಣದ ಎದುರು ಮಸಾಲೆ ಪುರಿ ವ್ಯಾಪಾರಿಯೊಬ್ಬರ ವಾಹನದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದ್ದು, ಸ್ಥಳೀಯರ ಮತ್ತು ಆಟೋ ಚಾಲಕರ ತ್ವರಿತ ಕಾರ್ಯಾಚರಣೆಯಿಂದ ಬೆಂಕಿಯನ್ನು ನಂದಿಸಲಾಗಿದೆ.

ಪೈಚಾರ್ ನಿವಾಸಿ, ಮಸಾಲೆ ಪುರಿ ವ್ಯಾಪಾರಿ ಆನಂದ ಶೆಟ್ರು ಅವರು ತಮ್ಮ ದಿನನಿತ್ಯದ ವ್ಯಾಪಾರವನ್ನು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅವರು ಸುಳ್ಯದ ಖಾಸಗಿ ಬಸ್ ನಿಲ್ದಾಣದ ಎದುರು ತಮ್ಮ ವಾಹನವನ್ನು ನಿಲ್ಲಿಸಿ ಸಮೀಪದ ಅಂಗಡಿಗೆ ತೆರಳಿದ್ದರು. ಈ ವೇಳೆ ವಾಹನದಲ್ಲಿ ಏಕಾಏಕಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ.
ತಕ್ಷಣವೇ ಎಚ್ಚೆತ್ತ ರಾತ್ರಿ ಪಾಳೆಯದ ಆಟೋ ಚಾಲಕ ಅಶ್ರಫ್ ಮಡೇಕೋಲು, ಪುನೀತ್ ಸಂಕೇಶ, ಮಿಥುನ್ ಸುಳ್ಯ ಹಾಗೂ ಸ್ಥಳೀಯ ರಾಜೇಶ್ ಪೆಟ್ರೋಲ್ ಬಂಕ್ ನ ಇಬ್ಬರು ಸಿಬ್ಬಂದಿಗಳು ಒಗ್ಗೂಡಿ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ.
ಬೆಂಕಿ ಅವಘಡದಿಂದ ವಾಹನದ ಒಳಭಾಗ ಸುಟ್ಟು ಹೋಗಿದ್ದು, ಸಣ್ಣ ಪುಟ್ಟ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳೀಯ ಯುವಕರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
