ಸುಳ್ಯ: ನಗರದ ಲಾಡ್ಜ್ ಒಂದರಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಜನವರಿ 31 ರಂದು ನಡೆದಿದೆ. ಮೃತರನ್ನು ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ನಡವಯಲ್, ಪುತ್ತುಕ್ಕುಳತಿಲ್ ನಿವಾಸಿ ವಿಜೇಶ್ ಎಂದು ಗುರುತಿಸಲಾಗಿದೆ.
ವಿಜೇಶ್ ಅವರು ಸುಳ್ಯದ ಪಂಜ ಸಮೀಪದ ರಬ್ಬರ್ ತೋಟವೊಂದರ ಉಸ್ತುವಾರಿ ನೋಡಿಕೊಳ್ಳುವ ಕೆಲಸ ನಿರ್ವಹಿಸುತ್ತಿದ್ದು, ಕೆಲಸದ ನಿಮಿತ್ತ ಸುಳ್ಯದ ಲಾಡ್ಜ್‌ನಲ್ಲಿ ತಂಗಿದ್ದರು. ಲಾಡ್ಜ್‌ನ ಕೋಣೆಯಲ್ಲಿದ್ದ ಇವರಿಂದ ಯಾವುದೇ ಚಲನವಲನ ಕಂಡುಬರದೇ ಇದ್ದಾಗ, ಅನುಮಾನಗೊಂಡ ಸಿಬ್ಬಂದಿ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಇದು ಸಹಜ ಸಾವು ಎಂದು ಅಂದಾಜಿಸಲಾಗಿದೆ.
ಅಂತ್ಯಕ್ರಿಯೆ:
ವಿಷಯ ತಿಳಿದು ಮೃತರ ಸಂಬಂಧಿಕರು ಸುಳ್ಯಕ್ಕೆ ಆಗಮಿಸಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ, ಸುಳ್ಯದ ಕೋಡಿಯಾಲಬೈಲು ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಸಮಾಜ ಸೇವಕ ಅಚ್ಚು ಪ್ರಗತಿ ಅವರು ಸುಳ್ಯ ಪೊಲೀಸರೊಂದಿಗೆ ಸಹಕರಿಸಿದರು.
