ಸದ್ಯ ಭೂಕುಸಿತ ದುರಂತದಿಂದ ವಯನಾಡಿನ ಚುರಲ್ಮಲಾ ಮತ್ತು ಮುಂಡಕೈ ಹೃದಯಸ್ಪರ್ಶಿ ದೃಶ್ಯಗಳಾಗಿವೆ. ಅನಿರೀಕ್ಷಿತವಾಗಿ ನಡೆದ ಈ ದುರಂತದಲ್ಲಿ 350ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭೂಕುಸಿತ ಸಂಭವಿಸಿದಾಗ, ರಕ್ಷಣಾ ಕಾರ್ಯಾಚರಣೆಯಲ್ಲಿ ಹಲವರು ಪ್ರಾಣ ಕಳೆದುಕೊಂಡರು.
ಹೀಗೆ ಪ್ರಾಣ ಕಳೆದುಕೊಂಡವರಲ್ಲಿ ಪ್ರಜೀಶ್ ಎಂಬ ಯುವಕ ಕೂಡ ಒಬ್ಬರಾಗಿದ್ದಾರೆ.
ಪ್ರಜೀಶ್ ಕುರಿತು ಜಮ್ಶೀದ್ ಪಳ್ಳಿಪ್ರಂ ಎಂಬವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ಇದೀಗ ಇವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಾವು ಸೂಪರ್ ಹೀರೋಗಳನ್ನು ಸಿನಿಮಾಗಳಲ್ಲಿ ನೋಡುತ್ತೇವೆ. ಸ್ಪೈಡರ್ ಮ್ಯಾನ್, ಬ್ಯಾಟ್‌ಮ್ಯಾನ್ ಮತ್ತು ಸೂಪರ್‌ಮ್ಯಾನ್ ಅನ್ನು ಕೂಡ ನೋಡಿದ್ದೇವೆ. ಇದೀಗ ಮುಂಡಕೈನಲ್ಲಿ ಅಂತಹ ಸೂಪರ್ ಮ್ಯಾನ್ ಇದ್ದಾರೆ. ಹೆಸರು ಪ್ರಜೀಶ್ ಎಂದು ಕಣ್ಣೀರಿನ ಕಥೆಯನ್ನು ಆರಂಭಿಸಿದ್ದಾರೆ.
ಜು.30ರಂದು ಮಧ್ಯರಾತ್ರಿ 1:00 ಗಂಟೆಗೆ ಮೊದಲ ಭೂಕುಸಿತ ಸಂಭವಿಸಿದ ವಿಷಯ ತಿಳಿದ ಪ್ರಜೀಶ್, ಜೀಪಿನೊಂದಿಗೆ ಮುಂಡಕೈಗೆ ಬಂದಿದ್ದರು. ಈ ವೇಳೆ ಪ್ರಜೀಶ್ ತನ್ನ ತಾಯಿ, ಸಹೋದರರನ್ನ ರಕ್ಷಿಸಿದ್ದಾರೆ. ಅಲ್ಲದೇ ಚುರಲ್ಮಲಾ ಪಾಟಿಯಲ್ಲಿ ವಾಸಿವಿರುವ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆತಂದರು. ನಂತರ ಪ್ರಜೀಶ್ ಎರಡನೇ ಬಾರಿಯೂ ಪರ್ವತದ ತುದಿಯನ್ನು ತಲುಪಿ ಸಂತ್ರಸ್ತರನ್ನು ಕೆಳಗೆ ಕರೆದುಕೊಂಡು ಬರುವ ಮೂಲಕ ರಕ್ಷಿಸಿದ್ದಾರೆ.
ಸಹಾಯಕ್ಕಾಗಿ ಕೂಗು ಕೇಳಿದ ನಂತರ ಪ್ರಜೀಶ್ ಮೂರನೇ ಬಾರಿಗೆ ಜೀಪ್ ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ. ಈ ವೇಳೆ ಸ್ನೇಹಿತರು ಹಾಗೂ ಪರಿಚಯಸ್ಥರು ಅಲ್ಲಿಗೆ ಹೋಗುವುದು ಸುರಕ್ಷಿತವಲ್ಲ ಎಂದು ಹೇಳಿ ಹೋಗದಂತೆ ತಡೆಯಲು ಯತ್ನಿಸಿದ್ದಾರೆ. ಇವರ ಮಾತುಗಳನ್ನು ಲೆಕ್ಕಿಸದೆ ಪ್ರಜೀಶ್ ಅವರು ಜೀಪ್ ತೆಗೆದುಕೊಂಡು, ಬೆಟ್ಟದ ಮೇಲೆ ಹಲವು ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ, ನನ್ನನ್ನು ತಡೆಯಬೇಡಿ ವಾಸುವೆಟ್ಟಾ…ನಾನು ಹೇಗಾದರೂ ಹೋಗುತ್ತೇನೆ ಎಂದು ಹೇಳಿ ಹೊರಟೇ ಬಿಟ್ಟರು.
ಪ್ರಜೀಶ್ ಮತ್ತೆ ಜೀಪಿನೊಂದಿಗೆ ಬೆಟ್ಟ ಹತ್ತಿದರು, ಜನರನ್ನು ಜೀಪ್‌ಗೆ ಹತ್ತಿಸಿಕೊಂಡರು. ಆದರೆ ಅವರಿಗೆ ಚುರಲ್ಮಲಾ ಸೇತುವೆಯನ್ನು ತಲುಪಲು ಸಾಧ್ಯವಾಗಲಿಲ್ಲ. ವಾಪಸ್ ಬರುವಾಗ ಜೀಪ್ ಸಮೇತ ಮಣ್ಣು, ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈ ಲೋಕಕ್ಕೆ ವಿದಾಯ ಹೇಳಿದರು.
ಅವರ ಪಾತ್ರ ಸೂಪರ್ ಹೀರೋ ಆಗಿರಲಿಲ್ಲ. ಅವರಲ್ಲಿ ಅಸಾಧಾರಣ ಪ್ರತಿಭೆಗಳಿರಲಿಲ್ಲ. ಕೆಲವರು ಹಾಗೆ ಇರುತ್ತಾರೆ. ಅವರು ತೊಂದರೆಗೊಳಗಾದ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ತಮ್ಮ ಜೀವಕ್ಕಿಂತ ಇತರರ ಜೀವವನ್ನು ಹೆಚ್ಚು ಗೌರವಿಸುತ್ತಾರೆ. ಆದ್ದರಿಂದ ಅವರು ವೀರರಾಗುತ್ತಾರೆ ಎಂದು ಜಮ್ಶೀದ್ ಪಳ್ಳಿಪ್ರಂ ಕಣ್ಣೀರಿನ ಕಥೆ ಹಂಚಿಕೊಂಡಿದ್ದಾರೆ.