ಬಾಲಕಿಯೊಬ್ಬಳ ಕುತ್ತಿಗೆಯನ್ನು ಬಟ್ಟೆಯಿಂದ ಬಿಗಿದು ಹತ್ಯೆ ಮಾಡಿರುವ ಘಟನೆ ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯ ಜಂಕ್ಷನ್ನ ಭಜನ ಮಂದಿರದ ಬಳಿಯ ಬಾಡಿಗೆ ಮನೆಯೊಂದರಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಬೆಳಗಾವಿ ಮೂಲದ ಬಾಲಕಿ ಜೋಕಟ್ಟೆಯ ಚಿಕ್ಕಪ್ಪ ಹನುಮಂತ ಅವರ ಮನೆಗೆ ಬಂದಿದ್ದಳು. ಕೂಲಿ ಕಾರ್ಮಿಕನಾಗಿರುವ ಹನುಮಂತ ಅವರು ನಿನ್ನೆ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಹನುಮಂತ ಅವರ ಕೊನೆಯ ಮಗ 8ನೇ ತರಗತಿಯಲ್ಲಿ ಓದುತ್ತಿದ್ದು, ಅವನು ಕೂಡ ಶಾಲೆಗೆ ಹೋಗಿದ್ದ. ಹನುಮಂತನ ಪತ್ನಿಯೂ ಊರಿಗೆ ಹೋಗಿದ್ದರಿಂದ ಮನೆಯಲ್ಲಿ ಬಾಲಕಿಯೊಬ್ಬಳೇ ಇದ್ದಳು ಎನ್ನಲಾಗಿದೆ. ಬಾಲಕಿಯು ಕೈ ನೋವಿಗೆ ಚಿಕಿತ್ಸೆ ಪಡೆದು ನಾಲ್ಕು ದಿನಗಳ ಹಿಂದೆಯಷ್ಟೇ ಚಿಕ್ಕಪ್ಪನ ಮನೆಗೆ ಬಂದಿದ್ದಳು. ಇನ್ನು ಬಾಲಕಿಯ ತಾಯಿ ಮಗಳೊಂದಿಗೆ ಮಾತನಾಡಲು ಹನುಮಂತ ಅವರ ಪಕ್ಕದ ಮನೆಯವರಿಗೆ ಕರೆ ಮಾಡಿದ್ದಾರೆ. ಈ ವೇಳೆ ಅವರು ಬಾಲಕಿಗೆ ಕರೆ ನೀಡಿದಲು ಹೋದಾಗ ಘಟನೆ ಬೆಳಕಿಗೆ ಬಂದಿದೆ.