ಅರಂತೋಡು: ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ಅರಂತೋಡು) ಇದರ ವತಿಯಿಂದ 21ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟವು ಮಾರ್ಚ್ 13ರಂದು ತೆಕ್ಕಿಲ್ ಸಮುದಾಯ ಭವನದಲ್ಲಿ ಅತ್ಯಂತ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಜರುಗಿತು.

​ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರು ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ. ಶಹೀದ್ ತೆಕ್ಕಿಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ದುವಾ ನೆರವೇರಿಸಿದರು. ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲರಾದ ಕೆ.ಆರ್. ಗಂಗಾಧರ್ ಉದ್ಘಾಟಿಸಿದರು.

ಸರ್ವಧರ್ಮ ಮುಖಂಡರ ಸೌಹಾರ್ದ ಸಂದೇಶ:

  • ಶ್ರೀ ಶ್ರೀ ಸ್ವಾಮಿ ಯೋಗೇಶ್ವರಾನಂದ ಸರಸ್ವತಿ (ಅಜ್ಜಾವರ ಚೈತನ್ಯ ಸೇವಾಶ್ರಮ): “ಇಂದಿನ ಕಾಲಘಟ್ಟದಲ್ಲಿ ಸೌಹಾರ್ದತೆ ಅತ್ಯಂತ ಅಗತ್ಯವಾಗಿದೆ. ಜಾತಿ-ಮತ ಭೇದವಿಲ್ಲದೆ, ಪರಧರ್ಮ ಸಹಿಷ್ಣುತೆಯೊಂದಿಗೆ ಮಾನವೀಯ ಧರ್ಮವನ್ನು ಪಾಲಿಸಿಕೊಂಡು ಬದುಕಬೇಕು.” ಎಂದು ಕರೆ ನೀಡಿದರು. ಅಲ್ಲದೆ, ಟಿ.ಎಂ. ಶಹೀದ್ ತೆಕ್ಕಿಲ್ ಅವರ ಶಿಕ್ಷಣ, ಸಮಾಜ ಸೇವೆ ಹಾಗೂ ರಾಜಕೀಯ ಪ್ರಗತಿಯನ್ನು ಶ್ಲಾಘಿಸಿದರು.
  • ಧರ್ಮಗುರು ಆದರ್ಶ್ ಜೋಸೆಫ್ (ಗುತ್ತಿಗಾರು ಸೈಂಟ್ ಮೇರೀಸ್ ಚರ್ಚ್): “ದೇವರು ಒಬ್ಬನೇ, ನಾಮ ಹಲವು. ನಾವು ಯಾರೊಂದಿಗೂ ದ್ವೇಷ ಸಾಧಿಸದೆ ಪ್ರೀತಿಯಿಂದ ಬದುಕುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು.” ಎಂದರು.
  • ನಯೀಮ್ ಫೈಝಿ ಅಲ್ ಮಹಬರಿ (ಪೇರಡ್ಕ ಮುಹಿದ್ಧೀನ್ ಜುಮಾ ಮಸೀದಿಯ ಖತೀಬರು): “ವೈವಿಧ್ಯಮಯವಾದ ನಮ್ಮ ದೇಶದಲ್ಲಿ ವಿವಿಧ ಧರ್ಮಗಳ ನಡುವೆ ಸಾಮರಸ್ಯ ಮತ್ತು ಸಹೋದರತೆ ಅತಿ ಅಗತ್ಯ. ದೇಶದ ಮೂಲೆ ಮೂಲೆಗಳಲ್ಲೂ ಇಂತಹ ಸೌಹಾರ್ದ ಕೂಟಗಳು ಹೆಚ್ಚಾಗಿ ನಡೆಯಬೇಕು.” ಎಂದು ಆಶಿಸಿದರು.

ಗಣ್ಯರ ಉಪಸ್ಥಿತಿ:

ಕಾರ್ಯಕ್ರಮದಲ್ಲಿ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಶುಭಾಶಂಸನೆಗೈದರು. ಸುಳ್ಯ ನಗರ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫ, ತಹಶೀಲ್ದಾರ್ ಮಂಜುಳ, ಸಿಪಿಐ ತಿಮ್ಮಪ್ಪ ನಾಯ್ಕ್, ವಲಯ ಅರಣ್ಯಾಧಿಕಾರಿ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಹರಗಿ, ಜಿ.ಪಂ. ಇಂಜಿನಿಯರ್ ಪಯಾಝ್ ಅಹ್ಮದ್, ಸುಳ್ಯ ಠಾಣಾಧಿಕಾರಿ ಸಂತೋಷ್, ಕೆ.ವಿ.ಜಿ. ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ. ಲೀಲಾಧರ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.

​ಪ್ರಧಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸರ್ವ ಧರ್ಮ, ಸರ್ವ ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳು ಸಾಮೂಹಿಕವಾಗಿ ಇಫ್ತಾರ್ ಆಚರಿಸುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು.

Leave a Reply

Your email address will not be published. Required fields are marked *