ಸುಳ್ಯ: ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಯುವಕನೋರ್ವನಿಗೆ ಸುಳ್ಯದ ನ್ಯಾಯಾಲಯವು ದಂಡದ ಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ವಿಶಿಷ್ಟ ಶಿಕ್ಷೆಯನ್ನು ವಿಧಿಸಿದೆ.

ಸುಳ್ಯ ನಿವಾಸಿ ರಕ್ಷಿತ್ ಜಿ. ಎಂಬಾತನೇ ಈ ಶಿಕ್ಷೆಗೊಳಗಾದ ಯುವಕ. ಈತನ ವಿರುದ್ಧ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಐಎಂವಿ ಕಾಯ್ದೆಯಡಿ (ಕಲಂ 119 ರ/ವ 177, 184, 194-ಸಿ) ಮೂರು ಪ್ರತ್ಯೇಕ ಲಘು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸ್ ಉಪ ನಿರೀಕ್ಷಕ ಸಂತೋಷ್ ಬಿ.ಪಿ. ಅವರು ಸುಳ್ಯದ ಎಸ್ಸಿಜೆ ಹಾಗೂ ಜೆಎಂಎಫ್ಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು.
ಈ ಪ್ರಕರಣಗಳ (ಸಿ.ಸಿ. 42/26, 43/26 ಹಾಗೂ 44/26) ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿಗೆ ಎರಡು ಪ್ರಕರಣಗಳಲ್ಲಿ ಒಟ್ಟು ₹3,000 ದಂಡ ವಿಧಿಸಿದೆ. ಇದರ ಜೊತೆಗೆ, ಮೂರು ಪ್ರಕರಣಗಳಿಗೆ ತಲಾ ಐದು ದಿನಗಳಂತೆ ಒಟ್ಟು 15 ದಿನಗಳ ಕಾಲ (ಮಾರ್ಚ್ 15 ರಿಂದ 29 ರವರೆಗೆ) ಸಮುದಾಯ ಸೇವೆ ಮಾಡುವಂತೆ ಮಹತ್ವದ ಆದೇಶ ನೀಡಿದೆ.
ಏನಿದು ಸಮುದಾಯ ಸೇವೆ?
ನ್ಯಾಯಾಲಯದ ಆದೇಶದಂತೆ, ಈ 15 ದಿನಗಳ ಕಾಲ ಯುವಕನು ಸುಳ್ಯ ಪೇಟೆಯ ಪ್ರಮುಖ ಜಂಕ್ಷನ್ಗಳಲ್ಲಿ ನಿಂತು ಸಂಚಾರ ನಿಯಮಗಳಿಗೆ ಸಂಬಂಧಿಸಿದ ಜಾಗೃತಿ ಫಲಕಗಳನ್ನು (ಪ್ಲಕಾರ್ಡ್) ಹಿಡಿದು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ.
ಇದರೊಂದಿಗೆ, ಸಂಚಾರ ನಿಯಮಗಳನ್ನು ಗಾಳಿಗೆ ತೂರಿದ್ದಕ್ಕಾಗಿ ಆರೋಪಿಯ ವಾಹನ ಚಾಲನಾ ಪರವಾನಗಿಯನ್ನು (ಡ್ರೈವಿಂಗ್ ಲೈಸೆನ್ಸ್) ಮೂರು ತಿಂಗಳ ಕಾಲ ಅಮಾನತುಗೊಳಿಸಿಯೂ ನ್ಯಾಯಾಲಯ ಆದೇಶ ಹೊರಡಿಸಿದೆ.





