ಸುಳ್ಯ: ಕಳೆದ ಕೆಲವು ದಿನಗಳಿಂದ ವಿಪರೀತ ಬಿಸಿಲು ಮತ್ತು ಸೆಕೆಯಿಂದ ಕಂಗೆಟ್ಟಿದ್ದ ಸುಳ್ಯ ತಾಲೂಕಿನ ಜನತೆಗೆ ಕೊನೆಗೂ ವರುಣ ತಂಪೆರೆದಿದ್ದಾನೆ. ಮಂಗಳವಾರ ದಿಢೀರನೆ ಸುರಿದ ಮಳೆಯಿಂದಾಗಿ ಸುಳ್ಯದ ವಾತಾವರಣ ಸಂಪೂರ್ಣ ತಂಪಾಗಿದ್ದು, ಬಿಸಿಲಿನ ಝಳಕ್ಕೆ ಹೈರಾಣಾಗಿದ್ದ ಜನ ನಿರಾಳರಾಗಿದ್ದಾರೆ.

ಬೆಳಗ್ಗಿನಿಂದಲೇ ಸುಡು ಬಿಸಿಲು ವಾಡಿಕೆಯಂತೆ ಇತ್ತಾದರೂ, ಸಂಜೆ ಬಳಿಕ ವಾತಾವರಣದಲ್ಲಿ ದಿಢೀರ್ ಬದಲಾವಣೆ ಕಂಡುಬಂತು. ಆಗಸದಲ್ಲಿ ಕಾರ್ಮೋಡ ಮುಸುಕಿ, ತಂಪಾದ ಗಾಳಿಯೊಂದಿಗೆ ಮಳೆ ಸುರಿಯಲಾರಂಭಿಸಿತು. ಇತ್ತೀಚಿನ ದಿನಗಳಲ್ಲಿ ಸುಮಾರು ೩೮-೪೦ ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿದ್ದ ಉಷ್ಣಾಂಶ, ಮಳೆಯ ಆಗಮನದಿಂದಾಗಿ ಗಣನೀಯವಾಗಿ ಇಳಿಕೆಯಾಗಿದ್ದು, ಸಂಜೆಯ ಹೊತ್ತಿಗೆ ವಾತಾವರಣ ಹಿತಕರವಾಗಿದೆ.

ರೈತರ ಮೊಗದಲ್ಲಿ ಮಂದಹಾಸ:

ಬೇಸಿಗೆಯ ಕಡು ಬಿಸಿಲಿಗೆ ಕೃಷಿ ಭೂಮಿ ಒಣಗುತ್ತಿದ್ದು, ಅಂತರ್ಜಲ ಕುಸಿತದಿಂದ ಕೃಷಿಕರು ಆತಂಕದಲ್ಲಿದ್ದರು. ಇದೀಗ ಸುರಿದ ಈ ಅಕಾಲಿಕ ಮಳೆ ಅಡಿಕೆ, ರಬ್ಬರ್ ಹಾಗೂ ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಎದುರಾಗಬಹುದಾಗಿದ್ದ ಕುಡಿಯುವ ನೀರಿನ ಸಮಸ್ಯೆಗೂ ಈ ಮಳೆ ಕೊಂಚ ಮಟ್ಟಿಗೆ ಬ್ರೇಕ್ ಹಾಕಿದೆ.

​ಒಟ್ಟಿನಲ್ಲಿ, ಬೇಸಿಗೆಯ ರಣಬಿಸಿಲಿಗೆ ಕಾದಾವಲಿಯಂತಾಗಿದ್ದ ಸುಳ್ಯದಲ್ಲಿ ಈಗ ಮಣ್ಣಿನ ಪರಿಮಳದೊಂದಿಗೆ ತಂಪಾದ ವಾತಾವರಣ ಮನೆಮಾಡಿದ್ದು, ಜನತೆ ಮಳೆಯ ಸಿಂಚನವನ್ನು ಎಂಜಾಯ್ ಮಾಡುತ್ತಿದ್ದಾರೆ!

Leave a Reply

Your email address will not be published. Required fields are marked *