ಒಂದು ಸುಂದರ ಕುಟುಂಬ.ಆ ಕುಟುಂಬದಲ್ಲಿ ನಾಲ್ಕು ಹೆಣ್ಣು ಮಕ್ಕಳು ಮತ್ತು ಮೂರು ಗಂಡು ಮಕ್ಕಳು.ತಕ್ಕ ಮಟ್ಟಿನ ಸ್ಥಿತಿವಂತ ಕುಟುಂಬ.ನಾಲ್ಕು ಜನ ಹೆಣ್ಣು ಮಕ್ಕಳಲ್ಲಿ ನಮ್ಮ ಕಥಾ ನಾಯಕಿ ಎರಡನೇ ಮಗಳು.ನೋಡಲು ಸಹಜ ಸುಂದರಿಯಾಗಿದ್ದಳು ದುಂಡು ಮುಖ, ದೊಡ್ಡ ಕಣ್ಣುಗಳು, ದಪ್ಪನೆಯ ಶರೀರವನ್ನು ಹೊಂದಿದ ಕೃಷ್ಣ ಸುಂದರಿಯಾಗಿದ್ದಳು.ತುಂಬಾ ಚೂಟಿಯಾಗಿದ್ದಳು ಮನೆ ಕೆಲಸವನ್ನೆಲ್ಲಾ ತಾನೇ ಮಾಡಿಟ್ಟು ಶಾಲೆಗೂ ಹೋಗುತ್ತಿದ್ದಳು.ಅವಳು ಎರಡು ಜಡೆ ಹಾಕಿಕೊಂಡು ಆಟವಾಡುತ್ತಾ ಶಾಲೆಗೆ ಹೋಗುವುದನ್ನು ನೋಡುವುದೇ ಒಂದು ಚೆಂದ.

ಹೀಗೆ ಕಾಲ ಉರುಳುತ್ತಿದ್ದಂತೆ ಇವಳಿಗೆ ಏನಾಯಿತೋ ಏನೋ ಇದ್ದಕ್ಕಿದ್ದಂತೆ ಮಂಕಾದಳು ಹುಡುಗಿ ಶಾಲೆಯಲ್ಲೂ ಪಾಠ ಕೇಳುವ ಬದಲು ನಿದ್ದೆ ಮಾಡುತ್ತಿದ್ದಳು,ಮನೆಯಲ್ಲೂ ಯಾವ ಕೆಲಸದಲ್ಲೂ ಆಸಕ್ತಿ ವಹಿಸದೆ ಸುಮ್ಮನೆ ನಿದ್ದೆಮಾಡುತ್ತಿದ್ದಳು.ರಾತ್ರಿ ನಿದ್ರೆಯಲ್ಲೂ ಅದೇನೇನೋ ಕನವರಿಸುತ್ತಿದ್ದಳು.

ಅರೇ ಇಷ್ಟು ಚೆಂದ ಓಡಾಡುತ್ತಿದ್ದ ಹುಡುಗಿಗೆ ಅದೇನಾಯಿತೋ ಎಂದು ಮನೆಯವರೆಲ್ಲಾ ತಲೆ ಕೆಡಿಸಿಕೊಂಡರು.ಅವಳ ತಂದೆ ಅವಳನ್ನು ಚಿಕಿತ್ಸೆಗಾಗಿ ವೈದ್ಯರ ಬಳಿ ಕರೆದುಕೊಂಡು ಹೋಗಲಿಲ್ಲ ಬದಲಾಗಿ ಇವಳಿಗೆ ದೆವ್ವ ಮೆಟ್ಟಿ ಕೊಂಡಿದೆ ಎಂದು ಮಂತ್ರವಾದಿಯ ಬಳಿ ಕರೆದುಕೊಂಡು ಹೋಗುತ್ತಾರೆ.ಅಲ್ಲಿ ಅವನು ಅದೇನೇನೋ ಹೇಳಿ ಹಣೆಗೆ ಹಚ್ಚಲು ಒಂದು ಭಸ್ಮವನ್ನು ಕೊಟ್ಟು ಗುಣವಾಗುವ ಆಶ್ವಾಸನೆ ಕೊಡುತ್ತಾನೆ.

ಆದರೆ ಮನೆಗೆ ಬಂದ ಎರಡೇ ದಿನದಲ್ಲಿ ಅವಳ ಖಾಯಿಲೆ ಗುಣ ಆಗುವ ಬದಲು ಮತ್ತಷ್ಟು ಉಲ್ಬಣಗೊಂಡಿತು.ಒಮ್ಮೊಮ್ಮೆ‌ ಜೋರಾಗಿ ಕಿರುಚಾಡುವುದು, ಒಮ್ಮೊಮ್ಮೆ ನಾನು ಸಾಯುತ್ತೇನೆ ಎಂದು ಮನೆಯ ಪಕ್ಕದಲ್ಲಿ ಇದ್ದ ನದಿಗೆ ಹಾರಲು ಯತ್ನಿಸುವುದು!ಇವಳ ಈ ವರ್ತನೆಯಿಂದಾಗಿ ಮನೆಯವರೆಲ್ಲಾ ಕಂಗಾಲಾಗಿ ಹೋಗಿದ್ದರು.

ಕೊನೆಗೆ ಅವಳ ತಂದೆ ಊರಿನವರೊಬ್ಬರ ಸಲಹೆಯ ಮೇರೆಗೆ ವೈದ್ಯರ ಬಳಿ ಕರೆದುಕೊಂಡು ಹೋದರು.ಅಲ್ಲಿ ಹೋದಾಗ ತಿಳಿಯಿತು ಇವಳಿಗೆ ಮಾನಸಿಕ ಸಮಸ್ಯೆ ಇದೆ ಎಂದು ಅಲ್ಲದೆ ಆ ಸಮಸ್ಯೆ ಈಗಾಗಲೇ ಮಿತಿ ಮೀರಿದ ಎಂದು.ಅವಳನ್ನು ಪರೀಕ್ಷಿಸಿದ ವೈದ್ಯರು ಇವಳಿಗೆ ಸರಿಯಾದ ಚಿಕಿತ್ಸೆ ದೊರಕದೇ ಹೋದರೆ ಇವಳು ಸಂಪೂರ್ಣ ಹುಚ್ಚಿ ಆಗುವ ಸಾಧ್ಯತೆ ಇದೆ ಎಂದು.ಅಲ್ಲಿಂದ ಮನೆಗೆ ಬಂದ ನಂತರ ಅವಳ ದುರಾದೃಷ್ಟವೋ ಏನೋ ಔಷಧೀ‌ಗಳು ಅಷ್ಟರ ಮಟ್ಟಿಗೆ ಕೆಲಸ ಮಾಡಲಿಲ್ಲ ,ಅವಳ ನಡವಳಿಕೆ ಇನ್ನಷ್ಟು ಬದಲಾಗುತ್ತಾ ಹೋಯಿತು ಮನೆಯವರು ಈ ಸಮಸ್ಯೆಯಿಂದ ಶಾಲೆಯನ್ನೂ ಬಿಡಿಸಿದರು.ಇವಳಂತೂ ಮನೆ ಮನೆ ತಿರುಗಾಡಲು ಶುರು ಮಾಡಿದಳು ಕೆಲವು ಮನೆಗಳಲ್ಲಿ ಚೆನ್ನಾಗಿ ಮಾತನಾಡಿಸಿದರೆ ಇನ್ನೂ ಕೆಲವು ಮನೆಗಳಲ್ಲಿ ಅವಳು ಬರುವುದು ಕಂಡೊಡನೆ ಬಾಗಿಲು ಹಾಕಿಕೊಳ್ಳುತ್ತಿದ್ದರು ಇನ್ನೂ ಕೆಲವರು ನಮ್ಮದ್ದೇ ಸಾಕಷ್ಟಿದೆ ಇವಳು ಬೇರೆ ಎಂದು ಬೈದುಕೊಳ್ಳುತ್ತಿದ್ದರು ಒಂದು ರೀತಿಯಲ್ಲಿ ಇಡೀ ಪ್ರಪಂಚವೇ ಅವಳನ್ನೊಂದು ಧರಿದ್ರ ಎಂದು ದಿಟ್ಟಿಸಿ ನೋಡುವಂತಿತ್ತು.

ಆದರೆ ಆ ಮುಗ್ಧ ಜೀವಕ್ಕೆ ಹೇಗೆ ಗೊತ್ತಾಗಬೇಕು ಹೇಳಿ ಇದೆಲ್ಲಾ ಅವಳದ್ದೊಂದು ಬೇರೆಯೇ ಲೋಕ ಆ ಲೋಕದಲ್ಲಿ ಅವಳದ್ದೇ ಒಂದು ಪುಟ್ಟ ಪ್ರಪಂಚದಲ್ಲಿ ತೇಲಾಡುತ್ತಿದ್ದಳು.ಅವಳಿಗೆ ಒಂದು ದೊಡ್ಡ ಕನಸಿತ್ತು.ಈಗ ಉಳಿದವರಿಗೆ ಇರುವುದಿಲ್ಲವೇ ಜೀವನದಲ್ಲಿ ಹಾಗಿರಬೇಕು ಹೀಗಿರಬೇಕು ಎಂದು ಆದರೆ ಇವಳದ್ದು ಅದು ಯಾವುದಲ್ಲ ಮದುವೆ ಆಗುವುದೇ ಇವಳ ಜೀವನದ ದೊಡ್ಡ ಕನಸು.

ಹೌದು ಇದುವೇ ಅವಳ ಜೀವನದ ಬಹುದೊಡ್ಡ ಕನಸು.ಅಯ್ಯೋ ನಾನು ನೋಡಲು ಎಷ್ಟು ಸುಂದರವಾಗಿದ್ದೇನೆ ನನಗೂ ಒಂದು ದಿನ ಮದುವೆ ಆಗುತ್ತದೆ ನನ್ನ ಹುಡುಗ ಹಾಗೆ ಇರುತ್ತಾನೆ ಹೀಗೆ ಇರುತ್ತಾನೆ ಎಂದೆಲ್ಲಾ ಕನಸು ಕಾಣುತ್ತಿದ್ದಳು.ಪಾಪ ಅವಳಿಗೇನು ಗೋತ್ತು ಲೋಕದ ಸಂಗತಿ ಪಾಪ

ದಿನ ಬೆಳಗಾದರೆ ಮನೆ ಮನೆ ತಿರುಗಾಡುತ್ತಾ ನನಗೊಂದು ಹುಡುಗನನ್ನು ನೋಡಿ ನನಗೊಂದು ಹುಡುಗನನ್ನು ನೋಡಿ ಅವನು ಹಾಗಿರಬೇಕು ಹೀಗಿರಬೇಕು ಎನ್ನುತ್ತಾ ಅವನ ಗುಣಗಾನದಲ್ಲಿ ತೊಡಗುತ್ತಿದ್ದಳು ಇದನ್ನು ಕೇಳಿ ಕೆಲವರು ತಲೆ ಚಚ್ಚಿಕೊಂಡರೆ ಇನ್ನು ಕೆಲವರು ಇವಳಿಗೆ ಮದುವೆ ಬೇರೆ ಕೇಡು ಎನ್ನುತ್ತಿದ್ದರೆ ಇನ್ನೂ ಕೆಲವರು ನಿನಗೆ ನಾವು ಹುಡುಗನನ್ನು ಹುಡುಕಿ ಕೊಡುತ್ತೇವೆ ಎಂದು ಮಜ ತೆಗೆದುಕೊಳ್ಳುತ್ತಿದ್ದರು.ಆದರೆ ಅವಳು ಮಾತ್ರ ಇದ್ಯಾವುದರ ಅರಿವೇ ಇಲ್ಲದೆ ತನ್ನ ಮದುವೆಯ ಬಗ್ಗೆ ಬಗೆ ಬಗೆಯ ಕನಸು ಕಾಣುತ್ತಿದ್ದಳು.ಅಷ್ಟೇ ಅಲ್ಲ ಅವಳಿಗೆ ಮೊಬೈಲ್ ಎಂದರೆ ಬಹಳಾ ಹುಚ್ಚು ಅವಳ ಬಳಿ ಒಂದು ಚಿಕ್ಕ ಮೊಬೈಲ್ ಅದನ್ನು ತೆಗೆದುಕೊಂಡು ಮನೆ ಮನೆಗೆ ಹೋಗಿ ರಿಪೇರಿ ಮಾಡಿ ಕೊಡಿ ಪದ್ಯ ಹಾಕಿ ಕೊಡಿ ಎಂದೆಲ್ಲಾ ಜನರನ್ನು ಪೀಡಿಸುತ್ತಿದ್ದಳು. ಕೆಲವರು ಇವಳಿಗೆ ಸ್ಪಂದಿಸಿ ಹಾಡು ಹಾಕಿ ಕೊಟ್ಟರೆ ಅದನ್ನೇ ಆಲಿಸುತ್ತಾ ಮನೆಗೆ ಹೋಗುತ್ತಿದ್ದಳು.ಹೀಗೆ ಕಾಲ ಸರಿಯುತ್ತಿತ್ತು ಒಂದು ದಿನ ಇದ್ದಕ್ಕಿದ್ದಂತೆ ಅದೇನಾಯಿತೋ ಅವಳಿಗೆ ನಡೆಯಲಾಗದ ಪರಿಸ್ಥಿತಿ ಬಂತು ಸ್ವಲ್ಪ ದಿನಗಳ ನಂತರ ನಡೆಯಲಾಗದೆ ಕುಳಿತುಕೊಳ್ಳಲಾಗದೆ ಮಲಗಿಯೇ ಬಿಟ್ಟಳು ಹೀಗೆ ಮಲಗಿದವಳು ಮತ್ತೆ ಎಂದೂ ಮೇಲೆ ಏಳಲೇ ಇಲ್ಲ ಕೊನೆಗೊಂದು ದಿನ ನರಳೀ ನರಳಿ ಭಗವಂತನ ಪಾದ ಸೇರಿದಳು.ಆದರೆ ಅವಳ ಈಡೇರದ ಕನಸೊಂದು ಹಾಗೆಯೇ ಉಳಿದಿತ್ತು.ಅವಳ ಸಾವು ಎಲ್ಲಿಯೂ ಸುದ್ದಿ ಆಗಲಿಲ್ಲ ಅಷ್ಟಾಗಿ ಜನರೂ ಸೇರಲಿಲ್ಲ.ಎಷ್ಟಾದರೂ ಹುಚ್ಚಿ ಅಲ್ಲವೇ

ಬರೆದವರು:-ಪ್ರಾಪ್ತಿ ಗೌಡ

Leave a Reply

Your email address will not be published. Required fields are marked *