ಮಲೆನಾಡ ತಪ್ಪಲಿನಲ್ಲಿ ಎರಡು ಸುಂದರವಾದ ಕುಟುಂಬಗಳು. ಈ ಎರಡು ಕುಟುಂಬಗಳು ಕೇವಲ ಸುಂದರವಾಗಿ ಮಾತ್ರ ಇರಲಿಲ್ಲ ಅನ್ಯೂನ್ಯವಾಗಿ ಕೂಡ ಇದ್ದವು ಪರಸ್ಪರ ಸುಖ-ದುಃಖ ಹಂಚಿಕೊಂಡು ಸಂತೋಷದಿಂದ ಜೀವನ ಮಾಡುತ್ತಿದ್ದರು.

ಆ ಕುಟುಂಬದಲ್ಲೊಂದು ಮುದ್ದಾದ ಹುಡುಗಿ ಆಕೆಯ ಹೆಸರು ಆರಾಧನ ಹಾಲು ಬಿಳುಪಿನ ಬಟ್ಟಲು ಮುಖದ ಸಣಕಲು ದೇಹದ ಮುದ್ದು ಹುಡುಗಿ ಈಕೆ. ಈಕೆ ನೋಡಲು ಎಷ್ಟು ಮುದ್ದಾಗಿದ್ದಳೋ ಅಷ್ಟೇ ಚೂಟಿಯಾಗಿದ್ದಳು ತನ್ನ ಹರಳು ಹುರಿದಂತಹ ಮಾತು ಹಾಗು ಕೋಗಿಲೆ ಕಂಠದಿಂದ ಈಕೆ ಊರಿನವರಿಗೆಲ್ಲಾ ಅಚ್ಚು ಮೆಚ್ಚಾಗಿದ್ದಳು.ಆದರೆ ಆ ಭಗವಂತ ನಿಜಕ್ಕೂ ಅವಳಿಗೆ ಮೋಸ ಮಾಡಿದ್ದ. ಎಲ್ಲವನ್ನೂ ನೀಡಿದ ಭಗವಂತ ಅವಳಿಗೆ ಬೇಕಾಗಿದ್ದದನ್ನೇ ಅವಳಿಂದ ಕಿತ್ತುಕೊಂಡಿದ್ದ ಅದೇನೆಂದರೆ ಅವಳಿಗೊಂದು ಸಮಸ್ಯೆ ಇತ್ತು ಆ ಸಮಸ್ಯೆ ಏನೆಂದರೆ ಅವಳಿಗೆ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ ದೂರ ದೂರ ಹೋಗಬೇಕೆಂದಿದ್ದರೆ ಅವಳೊಂದಿಗೆ ಯಾರಾದರೂ ಒಬ್ಬರು ಇರಲೇಬೇಕಾಗಿತ್ತು. ಆದರೆ ಇದ್ಯಾವುದರ ಅರಿವು ಅವಳಿಗಿರಲಿಲ್ಲ ಎಲ್ಲರಂತೆ ತಾನೂ ಎಂದುಕೊಂಡು ಸಂತೋಷವಾಗಿದ್ದಳು ಮನೆಯವರು ಕೂಡ ಇವಳನ್ನು ತುಂಬಾ ಮುದ್ದಾಗಿ ಬೆಳೆಸಿದ್ದರು ಪಕ್ಕದ ಮನೆಯ ಅಜ್ಜ ಅಜ್ಜಿ ಅಂತೂ ತುಂಬಾ ಮುದ್ದು ಮಾಡುತ್ತಿದ್ದರು.

ಆದರೆ ಯಾರು ಎಷ್ಟೇ ಮುದ್ದು ಮಾಡಿದರು ಸಹ ಇವಳು ಮಾತ್ರ ಹಚ್ಚಿಕೊಂಡದ್ದು ದೇವರು ಕೊಟ್ಟ ಅಣ್ಣನನ್ನು ಮಾತ್ರ ಅವನು ಒಡ ಹುಟ್ಟಿದವನೇನು ಅಲ್ಲ ಪಕ್ಕದ ಮನೆಯ ಅಜ್ಜ ಅಜ್ಜಿಯ ಮಗ ದೂರದ ಊರಿನಲ್ಲಿ ಉದ್ಯೋಗ ದಲ್ಲಿ ಇದ್ದ ಆರಾಧನಳಿಗೆ ಅವನೆಂದರೆ ಪ್ರಾಣ ಅವಳು ಅವನನ್ನು ತುಂಬಾ ಹಚ್ಚಿಕೊಂಡಿದ್ದಳು ಅವನೂ ಅಷ್ಟೇ ಊರಿಗೆ‌ ಬಂದಾಗಲೆಲ್ಲಾ ಹೆಗಲ ಮೇಲೆ ಕೂರಿಸಿಕೊಂಡು ಸುತ್ತಾಡಿಸುತ್ತಿದ್ದ ಎಲ್ಲೇ ಹೋದರು ಅವಳನ್ನು ಜೊತೆ ಕರೆದುಕೊಂಡು ಹೋಗುತ್ತಿದ್ದ.ಈ ಎರಡು ಮುಗ್ದ ಮನಸುಗಳ ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾದ್ಯವೇ ಇಲ್ಲ ಯಾರಾದರು ಅಣ್ಣನಿಗೆ ಬೈದರೆ ಅರಾಧನ ಅವರಿಗೇ ಬೈದು ಬಿಡುತ್ತಿದ್ದಳು.ಮತ್ತೆ ತಿರುಗಿ ಕೆಲಸಕ್ಕೆ ಹೊರಟಾಗ ಕಣ್ಣೀರು ಹಾಕುತ್ತಾ ಅಣ್ಣಾ…. ಬೇಗ ಬಂದು ಬಿಡು ಎನ್ನುತ್ತಿದ್ದಳು.ಅವನು ಸಮಾಧಾನ ಪಡಿಸಿ ಎತ್ತಿ ಮುದ್ದಾಡಿ ಹೋಗುತ್ತಿದ್ದ. ಆ ಮನೆಯ ಅಜ್ಜ ಅಜ್ಜಿ ಮಗ ಬರುವ ಒಂದು ವಾರದ ಮೊದಲೇ ಇವಳಿಗೆ ತಿಳಿಸುತ್ತಿದ್ದರು ಇವಳು ಒಂದು ವಾರ ಅಣ್ಣನ ದಾರಿ ಕಾಯುತ್ತ ಅಲ್ಲೇ ಉಳಿಯುತ್ತಿದ್ದಳು ಅವರಿಬ್ಬರ ಬಾಂಧವ್ಯ ಹೇಗಿತ್ತೆಂದರೆ ಆ ಎರಡು ಮುಗ್ದ ಮನಸುಗಳಿಗೆ ಸ್ವಾರ್ಥ ಪ್ರಪಂಚದ ಅರಿವಿಲ್ಲ ವಿಧಿಯ ಅರಿವಂತೂ ಮೊದಲೇ ಇಲ್ಲ ಒಟ್ಟಿಗೇ ಊಟ ಒಟ್ಟಿಗೇ ನಿದ್ರೆ ಒಟ್ಟಿನಲ್ಲಿ ಇವರಿಬ್ಬರ ಅಣ್ಣ ತಂಗಿ ಸಂಬಂಧ ಊರಿನಲ್ಲಿ ಎಲ್ಲಾ ಪ್ರಸಿದ್ಧ.

ಇವರ ಇಬ್ಬರ‌ ಬಾಂಧವ್ಯಕ್ಕೆ ಅದ್ಯಾರ ಕಣ್ಣು ಬಿತ್ತೋ ಏನೋ ಕೊನೆಗೂ ಆ ವಿಧಿ ಅವರಿಬ್ಬರನ್ನು ಬೇರೆ ಮಾಡಿತು ನಮ್ಮ ಜೀವನದಲ್ಲೂ ಕೂಡ ನಡೆಯುವುದು ಹೀಗೆಯೇ ಅಲ್ಲವೇ ನಾವು ಯಾರನ್ನು ಅತಿಯಾಗಿ ಪ್ರೀತಿಸುತ್ತೇವೆಯೋ ಅವರನ್ನು ಆ ವಿಧಿಯೇ ನಮ್ಮಿಂದ ದೂರ ಮಾಡುತ್ತದೆ.ಇವರ ವಿಷಯದಲ್ಲೂ ಹಾಗೆ ಆರಾಧನಳ ಅಣ್ಣನಿಗೆ ಕುಡಿತದ ಚಟವಿತ್ತು ಮತ್ತು ದೊಡ್ಡ ಗೆಳೆಯರ ಬಳಗವೂ ಇತ್ತು ಒಂದು ಮಾತಿದೆ ನಮ್ಮೊಂದಿಗೆ ಎಲ್ಲಾ ಇದ್ದರೆ ಇವ ನಮ್ಮವ ಇವ ನಮ್ಮವ ಇಲ್ಲದಿದ್ದರೆ ಇವನಾರವ?ಇವನ ವಿಷಯದಲ್ಲೂ ಹಾಗೆ ಆಯಿತು ವಿಪರೀತ ಕುಡಿತದ ಚಟದಿಂದ ಮೈ ಕೈ ತುಂಬಾ ಸಾಲ ಮಾಡಿಕೊಂಡ ಆಸರೆ ಆಗಿದ್ದ ಜಾಗವನ್ನು ಮಾರಿದ ಅಪ್ಪ ಅಮ್ಮ ನನ್ನು ಬೀದಿಗೆ ತಂದ ಎಲ್ಲಾ ಇದ್ದಾಗ ಹಿಂದೆ ಮುಂದೆ ಸುತ್ತುತ್ತಿದ್ದವರ್ಯಾರಿಗೂ ಬೇಡವಾದ ಬೇಕಿದ್ದದ್ದು ಒಬ್ಬಳಿಗೆ ಮಾತ್ರ ಅದು ಅವನ ತಂಗಿಗೆ ಮಾತ್ರ ಅಣ್ಣನ ಸ್ಥಿತಿ ನೋಡಿ ಮುದ್ದು ಹುಡುಗಿಯ ಹೃದಯ ಛಿದ್ರವಾಯಿತು ಕಂಡ ಕನಸು ನುಚ್ಚು ನೂರಾಯಿತು ಅವನೊಂದಿಗೆ ಕಳೆದ ಪ್ರತಿ ಕ್ಷಣ ಗಳ ನೆನಪು ಶಾಶ್ವತವಾಯಿತು.ಕಣ್ಣೆದುರೇ ಒಂದು ಕುಟುಂಬ ಛಿದ್ರವಾಯಿತು.ಇಂದಿಗೂ ಅಣ್ಣನನ್ನು ನೆನಪಿಸಿಕೊಳ್ಳುತ್ತಾ ಕಣ್ಣೀರು ಹಾಕುತ್ತಿರುವ ಅಣ್ಣನ ದೇವರು ಕೊಟ್ಟ ತಂಗಿ.

ಇದರಿಂದ ನಾವು ಏನು ತಿಳಿದುಕೊಳ್ಳಬಹುದು ಎಂದರೆ ಅಣ್ಣ ತಂಗಿ ಸಂಬಂಧಕ್ಕೆ ರಕ್ತ ಹಂಚಿಕೊಂಡು ಹುಟ್ಟಬೇಕಾಗಿಲ್ಲ ನಿಷ್ಕಲ್ಮಶ ಮನಸ್ಸಿನ ಎರಡು ಹೃದಯಗಳಿದ್ದರೆ ಸಾಕು .

ರಚನೆ:-ಪ್ರಾಪ್ತಿ ಗೌಡ

Leave a Reply

Your email address will not be published. Required fields are marked *