ಸುಳ್ಯ: ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ಮತ್ತೆ ಪುನರಾರಂಭಗೊಳ್ಳಲಿದೆ. ಸುಳ್ಯದಲ್ಲಿ ಕಳೆದ ಕೆಲವು ತಿಂಗಳಿನಿಂದ ಆಧಾರ್ ಸೇವೆ ಸ್ಥಗಿತಗೊಂಡ ಕಾರಣ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸಿದ್ದರು. ಇದೀಗ ಸುಳ್ಯ ಅಂಚೆ ಇಲಾಖೆಯಲ್ಲಿ ಮತ್ತೆ ಸೇವೆ ಆರಂಭಗೊಳ್ಳಲಿದೆ. ಆ.28 ರಿಂದ ಪ್ರಾಯೋಗಿಕ ನೆಲೆಯಲ್ಲಿ ಆಧಾರ್ ಸೇವೆ ಲಭ್ಯವಾಗಲಿದೆ. ಬೆಳಿಗ್ಗೆ 9 ಗಂಟೆಯಿಂದ ಟೋಕನ್ ನೀಡಲು ಆರಂಭಗೊಳ್ಳಲಿದ್ದು ಮಧ್ಯಾಹ್ನ 2.15ರ ಬಳಿಕ ಆಧಾರ್ ಸೇವೆ ನೀಡಲಿದೆ. ಇದೀಗ ಪ್ರಾಯೋಗಿಕವಾಗಿ ಆಧಾರ್ ಸೇವೆ ನೀಡಲು ಆರಂಭಮಾಡಲಾಗುವುದು.

ದಿನಕ್ಕೆ 15 ಮಂದಿಗೆ ಮಾತ್ರ ಟೋಕನ್ ನೀಡಲಾಗುವುದು. ಟೋಕನ್ ಪಡೆದ 15 ಮಂದಿಗೆ ಮಾತ್ರ ಆಯಾ ದಿನ ಆಧಾರ್ ಸೇವೆ ಮಾಡಲಾಗುವುದು ಎಂದು ಸುಳ್ಯ ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಮೋಹನ್ ಎಂ.ಕೆ.ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆಧಾರ್ ಸೇವೆ ಲಭ್ಯವಾಗಲಿದೆ. ಸಿಬ್ಬಂದಿ ನೇಮಕ ಮತ್ತಿತರ ವ್ಯವಸ್ಥೆ ಆದ ಬಳಿಕ ಪ್ರತೀ ದಿನ ಬೆಳಗ್ಗಿನಿಂದಲೇ ಆಧಾರ್ ಸೇವೆ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ. ಸುಳ್ಯದಲ್ಲಿ ಆಧಾರ್ ಸೇವೆ ಸ್ಥಗಿತವಾಗಿದ್ದರಿಂದ ಜನರು ಬೆಳ್ಳಾರೆ, ಪುತ್ತೂರು ಮತ್ತಿತರ ಕಡೆ ಹೋಗಿ ಆಧಾರ್ ತಿದ್ದುಪಡಿ ಸಹಿತ ಇನ್ನಿತರ ಕೆಲಸಮಾಡಿಕೊಂಡು ಬರಬೇಕಾಗಿತ್ತು. ಈ ಹಿನ್ನಲೆಯಲ್ಲಿ ಸುಳ್ಯದಲ್ಲಿ ಆಧಾರ್ ಕೇಂದ್ರ ಪುನರಾರಂಭಕ್ಕೆ ತೀವ್ರ ಬೇಡಿಕೆ ಮತ್ತು ಒತ್ತಾಯ ಕೇಳಿ ಬಂದಿತ್ತು.