ಬೆಳ್ಳಾರೆ: ಬೆಳ್ಳಾರೆ ಸಮೀಪದ ಕಲ್ಲೋಣಿ ತಿರುವಿನಲ್ಲಿ ಬೈಕ್ ಒಂದು ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡ ದಾರುಣ ಘಟನೆ ಇಂದು (ಜ. 20) ನಡೆದಿದೆ.

ಮೃತರನ್ನು ಕಡಬ ತಾಲೂಕಿನ ಮರ್ದಾಳ ಸಮೀಪದ ಕೊಲ್ಯ ನಿವಾಸಿ ನಿಶಾಂತ್ ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿದ್ದ ನಿಶಾಂತ್ ಅವರ ತಂದೆ ಮೋನಪ್ಪ ಅವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆಯ ವಿವರ:
ಶಬರಿಮಲೆ ಪ್ರಸಾದವನ್ನು ತಲುಪಿಸಲು ತಂದೆ ಮತ್ತು ಮಗ ಬೈಕ್‌ನಲ್ಲಿ ಸುಳ್ಯದ ಕಡೆಗೆ ಬರುತ್ತಿದ್ದಾಗ ಕಲ್ಲೋಣಿ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಅಪಘಾತದ ತೀವ್ರತೆಗೆ ಬೈಕ್ ಮೋರಿಗೆ ಬಿದ್ದಿದ್ದು, ಸವಾರ ನಿಶಾಂತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
