ಕೊಚ್ಚಿ: ನಟ, ನಿರ್ದೇಶಕ ಮತ್ತು ಚಿತ್ರಕಥೆಗಾರ ಶ್ರೀನಿವಾಸನ್ (69) ನಿಧನ. ಅನಾರೋಗ್ಯದಿಂದ ಕೊಚ್ಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರಿನಿವಾಸನ್ ಮೂಲತಹ ಕಣ್ಣೂರು ಮೂಲದವರು, ಕೊಚ್ಚಿಯಲ್ಲಿ ನೆಲೆಸಿದ್ದರು.
ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು, ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದರು. ಮೃತದೇಹವನ್ನು ತ್ರಿಪುನಿತುರ ತಾಲ್ಲೂಕು ಆಸ್ಪತ್ರೆಯಲ್ಲಿ ಇರಿಸಲಾದೆ. ನಾಲ್ಕೂವರೆ ದಶಕಗಳ ಕಾಲ ಮಲಯಾಳಂ ಚಿತ್ರರಂಗ ಮತ್ತು ಜನರನ್ನು ನಗಿಸುವ ಮತ್ತು ಯೋಚಿಸುವಂತೆ ಮಾಡಿದ ಶ್ರೀನಿವಾಸನ್, ನಟನೆಯಿಂದ ಸದಾ ನೆನಪಿನಲ್ಲಿಟ್ಟುಕೊಳ್ಳುವಂತ ವಿಶಿಷ್ಟ ಕಲಾವಿದರು ಕೂಡಾ.
ನಾಡೋಡಿಕ್ಕಾಟ್ಟು, ಸಂದೇಶಂ, ಚಿಂತನವಿಸ್ತಾರ ಶ್ಯಾಮಲಾ ಮುಂತಾದ ಹಲವು ಚಿತ್ರಗಳಲ್ಲಿನ ಶ್ರೀನಿವಾಸನ್‌ರ ಪಾತ್ರಗಳು ಮಲಯಾಳಿಗಳಿಗೆ ಸದಾ ಪ್ರಿಯವಾಗಿವೆ. ಸಿನಿ ರಸಿಕರನ್ನು ಜೋರಾಗಿ ನಗಿಸುವ ಅನೇಕ ಪಾತ್ರಗಳನ್ನು ನಿರ್ವಹಿಸಿರುವ ಇವರು, ಹಲವು ದೊಡ್ಡ ಸಿನಿ ನಾಯಕರನ್ನು ಮೀರಿಸುವ ಅಭಿನಯವನ್ನು ನೀಡಿದ್ದಾರೆ. ಅವರು ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದರೂ, ಶ್ರೀನಿವಾಸನ್ ನಾಯಕ ನಟನೆ, ಪೋಷಕ ನಟ ಪಾತ್ರ ಮೆಚ್ಚುವಂತದ್ದು.
ಗಾಂಧಿನಗರ ಸೆಕೆಂಡ್ ಸ್ಟ್ರೀಟ್, ವಡಕ್ಕುನೋಕ್ಕಿಯಂತ್ರಂ, ಕಿಲಿಚುಂಡನ್ ಮಾನ್ಮಬಝಂ, ಉದಯನನ್ ತಾರಾ, ಕಥಾ ಪರಯುಂಬೋಳ್, ಅರಬಿಕದ, ಮೇಘಂ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ. ಮಲಯಾಳಿಗಳ ಬೂಟಾಟಿಕೆಗೆ ತೆರೆದ ಕನ್ನಡಿಯಾಗಿರುವಂತಹ ಹಲವು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶ್ರೀನಿವಾಸನ್ ಅವರು ಏಪ್ರಿಲ್ 6, 1956 ರಂದು ಕಣ್ಣೂರು ಜಿಲ್ಲೆಯ ತಲಶ್ಶೇರಿ ಬಳಿಯ ಪಾಟಿಯಂನಲ್ಲಿ ಜನಿಸಿದರು. ಕೂತುಪರಂಬ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಣವನ್ನು ಮುಗಿಸಿದ ನಂತರ, ಚೆನ್ನೈನ ಫಿಲ್ಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ನಟನೆಯಲ್ಲಿ ಡಿಪ್ಲೊಮಾ ಪಡೆದರು. 1977 ರಲ್ಲಿ ಪಿ.ಎ. ಬಕ್ಕರ್ ನಿರ್ದೇಶನದ ‘ಮಣಿಮುಳಕಂ’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ, ಕೆ.ಜಿ. ಜಾರ್ಜ್ ನಿರ್ದೇಶನದ ‘ಮೇಳ’ ಚಿತ್ರದಲ್ಲಿ ನಟಿಸಿದರು. ನಂತರ, ಅವರು ಅನೇಕ ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದರು ಮತ್ತು 1984 ರಲ್ಲಿ, ‘ಒಡರುತಮ್ಮವ ಅಲಾರಿಯಂ’ ಚಿತ್ರಕ್ಕೆ ಚಿತ್ರಕಥೆ ಬರೆಯುವ ಮೂಲಕ ಚಿತ್ರಕಥೆಗಳನ್ನು ಬರೆಯಲು ಪ್ರಾರಂಭಿಸಿದರು. ಶ್ರೀನಿವಾಸನ್ ಅವರ ವರವೆಲ್ಪ್ಪು, ನಾಡೋಡಿಕ್ಕಾಟ್ಟು, ಸಂದೇಶಂ ಮತ್ತು ವಡಕ್ಕುನೋಕ್ಕಿಯಂತ್ರಂ ನಂತಹ ಅನೇಕ ಹಿಟ್ ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದಾರೆ. ಅವರು ಚಿತ್ರಕಥೆ ಬರೆದ ಬಹುತೇಕ ಚಿತ್ರಗಳು ದೊಡ್ಡ ಯಶಸ್ಸು ಕೂಡಾ ಕಂಡಿತು.
ಅವರು 1989 ರಲ್ಲಿ ‘ವಡಕ್ಕುನೋಕ್ಕಿಯಂತ್ರಂ’ ಮತ್ತು 1998 ರಲ್ಲಿ ‘ಚಿಂತವಿಷ್ಟಯ ಶ್ಯಾಮಲ’ ಚಿತ್ರಗಳನ್ನು ನಿರ್ದೇಶಿಸಿದರು, ಇದು ಅವರ ಅತ್ಯುತ್ತಮ ಚಿತ್ರವಾದವು. ತಮ್ಮ ಆರಂಭಿಕ ದಿನಗಳಲ್ಲಿ, ಶ್ರೀನಿವಾಸನ್ ಡಬ್ಬಿಂಗ್ ಕಲಾವಿದರಾಗಿಯೂ ಕೆಲಸ ಮಾಡಿದರು. ಚಲನಚಿತ್ರ ನಿರ್ಮಾಣ ಕ್ಷೇತ್ರದಲ್ಲೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಶ್ರೀನಿವಾಸನ್, ಆರ್ಥಿಕವಾಗಿ ಯಶಸ್ವಿಯಾದ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಶ್ರೀನಿವಾಸನ್ ಅತ್ಯುತ್ತಮ ಕಥೆ ಮತ್ತು ಅತ್ಯುತ್ತಮ ಚಲನಚಿತ್ರಕ್ಕಾಗಿ ಐದು ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದ ಪ್ರತಿಭಾನ್ವಿತ ನಟರೂ ಹೌದು.





