ಸನಾ ಪರ್ವಿನ್ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಬಾಗಲೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದಳು. ಕಾಲೇಜಿನ ಪಿಜಿಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಸಹ ವಿದ್ಯಾರ್ಥಿ ಪ್ರೀತಿಸುವಂತೆ ಈಕೆಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅದೇ ಕಾಲೇಜಿನಲ್ಲಿ ಓದುತ್ತಿದ್ದ ಸೀನಿಯರ್ ವಿದ್ಯಾರ್ಥಿಯಿಂದ ಕಿರುಕುಳ ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಸನಾ ಪರ್ವಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪ ಕೇಳಿಬಂದಿದೆ. ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸನಾ ಪರ್ವಿನ್ ಮಡಿಕೇರಿ ಮೂಲದ ಯುವತಿ. ಈಕೆಗೆ ಕೇರಳದ ಮೂಲದ ಯುವಕ, ಪಿಜಿ ಮತ್ತು ಕಾಲೇಜು ಬಳಿ ಬಂದು ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ. ಅಸಭ್ಯವಾಗಿ ಮೆಸೇಜ್ ಮಾಡುತ್ತಿದ್ದ. ಕಳೆದ 10 ತಿಂಗಳಿಂದ ಆಕೆಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಯುವಕನ ಕಿರುಕುಳದ ವಿಚಾರವನ್ನು ಯುವತಿ ತನ್ನ ಪೋಷಕರಿಗೂ ತಿಳಿಸಿದ್ದಳು. ಆದರೆ, ನಿನ್ನೆ ರಾತ್ರಿ ತನ್ನ ಪಿಜಿ ಸಹಪಾಠಿಗಳು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಕಾಲೇಜಿನಲ್ಲಿ ನಡೆಯುತ್ತಿರುವ ಅನ್ಯಾಯ, ದಂಧೆ, ಡ್ರಗ್ಸ್ ಅಡಿಕ್ಷನ್, ಕೊಲೆ, ಬಗ್ಗೆ ಸಾಕಷ್ಟು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ‘ಎಂಡೆ ಕ್ಯಾಸೆಟ್’ ಕೂಡಾ ಈ ಸಾವಿನ ಬಗ್ಗೆ ವಿಡಿಯೋ ಹರಿಬಿಟ್ಟಿದ್ದಾರೆ. ಏನೇ ಇದ್ದರು ಇನ್ನೂ ತನಿಖೆಯಿಂದ ಎಲ್ಲಾ ಅಂಶಗಳು ಬೆಳಕಿಗೆ ಬರಬೇಕಷ್ಟೇ.

