ನಿಶ್ಚಿತ್ ಎಂಬ ಬಾಲಕನ ಅಪಹರಿಸಿ ಬನ್ನೇರುಘಟ್ಟ (Bannerughatta) ಸಮೀಪ ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಗುರುಮೂರ್ತಿ ಮತ್ತು ಗೋಪಾಲಕೃಷ್ಣ ಅವರ ಕಾಲಿಗೆ ಗುಂಡು ಹಾರಿಸಿ ಅವರನ್ನು ಬಂಧಿಸುವಲ್ಲಿ ಪೊಲಿಸರು (Bengaluru Police) ಯಶಸ್ವಿಯಾಗಿದ್ದಾರೆ.

ಪೊಲೀಸ್ ಕಾರ್ಯಾಚರಣೆ ವೇಳೆ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಕಗ್ಗಲಿಪುರ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ, ಘಟನೆ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದಂತಾಗಿದೆ.

ಆರೋಪಿಗಳಾದ ಗುರುಮೂರ್ತಿ ಮತ್ತು ಗೋಪಾಲಕೃಷ್ಣ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ, ಆರೋಪಿಗಳು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಆಗ, ಹುಳಿಮಾವು ಪೊಲೀಸ್ ಠಾಣೆ ಇನ್ಸ್​​ಪೆಕ್ಟರ್​​ ಕುಮಾರಸ್ವಾಮಿ ಮತ್ತು ಪಿಎಸ್​ಐ ಅರವಿಂದ ಕುಮಾರ್ ಆರೋಪಿಗಳ ಮೇಳೆ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಆತ್ಮರಕ್ಷಣೆಗಾಗಿ ಒಟ್ಟಾರೆ 6 ಸುತ್ತು ಗುಂಡು ಹಾರಿಸಿದ್ದಾರೆ.

ಸದ್ಯ ಬಂಧಿತ ಆರೋಪಿಗಳನ್ನು ಜಯನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹುಳಿಮಾವು ಠಾಣೆಯಲ್ಲಿ ನಿಶ್ಚಿತ್​ ಅಪಹರಣ ಪ್ರಕರಣ ದಾಖಲಾಗಿತ್ತು.

ಸೈಕೋ ಮನಸ್ಥಿತಿ ಹೊಂದಿದ್ದ ಆರೋಪಿಗಳು

ಆರೋಪಿಗಳು ಸೈಕೋ ಮನಸ್ಥಿತಿ ಹೊಂದಿದವರು ಎನ್ನಲಾಗಿದೆ. ಪ್ರಮುಖ ಆರೋಪಿ ಗುರುಮೂರ್ತಿಗೆ ಪೋಕ್ಸೊ ಅಪರಾಧ ಪ್ರಕರಣದ ಹಿನ್ನೆಲೆ ಇದೆ. ಆದಾಗ್ಯೂ, ಬಾಲಕ ನಿಶ್ಚಿತ್ ಅಪಹರಣ ಹಾಗೂ ಕೊಲೆಗೆ ನಿಖರ ಕಾರಣ ಏನೆಂಬುದು ಇನ್ನೂ ನನಿಗೂಢವಾಗಿಯೇ ಇದೆ. ಕೇವಲ ಹಣಕ್ಕಾಗಿ ಮಾತ್ರ ಆರೋಪಿ ಬಾಲಕನನ್ನು ಅಪಹರಿಸಿದ್ದನೇ ಅಥವಾ ಬೇರೆ ಕಾರಣ ಇದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರೋಪಿ ಹಿನ್ನಲೆ ಗಮನಿಸಿ ಎರಡು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ ಎರಡ್ಮೂರು ಸ್ಥಳ ಹೇಳಿ ಹಣ ಪಡೆಯದೆ ಸತಾಯಿಸಿದ್ದ ಎನ್ನಲಾಗಿದೆ. ಒಂದೆಡೆ ನಿಶ್ಚಿತ್ ಪೋಷಕರು ಹಣ ಸಂಗ್ರಹಿಸಿಟ್ಟು, ಪೊಲೀಸರ ತನಿಖೆ ಸಹಕರಿಸಿದ್ದರು. ಆದರೆ, ಅಷ್ಟರಲ್ಲಾಗಲೇ ಬಾಲಕನ ಹತ್ಯೆ ಮಾಡಲಾಗಿದೆ.

ಬಾಲಕ ನಿಶ್ಚಿತ್ ಅಪಹರಣ ಮತ್ತು ಕೊಲೆ ಪ್ರಕರಣದ ಮಾಸ್ಟರ್ ಮೈಡ್ ಕಾರು ಚಾಲಕ ಗುರುಮೂರ್ತಿ ಎನ್ನಲಾಗಿದೆ. ಕ್ರಿಮಿನಲ್​​ ಹಿನ್ನೆಲೆ ಹೊಂದಿರುವ ಆರೋಪಿ ಗುರುಮೂರ್ತಿ ಬಾಲಕನ ಪೋಷಕರ ಸ್ಪೇರ್ ಡ್ರೈವರ್ ಆಗಿಯೂ ಕಾರ್ಯನಿರ್ವಹಿಸಿದ್ದ. ಹೀಗಾಗಿ ಆಗಾಗ ಮನೆಗೆ ಬರುತ್ತಿದ್ದ ಎನ್ನಲಾಗಿದೆ.

Leave a Reply

Your email address will not be published. Required fields are marked *