ಬೆಂಗಳೂರು: ಪ್ರಯಾಣಿಕರ ನೆಚ್ಚಿನ ಬೈಕ್ ಟ್ಯಾಕ್ಸಿ ಸೇವೆಗೆ (Bike Taxi) ಸರ್ಕಾರ ಕೆಲ ತಿಂಗಳ ಹಿಂದೆಯಷ್ಟೇ ನಿಷೇಧ ಹೇರಿತ್ತು. ಆ ಬೆನ್ನಲ್ಲೇ ಬೈಕ್ ಟ್ಯಾಕ್ಸಿ ಸವಾರರಿಂದ ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಇದೀಗ ರಾಜ್ಯದಾದ್ಯಂತ, ವಿಶೇಷವಾಗಿ ಬೆಂಗಳೂರಿನಲ್ಲಿ, ಇಂದಿನಿಂದ (ಆಗಸ್ಟ್ 21) ಬೈಕ್ ಟ್ಯಾಕ್ಸಿ ಸೇವೆಗಳು ಪುನರಾರಂಭವಾಗಿವೆ. ಆಟೋ ರಿಕ್ಷಾ ಮತ್ತು ಕ್ಯಾಬ್‌ಗಳಿಗೆ ದುಬಾರಿ ದರ ನೀಡುತ್ತಿದ್ದ ಜನರಿಗೆ ಈ ಸೇವೆಯಿಂದ ತುಸು ರಿಲೀಫ್ ಸಿಗಲಿದೆ. ಆದರೆ, ಈ ಸೇವೆ ಪ್ರಸ್ತುತ ಓಲಾದಲ್ಲಿರದೆ (Ola), ಊಬರ್ ಮತ್ತು ರ್ಯಾಪಿಡೊ ಆ್ಯಪ್‌ಗಳಲ್ಲಿ (Uber, Rapido) ಮಾತ್ರ ಲಭ್ಯವಿದೆ ಎಂದು ವರದಿಯಾಗಿದೆ.

ಸುರಕ್ಷತೆಯ ಕಾರಣಗಳಿಂದ 2022 ರ ಜೂನ್ 16 ರಿಂದ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ಸೇವೆಯನ್ನು ನಿಷೇಧಿಸಿತ್ತು. ಈ ನಿಷೇಧಕ್ಕೆ ಖಾಸಗಿ ಸಾರಿಗೆ ಸಂಘಟನೆಗಳು ತೀವ್ರವಾಗಿ ಪಟ್ಟು ಹಿಡಿದಿದ್ದವು.
ಆದರೆ, ರಾಜ್ಯದಾದ್ಯಂತ ಈ ಸೇವೆಯನ್ನು ಅವಲಂಬಿಸಿದ್ದ ಸುಮಾರು 6 ಲಕ್ಷಕ್ಕೂ ಹೆಚ್ಚು ಸವಾರರಿಗೆ ಈ ನಿಷೇಧದಿಂದ ಭಾರೀ ಸಂಕಷ್ಟ ಎದುರಾಗಿತ್ತು. ಬೆಂಗಳೂರು ವ್ಯಾಪ್ತಿಯಲ್ಲಿ ಮಾತ್ರ 1.20 ಲಕ್ಷ ಬೈಕ್‌ಗಳು ಈ ಸೇವೆಗೆ ನೋಂದಾಯಿತವಾಗಿದ್ದವು. ಆದರೆ ಏಕಾಏಕಿ ಸರ್ಕಾರದಿಂದ ನಿಷೇಧದ ಆದೇಶ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಆದರೆ ಇದೀಗ ಬೈಕ್ ಸವಾರರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಹೈಕೋರ್ಟ್‌ನ ಸೂಚನೆ
ಬೈಕ್ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದಂತೆ ಸ್ಪಷ್ಟ ನೀತಿ ಚೌಕಟ್ಟನ್ನು ರೂಪಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಈ ಸಂಬಂಧ ವಿಚಾರಣೆಯನ್ನು ಸೆಪ್ಟೆಂಬರ್ 22, 2025 ಕ್ಕೆ ಮುಂದೂಡಲಾಗಿದೆ. ಈ ಸೂಚನೆಯ ಹಿನ್ನೆಲೆಯಲ್ಲಿ, ಸರ್ಕಾರವು ಸುರಕ್ಷತೆ ಮತ್ತು ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಬೈಕ್ ಟ್ಯಾಕ್ಸಿ ಸೇವೆಯನ್ನು ಮರು ಆರಂಭಿಸಲು ಅನುಮತಿ ನೀಡಿದೆ.