ಬ್ರೆಜಿಲ್ನ ಖ್ಯಾತ ಮಹಿಳಾ ಫುಟ್ಬಾಲ್ ಆಟಗಾರ್ತಿ ಹಾಗೂ ಸೌದಿ ಅರೇಬಿಯಾದ ‘ಅಲ್-ನಸ್ರ್’ (Al Nassr) ತಂಡದ ನಾಯಕಿ ಕ್ಯಾಥೆಲಿನ್ ಸೌಸಾ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ. ಈ ಸುದ್ದಿಯನ್ನು ಅವರು ಅಧಿಕೃತವಾಗಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಖಚಿತಪಡಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿರುವ 29 ವರ್ಷದ ಕ್ಯಾಥೆಲಿನ್, ರಂಜಾನ್ ತಿಂಗಳಿಗೂ ಮುನ್ನವೇ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇಸ್ಲಾಂ ಧರ್ಮ ಸ್ವೀಕರಿಸಿದ ಬೆನ್ನಲ್ಲೇ ಅವರು ಮೆಕ್ಕಾಗೆ ತೆರಳಿ ‘ಉಮ್ರಾ’ (Umrah) ಕೂಡ ನೆರವೇರಿಸಿದ್ದಾರೆ. ಪವಿತ್ರ ಕಾಬಾದ ಎದುರು ಕಪ್ಪು ಅಬಾಯಾ ಧರಿಸಿ ನಿಂತಿರುವ ಫೋಟೋಗಳನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
”ನಾನು ಸರಿಯಾದ ಹಾದಿಯನ್ನು ಕಂಡುಕೊಳ್ಳಲು ಮತ್ತು ನನ್ನ ಅತ್ಯುತ್ತಮ ಆವೃತ್ತಿಯಾಗಲು ಪ್ರಯತ್ನಿಸುತ್ತಿದ್ದೆ. ಸಣ್ಣ ಹೆಜ್ಜೆಗಳು, ಬದಲಾವಣೆಯ ಹುಡುಕಾಟ ಮತ್ತು ಈ ಸುಂದರ ಬದುಕಿಗೆ ನಾನು ಕೃತಜ್ಞಳಾಗಿದ್ದೇನೆ” ಎಂದು ಕ್ಯಾಥೆಲಿನ್ ತಮ್ಮ ವಿಡಿಯೋದಲ್ಲಿ ಭಾವುಕರಾಗಿ ಹೇಳಿದ್ದಾರೆ.
ಅಲ್-ನಸ್ರ್ ಕ್ಲಬ್ ಕೂಡ ತಮ್ಮ ನಾಯಕಿಯ ನಿರ್ಧಾರವನ್ನು ಸ್ವಾಗತಿಸಿದ್ದು, ಸಹ ಆಟಗಾರರೊಂದಿಗೆ ಅವರು ಸಂಭ್ರಮಿಸುವ ವಿಡಿಯೋವನ್ನು ಹಂಚಿಕೊಂಡಿದೆ. “ಕ್ಯಾಥೆಲಿನ್ ಅವರ ಜೀವನದ ಈ ವಿಶೇಷ ಕ್ಷಣದಲ್ಲಿ ನಾವೂ ಭಾಗಿಯಾಗಿದ್ದೇವೆ. ಅವರ ಹೃದಯದಲ್ಲಿ ಶಾಂತಿ ನೆಲೆಸಲಿ” ಎಂದು ಕ್ಲಬ್ ಶುಭಹಾರೈಸಿದೆ. ಪ್ರಪಂಚದಾದ್ಯಂತ ಕ್ರೀಡಾಭಿಮಾನಿಗಳು ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.




