ಕೇರಳದ ನಾದಾಪುರಂ ನಲ್ಲಿ ತಿಂಗಳ ಹಿಂದೆ ಪ್ಲಸ್ ಒನ್ ನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳು ಗರ್ಭ ಧರಿಸಿದ ಪ್ರಕರಣವೊಂದು ಬೆಳಕಿಗೆ ಬಂದಿತ್ತು.
ಅದರ ಕಾರಣಕರ್ತರಾಗಿ ಮಗಳು ಕೈ ತೋರಿಸಿದ್ದು ತನ್ನ ಸ್ವಂತ ತಂದೆಯ ಕಡೆಯಾಗಿತ್ತು. ತಂದೆ ಗೋಗರೆದು ನಾನಲ್ಲ, ನನಗೆ ವಿಷಯವೇ ಗೊತ್ತಿಲ್ಲವೆಂದರೂ ಜೈಲು ಸೇರಬೇಕಾಯಿತು. ಡಿಎನ್ಎ ವರದಿ ಬಂದಾಗ ಮಗಳ ಗರ್ಭಕ್ಕೆ ಕಾರಣವಾದದ್ದು ತಂದೆಯಾಗಿರಲಿಲ್ಲ, ಬದಲಾಗಿ ಆಕೆಯ ಪ್ರಿಯಕರನಾಗಿತ್ತು. ಪ್ರಿಯಕರನನ್ನು ಬಚಾವಾಗಿಸಲು ಈಕೆ ಬಲಿಪಶುವನ್ನಾಗಿಸಿದ್ದು ಸ್ವತಃ ತಂದೆಯನ್ನಾಗಿತ್ತು.! ಎರಡು ದಿನಗಳ ಹಿಂದೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಂತಹ ಒಂದು ವಾರ್ತೆ ರಾಜ್ಯ ರಾಜಧಾನಿಯಾದ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆಯಿತು. ತನ್ನ ಹದಿಹರೆಯದ ಮಗಳು ಪ್ರೀತಿಯಲ್ಲಿ ಬಿದ್ದು, ಮೈಮರೆತು ಜೀವಿಸುವುದನ್ನು ಕಂಡು ಬುದ್ಧಿವಾದ ಹೇಳಿದಕ್ಕೆ ತನ್ನ ಪ್ರಿಯಕರ, ಆತನ ಗೆಳೆಯರ ಜೊತೆಗೂಡಿ ತನ್ನ ತಾಯಿಯ ಬಾಯಿಗೆ ಬಟ್ಟೆ ತುರುಕಿಸಿ ಕೊಂದು ಹಾಕಿ, ನಂತರ ಆತ್ಮಹತ್ಯೆಯೆಂದು ಬಿಂಬಿಸಲು ಕುತ್ತಿಗೆಗೆ ಶಾಲು ಹಾಕಿ ನೇತುಹಾಕಿದ ಭೀಭತ್ಸ ಘಟನೆ ನಡೆಯಿತು.
ತಾಯಿಯ ಅಂತ್ಯ ಸಂಸ್ಕಾರಕ್ಕೆ ಮಗಳು ಬಾರದಿದ್ದಾಗ ಅನುಮಾನದಲ್ಲಿ ಆಕೆಯ ಪ್ರಿಯಕರನ್ನು ವಿಚಾರಣೆಗೊಳಪಡಿಸಿದಾಗ ತಾಯಿಯನ್ನು ಕೊಂದದ್ದು ಹದಿಹರೆಯದ ಮಗಳೆಂಬ ಸತ್ಯ ಬೆಳಕಿಗೆ ಬಂದಿತ್ತು.

ಈ ಎರಡು ಘಟನೆಗಳು ಹೆತ್ತವರಿಗೆ ಹಲವು ಪಾಠಗಳನ್ನು ಕಲಿಸುವಂತದ್ದಾಗಿದೆ. ಆಧುನಿಕ ಸ್ವೇಚ್ಛಾಚ್ಚಾರದ ಬದುಕಿಗೆ ಜೋತು ಬಿದ್ದು ಮಕ್ಕಳು ಹೆತ್ತವರು ತಮಗಾಗಿ ಕಷ್ಟಪಟ್ಟು, ತ್ಯಾಗ ಸಹಿಸಿದ ಕಥೆಗಳನ್ನು ಮರೆತು ತಮ್ಮ ಕ್ಷಣದ ಸುಖಕ್ಕಾಗಿ ಹೆತ್ತವರನ್ನು ಸಮಾಜದ ಮುಂದೆ ಕೆಟ್ಟವರಾಗಿ ಬಿಂಬಿಸಲೂ, ಕೊಂದು ಬಿಡಲು ಕೂಡ ಹೇಸದಂತಹ ಅವಸ್ಥೆಗೆ ಬಂದು ತಲುಪಿದ್ದಾರೆ. ಪ್ರೀತಿಯಿಂದ ಮಕ್ಕಳನ್ನು ಸಲಹಿ, ಕೇಳಿದೆಲ್ಲವನ್ನೂ ಕೊಟ್ಟು, ತಮ್ಮ ಕಷ್ಟಗಳನ್ನೆಲ್ಲಾ ಮರೆಮಾಚಿ, ಮಕ್ಕಳ ಇಷ್ಟಗಳಿಗೆ ಧ್ವನಿಗೂಡುವ ಅದೆಷ್ಟೋ ಹೆತ್ತವರು ತಮ್ಮ ಕನಸುಗಳನ್ನೆಲ್ಲಾ ಸಾಯಿಸಿ ಮಕ್ಕಳಿಗೋಸ್ಕರ ಬದುಕು ಸಾಗಿಸುವ ಹಾದಿಯಲ್ಲಿ ಪಡುವ ಕಷ್ಟಗಳು, ನೋವುಗಳೆಲ್ಲವನ್ನೂ ಕಂಡೂ ಕಾಣದಂತೆ ಒಂದೆರಡು ಮಾತುಗಳಿಗೆ ಸೋತು, ಪ್ರೀತಿ, ಪ್ರೇಮದ ಹೆಸರಿನಲ್ಲಿ ಮೈಮರೆತಾಗ ಹೆತ್ತವರು ಹೇಳುವ ಬುದ್ಧಿಮಾತುಗಳು ಕೂಡ ಕೊಲ್ಲುವಷ್ಟರ ಮಟ್ಟಿಗೆ ದ್ವೇಷ ತರಿಸುವುದಾದರೆ, ಪ್ರಿಯಕರನ್ನು ರಕ್ಷಿಸುವುದಕ್ಕಾಗಿ, ಮಗಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ತಂದೆಯನ್ನೇ ಕಾನೂನಿನ ಕಟ ಕಟೆಯಲ್ಲಿ ಅನ್ಯಾಯವಾಗಿ ನಿಲ್ಲಿಸುವ ಮಗಳಾಗಿ ಬದಲಾಗುವುದಾದರೆ ಪ್ರೀತಿಯ ಅಮಲು ತನ್ನವರನ್ನೇ ಕಳೆದುಕೊಳ್ಳಲು ಪ್ರೇರೇಪಿಸುವುದರಲ್ಲಿ ಸಂಶಯವಿಲ್ಲ. ಮಾದಕ ವ್ಯಸನಿಗಳಾಗಿ ಬದಲಾದ ಗಂಡು ಮಕ್ಕಳು ಹೆತ್ತವರ ಪಾಲಿಗೆ ಮಾರಕರಾಗುತ್ತಿರುವ ಸಂದರ್ಭದಲ್ಲಿ, ಪ್ರೀತಿಯ ಅಮಲಿಗೊಳಗಾದ ಹೆಣ್ಣು ಮಕ್ಕಳು ಹೆತ್ತವರ ಪಾಲಿಗೆ ವಿಲನ್ ಗಳಾಗಿ ಬದಲಾಗುತ್ತಿರುವುದು ಕಾಲ ಘಟ್ಟದ ದುರಂತವೋ, ದುರ್ದೈವವೋ ಒಂದೂ ಅರ್ಥವಾಗುತ್ತಿಲ್ಲ.


Source: ಸ್ನೇಹಜೀವಿ ಅಡ್ಕ

Leave a Reply

Your email address will not be published. Required fields are marked *