ದೇಶದಲ್ಲಿ ವರದಕ್ಷಿಣೆ ಕಿರುಕುಳ ನಿಲ್ಲುವ ಯಾವ ಲಕ್ಷಣವೂ ಕಾಣುತ್ತಿಲ್ಲ, ಇತ್ತೀಚಿಗೆ ನೋಯ್ದಾದಲ್ಲಿ ಮಹಿಳೆಯೊಬ್ಬರನ್ನು ಬೆಂಕಿ ಹಚ್ಚಿ ಕೊಲೆಗೈದಿರುವ ವಿಚಾರ ಮಾಸುವ ಮುನ್ನವೇ ಉತ್ತರಪ್ರದೇಶದಲ್ಲಿ ಮತ್ತೊಂದು ಘಟನೆ ನಡೆದಿದೆ.

ವರದಕ್ಷಿಣೆ ಕಿರುಕುಳಕ್ಕೆ ವಿವಾಹವಾದ ಒಂದೇ ವರ್ಷಕ್ಕೆ ಮಹಿಳೆಯೊಬ್ಬಳನ್ನು ಆಕೆಯ ಪತಿ, ಅತ್ತೆ, ಮಾವ ಸೇರಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಅಮೋರ್ಹಾದಲ್ಲಿ ಬೆಳಕಿಗೆ ಬಂದಿದೆ. ಗುಲ್ ಫಿಜಾ, ಪತಿ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಜೀವ ಕಳೆದುಕೊಂಡ ನತದೃಷ್ಟೆ.

ಏನಿದು ಪ್ರಕರಣ ಗುಲ್ ಫಿಜಾ ಅವರು ಒಂದು ವರ್ಷದ ಹಿಂದೆ ಅದ್ರೋಹಾದ ಕಾಲಾ ಖೇಡಾ ಗ್ರಾಮದ ಪರ್ವೇಜ್ ಅವರನ್ನು ವಿವಾಹವಾದರು. ಇದಾದ ಬಳಿಕ ಪತಿ ಮನೆಯಿಂದ ವರದಕ್ಷಿಣೆ ಕಿರುಕುಳ ನೀಡಲು ಶುರುವಾಗಿದೆ ಎಂದು ಗುಲ್ ಫಿಜಾ ತನ್ನ ಪೋಷಕರಲ್ಲಿ ಹೇಳಿಕೊಂಡಿದ್ದಳು, ಆದರೆ ತಾಯಿ ಮನೆಯವರು ಮಗಳನ್ನು ಪತಿ ಮನೆಯಲ್ಲಿ ಸ್ವಲ್ಪ ಹೊಂದಿಕೊಂಡು ಹೋಗುವಂತೆ ಹೇಳಿದ್ದಾರೆ. ಆದರೂ ಪತಿ ಮನೆಯವರ ಕಿರುಕುಳ ಮಾತ್ರ ಕಡಿಮೆಯಾಗಿಲ್ಲ.
ಇತ್ತೀಚಿಗೆ ಗುಲ್ ಫಿಜಾ ಅವರ ಅತ್ತೆ ಮಾವ ತನ್ನ ಮಗನಿಗೆ ಹೊಸ ಕಾರು ಮತ್ತು ಹಣ ನೀಡುವಂತೆ ಕೇಳಿಕೊಂಡಿದ್ದಾರೆ ಆದರೆ ಇದನ್ನು ನೀಡಲು ಸಾಧ್ಯವಾಗದಿದ್ದಾಗ ಆಗಸ್ಟ್ 11 ರಂದು ಅತ್ತೆ ಮಾವ ಸೇರಿಕೊಂಡು ಸೊಸೆಗೆ ಬಲವಂತವಾಗಿ ಆ್ಯಸಿಡ್ ಕುಡಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಅತ್ತೆ ಮನೆಯವರೇ ಮೊರಾದಾಬಾದ್‌ನ ಆಸ್ಪತ್ರೆಗೆ ದಾಖಲಿಸಿ ಸೊಸೆ ಮನೆಯವರಿಗೆ ವಿಚಾರ ತಿಳಿಸಿದ್ದಾರೆ. ಇದಾದ ಬಳಿಕ ಸುಮಾರು ಹದಿನೇಳು ದಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಗುಲ್ ಫಿಜಾ ಉಸಿರುಚೆಲ್ಲಿದ್ದಾಳೆ.
ಪತಿ ಮನೆಯವರ ವಿರುದ್ಧ ದೂರು:
ಇನ್ನು ಮಗಳು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುತ್ತಿದ್ದಂತೆ ಪೋಷಕರು ಮೊರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಅದರಂತೆ ಪತಿ ಪರ್ವೇಜ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಸೇರಿದಂತೆ ಹಲ್ಲೆ ಮತ್ತು ಇತರ ಆರೋಪಗಳಿಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರಿಂದ ತನಿಖೆ:
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಸಾಗಿಸಿದ್ದು ಇದರ ವರದಿ ಬಂದ ಬಳಿಕ ಹೆಚ್ಚಿನ ತನಿಖೆ ನಡೆಸುವುದಾಗಿ ಹೇಳಿದ್ದಾರೆ.