ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ರಂಗೇರಿದ್ದು, ಪ್ರಚಾರದ ಅಂತಿಮ ದಿನದಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರೊಂದಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಾಹಿದ್ ತೆಕ್ಕಿಲ್ ಬಿರುಸಿನ ಮತಬೇಟೆ ನಡೆಸಿದರು.

​ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರೂ ಆಗಿರುವ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಕಳೆದ 8 ದಿನಗಳಿಂದ ವಾರ್ಡ್ ಸಂಖ್ಯೆ 8ರ ಸುರೇಶ್ ನಗರದಲ್ಲಿ (ಜಾಲಿನಗರ) ವ್ಯಾಪಕ ಪ್ರಚಾರ ಕೈಗೊಂಡಿದ್ದಾರೆ. ಬೂತ್ ಸಂಖ್ಯೆ 56 ರಿಂದ 63ರ ವ್ಯಾಪ್ತಿಯಲ್ಲಿ ಕುಣಿಗಲ್ ಶಾಸಕ ಹೆಚ್.ಡಿ. ರಂಗನಾಥ್ ಅವರೊಂದಿಗೆ ಸೇರಿ ಬಿರುಸಿನ ಪ್ರಚಾರ ನಡೆಸಿದರು. ಈ ಅವಧಿಯಲ್ಲಿ 800ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿರುವ ಅವರು, ಸುಮಾರು 4675 ಮತದಾರರನ್ನು ಖುದ್ದಾಗಿ ಸಂಪರ್ಕಿಸಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿದರು.

​ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಚಂದ್ರಪ್ಪ, ವಾರ್ಡ್ ಅಧ್ಯಕ್ಷ ವಿಶ್ವನಾಥ್, ಸ್ಥಳೀಯ ಮುಖಂಡರಾದ ಶಿವಾಜಿ, ಮುಬಾರಕ್, ಸುರೇಶ್, ರಹಮತ್, ಸುದರ್ಶನ್ ಮತ್ತು ರಾಜೇಶ್ ಉಪಸ್ಥಿತರಿದ್ದರು.

ಅಂತಿಮ ದಿನದ ಅಬ್ಬರದ ರೋಡ್ ಶೋ:

ಪ್ರಚಾರದ ಕೊನೆಯ ದಿನವಾದ ಇಂದು ಆಜಾದ್ ನಗರ, ಭಾಷಾ ನಗರ ಸೇರಿದಂತೆ ನಗರದ ಪ್ರಮುಖ ಮುಸ್ಲಿಂ ಬಾಹುಳ್ಯದ ಪ್ರದೇಶಗಳು ಹಾಗೂ ಗ್ರಾಮೀಣ ಭಾಗಗಳಲ್ಲಿ ಬೃಹತ್ ರೋಡ್ ಶೋ ಮತ್ತು ಬಹಿರಂಗ ಸಭೆ ನಡೆಸಲಾಯಿತು.

​ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ನಾಸಿರ್ ಹುಸೇನ್, ಸಂಸದೆ ಪ್ರಭಾ ಮಲ್ಲಿಕಾರ್ಜುನ, ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ, ಎಂ.ಸಿ. ಸುಧಾಕರ್, ಮಾಂಕಾಳು ವೈದ್ಯ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕ ರಿಜ್ವಾನ್ ಅರ್ಷದ್, ಸುಳ್ಯ ನಗರ ಸಭೆಯ ನಾಮ ನಿರ್ದೇಶಿತ ಸದಸ್ಯ ಸಿದ್ದಿಕ್ ಕೊಕ್ಕೋ ಹಾಗೂ ಅಭ್ಯರ್ಥಿ ಸಮರ್ಥ ಶಾಮನೂರು ಮಲ್ಲಿಕಾರ್ಜುನ ಅವರು ಅಂತಿಮ ಹಂತದ ಪ್ರಚಾರದಲ್ಲಿ ಪಾಲ್ಗೊಂಡು ಶಕ್ತಿ ಪ್ರದರ್ಶನ ಮಾಡಿದರು.

​”ಈ ಉಪಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಮತದಾರರು ನಮ್ಮ ಕೈಹಿಡಿಯಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಮೂವತ್ತು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಲಿದ್ದಾರೆ,” ಎಂದು ಟಿ.ಎಂ. ಶಾಹಿದ್ ತೆಕ್ಕಿಲ್ ಮಾಧ್ಯಮಗಳ ಮುಂದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *