ಒಂದು ಸುಂದರವಾದ ಊರು.ಆ ಊರಿನಲ್ಲಿ ಒಂದು ಸಿರಿವಂತ ಸಾಂಪ್ರದಾಯಕ ಕುಟುಂಬ.ಆ ಸಿರಿವಂತ ಕುಟುಂಬದಲ್ಲಿ ಒಬ್ಬ ಅಜ್ಜಿ ಆ ಅಜ್ಜಿಗೆ ಒಬ್ಬ ಮಗ. ಅವರ ಕುಟುಂಬದಲ್ಲಿ ಏನೇ ನಡೆಯಬೇಕೆಂದರೂ ಅದಕ್ಕೆ ಆ ಅಜ್ಜಿಯ ಒಪ್ಪಿಗೆ ಬೇಕೇ ಬೇಕು ಒಂದು ರೀತಿಯಲ್ಲಿ ಅಜ್ಜಿ ಹೇಳಿದಂತೆಯೇ ನಡೆಯಬೇಕು. ಅಜ್ಜಿಯ ಮಗ ಕೂಡ ಅಷ್ಟೇ ಅಜ್ಜಿ ಹೇಳಿದಂತೆಯೇ ಕೇಳುತ್ತಿದ್ದ ಜೊತೆಗೆ ಅವನು ಮಹಾ ಕ್ರೂರಿಯೂ ಆಗಿದ್ದ.ಆದರೆ ಅವನ ಹೆಂಡತಿ ತುಂಬಾ ಒಳ್ಳೆಯವಳಾಗಿದ್ದಳು.ಅವನಿಗೆ ಇಬ್ಬರು ಹೆಣ್ಣು ಮಕ್ಕಳು. ಅವನು ಮತ್ತು ಅವನ ತಾಯಿ ಹೆಂಡತಿಗೆ ತುಂಬಾ ಹಿಂಸೆ ನೀಡುತ್ತಿದ್ದರು.ಅವಳು ಗರ್ಭವತಿ ಆಗಿದ್ದಳು.ಈ ಬಾರಿ ಏನಾದರು ಹೆಣ್ಣು ಮಗು ಆದರೆ ಮಗುವನ್ನು ಸಾಯಿಸಿಯೇ ಸಿದ್ದ ಎಂದು ಬೆದರಿಸಿದ್ದ.

ಇದರಿಂದ ಅವನ ಹೆಂಡತಿ ಒಂದು ವೇಳೆ ಈ ಬಾರಿ ಹೆಣ್ಣು ಮಗು ಹುಟ್ಟಿದರೆ ಆ ಮಗುವನ್ನು ಸಾಯಿಸಿ ಬಿಟ್ಟರೆ ಎಂದು ಮನದಲ್ಲೇ ನೊಂದುಕೊಳ್ಳುತ್ತಿದ್ದಳು.ಅಲ್ಲದೆ ಅವಳು ದಿನಾ ದೇವಸ್ಥಾನಕ್ಕೆ ಹೋಗಿ ಒಂದು ವೇಳೆ ಹೆಣ್ಣು ಮಗು ಆದರೆ ಆ ಮಗುವನ್ನು ನೀನೇ ಕಾಪಾಡಬೇಕು ಎಂದು ದೇವರಲ್ಲಿ ಕೇಳಿಕೊಳ್ಳುತ್ತಾಳೆ.

ಅಂತೂ ಇಂತೂ ಒಂದು ದಿನ ಇವಳಿಗೆ ಹೆರಿಗೆ ನೋವು ಶುರುವಾಗುತ್ತದೆ. ಆಗ ಅವಳ ಗಂಡ ಮತ್ತು ಅತ್ತೆ ಸೂಲಗಿತ್ತಿಯನ್ನು ಮನೆಗೆ ಕರೆಸಿಕೊಳ್ಳುತ್ತಾರೆ.ಹಾಗು ಅವಳೊಂದಿಗೆ ಒಂದು ವೇಳೆ ಹೆಣ್ಣು ಮಗು ಹುಟ್ಟಿದರೆ ಕೂಡಲೇ ಅದನ್ನು ನಮ್ಮ ಕೈಗೆ ಒಪ್ಪಿಸಬೇಕು ಎಂದು ತಾಕೀತು ಮಾಡುತ್ತಾರೆ ಅಲ್ಲದೆ ಹೆಣ್ಣು ಮಗು ಹುಟ್ಟಿದರೆ ಅದನ್ನು ಸಾಯಿಸಲು ಕಾವಲುಗಾರರನ್ನು ಬೇರೆ ನೇಮಿಸಿರುತ್ತಾರೆ. ಹೆಂಡತಿಯ ಪರಿಸ್ಥಿತಿ ಹೇಳ ತೀರದು ಒಂದು ಕಡೆ ಸಹಿಸಲಾಗದ ಹೆರಿಗೆ ನೋವು ಇನ್ನೊಂದೆಡೆ ಹೆಣ್ಣು ಮಗು ಹುಟ್ಟಿದರೆ ಅದನ್ನು ದುಷ್ಟರ ಕೈಯಿಂದ ರಕ್ಷಿಸುವ ಚಿಂತೆ! ಆ‌ ಸಹಿಸಲಾಗದ ನೋವಿನ ಮಧ್ಯೆ ಯೂ ಆ ತಾಯಿ ಸೂಲಗಿತ್ತಿಯೊಂದಿಗೆ ತನಗೆ ಒಂದು ವೇಳೆ ಹೆಣ್ಣು ಮಗು ಹುಟ್ಟಿದರೂ ಕೂಡ ಗಂಡು ಮಗುವೇ ಜನಿಸಿದೆ ಎಂದು ತನ್ನ ಅತ್ತೆ ಹಾಗು ಗಂಡನಿಗೆ ಸುಳ್ಳು ಹೇಳುವಂತೆ ಬೇಡಿಕೊಳ್ಳುತ್ತಾಳೆ.ಇವಳ ಬೇಡಿಕೆಗೆ ಸೂಲಗಿತ್ತಿಯ ಮನಸ್ಸು ಕರಗಿ ಸುಳ್ಳು ಹೇಳಲು ಒಪ್ಪಿಕೊಳ್ಳುತ್ತಾಳೆ.

‌ಹೊರಗಿನ ಜಗುಲಿಯಲ್ಲಿ ಹೊಂಚು ಹಾಕಿ ದುಷ್ಟರು ಕಾಯುತ್ತಿದ್ದಾರೆ.ತಾಯಿ ನೋವು ತಾಳಲಾರದೆ ನರಳುತ್ತಿದ್ದಾಳೆ ಇದೆಲ್ಲದರ ನಡುವೆ ಕಿವಿಗಪ್ಪಳಿಸಿದ ಮುದ್ದು ಕಂದನ ಕೂಗು!‌ ಹೆರಿಗೆ ಮಾಡಿಸಿದ ಸೂಲಗಿತ್ತಿಯ ಮುಖದಲ್ಲಿ ಮನೆ ಮಾಡಿದ ಭಯ ಆತಂಕವೇ ಮುಂದಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವಂತಿತ್ತು.ಆ ತಾಯಿ ಏನಾಗಬಾರದು ಎಂದುಕೊಂಡಿದ್ದಳೋ ಕೊನೆಗೂ ಅದೇ ಆಗಿತ್ತು! ಹೆಣ್ಣು ಮಗು! ಆದರೆ ಆ ಸತ್ಯ ಹೊರಗೆ ಹಸಿದ ಹುಲಿಗಳಂತೆ ಕಾಯುತ್ತಿದ್ದ ದುಷ್ಟರ ಕಿವಿಗೆ ಬೀಳುವಂತಿಲ್ಲ. ಕೊನೆಗೂ ಆ ಹೆರಿಗೆ ಮಾಡಿಸಿದ ಮಹಾತಾಯಿ ಕೊಟ್ಟ ಮಾತಿನಂತೆ ನಡೆದುಕೊಂಡಳು.ಅತಿದೊಡ್ಡ ಸತ್ಯ ಒಂದು ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೇ ಸುಡುತ್ತಾ ಸುಮ್ಮನಾಯಿತು.ಮಂಚದ ಮೇಲೆ ನೋವು ತಿಂದು ಮಲಗಿದ್ದ ಆ ಮುಗ್ಧ ಜೀವವನ್ನೊಮ್ಮೆ ನೋಡಿ ಸತ್ಯ ಯಾವುದೇ ಕಾರಣಕ್ಕೂ ಹೊರಗೆ ಬರಬಾರದೆಂದು ನಿಶ್ಚಯಿಸಿಕೊಂಡಿದ್ದಳು.

ಅಷ್ಟೊತ್ತಿಗಾಗಲೇ ಮಗುವಿನ ಅಳುವಿನ ಶಬ್ದ ಕೇಳಿ ಹೊರಗಿದ್ದವರು ಹಸಿದ ಹದ್ದುಗಳಂತೆ ಸತ್ಯ ತಿಳಿದುಕೊಳ್ಳಲು ಕಾಯುತ್ತಿದ್ದರು.ಅಷ್ಟೊತ್ತಿಗೆ‌ ಮೆಲ್ಲಗೆ ಹೊರಗೆ ಬಂದ ಸೂಲಗಿತ್ತಿ ಶಾಂತಮ್ಮ ‘ನೀವೆಲ್ಲಾ ಅಂದುಕೊಂಡಂತೆ ಗಂಡು ಮಗು ಹುಟ್ಟಿದೆ’ಎಂದು‌ ಹೇಳಿದರು ಈ ವಿಷಯ ಕೇಳಿ ದುಷ್ಟ ಕೂಟದ ಸದಸ್ಯರಿಗೆಲ್ಲ ಸಂಭ್ರಮವೋ ಸಂಭ್ರಮ! ಕಾವಲು ಗಾರರು ಮನೆಯ ಜಗುಲಿಯಿಂದ ಮಾಯವಾದರು.ಊರಿಗೆಲ್ಲಾ ಈ ಕೂಡಲೇ ಹಬ್ಬದೂಟ ಹಾಕಿಸಬೇಕು ಎಂದು ಅಪ್ಪಣೆ ಆಯ್ತು ದುಷ್ಟ ಕೂಟದ ಸದಸ್ಯರೆಲ್ಲ ಮನೆಗೆ ವಾರಸ್ದಾರನ ಆಗಮನವಾಗಿದೆ ಎಂದು ಸಂತಸದಲ್ಲಿದ್ದರು.ಇತ್ತ‌ ಕಡೆ ಸೂಲಗಿತ್ತಿ ಶಾಂತಮ್ಮ ಗಾಬರಿಯಿಂದ ಓಡಿ ಬಂದು ಮಲಗಿದ್ದ ತಾಯಿಯನ್ನು ಎಚ್ಚರಿಸಿ ನಡೆದ ಸಂಗತಿಯನ್ನೆಲ್ಲ ತಿಳಿಸಿ ನಾನು ಸದ್ಯಕ್ಕೆ ಅಪಾಯದಿಂದ ಈ ಮಗುವನ್ನು ಪಾರು ಮಾಡಿದ್ದೇನೆ.ನಿನ್ನ ಬಳಿ ಸಮಯ ತುಂಬಾ ಕಡಿಮೆ ಇದೆ ಏನಾದರು ಮಾಡಿ ಈ ಮಗುವನ್ನು ಸುರಕ್ಷಿತವಾಗಿರಿಸು ಎಂದು ಹೇಳಿ ಹೊರಟು ಹೋದರು.

ಪಾಪ ಹೆತ್ತ ತಾಯಿಗೆ ಆಕಾಶವೇ ಕಳಚಿ ಬಿದ್ದಂತಾಯಿತು ಆದರೂ ಈ ಮಗುವನ್ನು ಹೇಗಾದರೂ ಈ ದುಷ್ಟರ ಕೈಯಿಂದ ರಕ್ಷಿಸಲೇ ಬೇಕೆಂದು ತೀರ್ಮಾನಿಸಿದಳು.ಅಷ್ಟೊತ್ತಿಗಾಗಲೇ ಅವಳ ಅತ್ತೆಯ ತಲೆಯಲ್ಲಿ ಸಣ್ಣದೊಂದು ಅನುಮಾನದ ಹುಳ ಹೊಕ್ಕಿತ್ತು ಯಾಕೆಂದರೆ ಮಗುವನ್ನು ಎತ್ತಿಕೊಳ್ಳಲು ಯಾರೇ ಹತ್ತಿರ ಹೋದರೂ ತಾಯಿ ವಿಚಿತ್ರವಾಗಿ ವರ್ತಿಸತೊಡಗಿದ್ದಳು.

ಅಲ್ಲಿಗೆ ಅವರ ಅನುಮಾನ ಇನ್ನೂ ಬಲವಾಗಿ ಬಲವಂತವಾಗಿ ಮಗುವನ್ನು ಅವಳ ಕೈಯಿಂದ ಎತ್ತಿಕೊಳ್ಳಲು ಪ್ರಯತ್ನಿಸಿದರು.ಎಷ್ಟೇ ಪ್ರಯತ್ನಿಸಿದರೂ ಆ ಮಗುವನ್ನು ರಕ್ಷಿಸಲು ಸಾಧ್ಯವಾಗಲೇ ಇಲ್ಲ.ಯಾವ ಸತ್ಯ ಯಾರಿಗೂ ತಿಳಿಯಲೇ ಬಾರದು ಎಂದುಕೊಂಡಿದ್ದರೋ ಕೊನೆಗೂ ಆ ಸತ್ಯ ಎಲ್ಲರ ಮುಂದೆ ಬಯಲಾಯಿತು.

ಬಯಲಾದದ್ದೇ ತಡ ದುಷ್ಟ ಕೂಟದ ಸದಸ್ಯರಲ್ಲಿ ಅಡಗಿ ಕುಳಿತ ರಾಕ್ಷಸತ್ವ ಮತ್ತೆ ಚಿಗುರೊಡೆಯಿತು ಅತ್ತೆ ಮತ್ತು ಗಂಡ ಇಬ್ಬರೂ ಸೇರಿ ಆ ಮಗುವನ್ನು ಹೇಗಾದರೂ ಕಿತ್ತುಕೊಳ್ಳಬೇಕೆಂದು ತಾಯಿಗೆ ಬಾಣಂತಿ ಎಂದು ಸಹ ನೋಡದೆ ಚಿತ್ರ ಹಿಂಸೆ ನೀಡಿ ಆ ಮಗುವನ್ನು ಅವಳ ಕೈಯಿಂದ ಕಿತ್ತುಕೊಂಡರು ಅಷ್ಟೇ ಅಲ್ಲದೆ ಅಲ್ಲೇ ನಿಂತಿದ್ದ ತಮ್ಮ ಚೇಲಗಳೊಂದಿಗೆ ಆ ಮಗುವನ್ನು ಕೊಟ್ಟು ಯಾವುದೇ ಕಾರಣಕ್ಕೂ ಈ ಮಗು ಉಳಿಯಬಾರದೆಂದು ತಾಕೀತು ಮಾಡಿದರು ಅದರಂತೆ ಆ ಚೇಲಾಗಳು ಮಗುವನ್ನು ಎತ್ತಿಕೊಂಡು ಕಾಡಿನ ಕಡೆ ನಡೆದರು ಇತ್ತ ಕಡೆ ಆ ತಾಯಿಯು ಕೂಡ ಸದ್ದಿಲ್ಲದಂತೆ ಅವರನ್ನೇ ಕತ್ತಲೆಯಲ್ಲಿ ಹಿಂಬಾಲಿಸಿ ತೊಡಗಿದಳು.ಆ ಹಸುಗೂಸನ್ನು ಕಾಡಿಗೆ ತೆಗೆದುಕೊಂಡು ಬಂದು ಇನ್ನೇನು ಎಸೆಯಬೇಕು ಅಷ್ಟರಲ್ಲಿ ಯಾವುದೋ ಕಾಡು ಪ್ರಾಣಿಯ ಕ್ರೂರ ಘರ್ಜನೆ !ಆ ಘರ್ಜನೆಯನ್ನು ಕೇಳಿ ಭಯಭೀತ ಗೊಂಡ ಚೇಲಾಗಳು ಆ ಹಸುಗೂಸನ್ನು ಅಲ್ಲೇ ಬಿಟ್ಟು ಗಾಬರಿಯಿಂದ ಮನೆಯಕಡೆ ಓಡಿದರು ಹಾಗು ಕಾಡಿನಲ್ಲಿ ನಡೆದ ನಿಜ ಸಂಗತಿಯನ್ನು ತಿಳಿಸದೆ ಹೋದ ಕೆಲಸ ಸರಾಗವಾಗಿ ಮುಗಿದಿದೆ ಎಂದು ಹೇಳಿದರು.ಈ ಮಾತನ್ನು ಕೇಳಿ ಗಂಡ ಮತ್ತು ಅತ್ತೆಗೆ ತುಂಬಾ ಸಂತೋಷವಾಯಿತು.

ಆದರೆ ಇತ್ತ ಕಡೆ ಅವರನ್ನು ಗೊತ್ತಿಲ್ಲದೆ ಹಿಂಬಾಲಿಸಿ ಬಂದಿದ್ದ ತಾಯಿ ಅವರು ಆಚೆ ಹೋದ ಕೂಡಲೇ ಮಗುವನ್ನು ಎತ್ತಿಕೊಳ್ಳುತ್ತಾಳೆ, ಕಂಬನಿ ಸುರಿಸುತ್ತಾಳೆ,ಮಗುವನ್ನು ಮುದ್ದಾಡುತ್ತಾಳೆ,ಆ ದುಷ್ಟರಿಂದ ಹೇಗೆ ಪಾರು ಮಾಡಲಿ ಎಂದು ಯೋಚಿಸುತ್ತಾಳೆ.ಕೊನೆಗೆ ಆ ಮಗುವನ್ನು ಎತ್ತಿಕೊಂಡು ಅಲ್ಲೇ ಇದ್ದ ದೇವಾಲಯಕ್ಕೆ ಬರುತ್ತಾಳೆ.ಮನಸ್ಸಿನಲ್ಲಿ ಅದೇನೋ ದೃಡ ನಿರ್ಧಾರ ಮಾಡಿಕೊಂಡಂತೆ ಪ್ರಾರ್ಥಿಸುತ್ತಾಳೆ “ತಾಯೀ ಇಂದಿನಿಂದ ಇದು ನಿನ್ನ ಮಗು,ಈ ಮಗುವನ್ನು ನಿನ್ನ ಮಡಿಲಿಗೆ ಹಾಕುತ್ತಿರುವೆ ಇಂದಿನಿಂದ ಇದರ ಜವಾಬ್ದಾರಿ ನಿನ್ನದು!ಈ ಮಗುವನ್ನು ರಕ್ಷಿಸು‌ ನನಗೆ ಬೇರೆ ದಾರಿ ಇಲ್ಲ”ಎಂದು ಪ್ರಾರ್ಥಿಸಿ ಭಾರವಾದ ಮನಸ್ಸಿನಿಂದ ಮನೆಯ ಕಡೆ ಕತ್ತಲಿನಲ್ಲಿ ಹೆಜ್ಜೆ ಹಾಕಿದಳು.ಕತ್ತಲಲ್ಲಿ ಕಾಲಿಗೆ ಚುಚ್ಚುತ್ತಿದ್ದ ಮುಳ್ಳಿಗಿಂತ ಭೀಕರವಾಗಿತ್ತು ಅವಳ ಒಡಲ ನೋವು.

ಪ್ರಾಪ್ತಿ ಗೌಡ

Leave a Reply

Your email address will not be published. Required fields are marked *