ಪ್ರಸ್ತುತ ಕೊಡಗು ಜಿಲ್ಲಾ ಲೋಕಾಯುಕ್ತ ಡಿ ವೈ ಎಸ್ ಪಿ ಯಾಗಿ ಕರ್ತವ್ಯದಲ್ಲಿ

ಕರಾವಳಿ ಭಾಗದ ಹೆಮ್ಮೆಯ ದಕ್ಷ, ಧೈರ್ಯ,ಪ್ರಾಮಾಣಿಕ ಪೊಲೀಸ್ ಅಧಿಕಾರಿ ದಿನಕರ್ ಶೆಟ್ಟಿ ಸುರತ್ಕಲ್ ರವರು ಇದೀಗ ಕರ್ನಾಟಕ ಲೋಕಾಯುಕ್ತ ಇಲಾಖೆಯ ಕೊಡಗು ಜಿಲ್ಲಾ ಡಿ ವೈ ಎಸ್ ಪಿ ಯಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ದಿನಕರ್ ಶೆಟ್ಟಿಯವರು ಕಳೆದ 29 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಹಾಗೂ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಖಡಕ್ ಅಧಿಕಾರಿ ಎಂದು ಗುರುತಿಸಿಕೊಂಡಿದ್ದು ಭ್ರಷ್ಟರ ಸಿಂಹ ಸ್ವಪ್ನ ವಾಗಿದ್ದಾರೆ. ಮೂಲತಹ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಭಾಗದ ಸುರತ್ಕಲ್ ನಿವಾಸಿ ದಿವಂಗತ ಬೆರ್ಮು ಶೆಟ್ಟಿ ಹಾಗೂ ಸುಂದರಿ ಶೆಟ್ಟಿ ದಂಪತಿಯ ಪುತ್ರರಾಗಿದ್ದಾರೆ.
ಇವರ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೆ ಅರ್ ಈ ಸಿ ಸುರತ್ಕಲ್ ಮತ್ತು ಕಾಲೇಜು ಶಿಕ್ಷಣ ಗೋವಿಂದ ದಾಸ್ ಕಾಲೇಜಿನಲ್ಲಿ ಬಿ ಕಾಮ್ ಪದವಿ ಮೂಲಕ ಪೂರೈಸಿ ದವರು. ವಿದ್ಯಾರ್ಥಿ ಜೀವನದಲ್ಲಿಯೇ ಶಿಸ್ತುಬದ್ದ ಹಾಗೂ ನಾಯಕತ್ವದ ಗುಣಗಳಿಂದ ಬೆಳೆದು ಕ್ರೀಡೆ, ಸಾಹಸ ಮುಂತಾದ ಚಟುವಟಿಕೆ ಗಳಲ್ಲಿ ಮುಂಚೂಣಿಯಲ್ಲಿದ್ದವರು. 1996 ರ ರಲ್ಲಿ ಕರ್ನಾಟಕ ಪೊಲೀಸ್ ಅಕಾಡಮಿಗೆ ಪ್ರವೇಶ, ನಂತರ 1997 ರಲ್ಲಿ ಗುಲ್ಬರ್ಗಾದಲ್ಲಿ ಪ್ರಾಯೋಗಿಕ ತರಬೇತಿಯನ್ನು ಪೂರೈಸಿಕೊಂಡರು. ತಮ್ಮ ಸಾಧನೆಯ ಗುರಿಯನ್ನು ಮುಟ್ಟಿದ ಕೂಡಲೇ 1998 ರಲ್ಲಿ ಗುಲ್ಬರ್ಗಾ ದ ಕೊಂಚವರಮ್ ಪೊಲೀಸ್ ಠಾಣೆಯಲ್ಲಿ ಉಪ ನಿರೀಕ್ಷರಾಗಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯಕ್ಕೆ ಪ್ರವೇಶಿಸಿದರು.
ಬಳಿಕ ತಮ್ಮ ಪಿ ಎಸ್ ಐ ಸೇವೆಯ ಕೆಲವೇ ವರ್ಷದ ಅವಧಿಯಲ್ಲಿಯೇ 2002 ರಲ್ಲಿ ವೃತ್ತ ನಿರೀಕ್ಷಕರಾಗಿ ಮುಂಬಡ್ತಿ ಗೊಂಡ ಇವರು ಬೀದರ್, ಬಳ್ಳಾರಿ ಶಿರಗುಪ್ಪ, ಮಂಗಳೂರಿನ ಬಜ್ಪೆ, ಪಾಂಡೇಶ್ವರ ಮುಂತಾದ ಕಡೆಗಳಲ್ಲಿ ಉತ್ತಮ ಮತ್ತು ಪ್ರಾಮಾಣಿಕ ಸೇವೆಯನ್ನು ನೀಡಿದವರು. 2017 ರಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಡಿ ವೈ ಎಸ್ ಪಿ ಯಾಗಿ ಮುಂಬಡ್ತಿಗೊಂಡ ಇವರು 2019 ರಿಂದ 2021 ರವರೆಗೆ ದ.ಕ ಜಿಲ್ಲೆ ಪುತ್ತೂರು ಉಪ ವಿಭಾಗದಲ್ಲಿ ಜನ ಸ್ನೇಹಿ ಡಿ ವೈ ಎಸ್ ಪಿ ಯಾಗಿ ಕರ್ತವ್ಯ ನಿರ್ವಹಿಸಿ ಪುತ್ತೂರು, ಸುಳ್ಯ ಮುಂತಾದ ಕಡೆಗಳಲ್ಲಿ ದಕ್ಷ ಅಧಿಕಾರಿಯಾಗಿ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ ಎನ್ ಅರ್ ಸಿ, ಸಿ ಎ ಎ ಯಂತಹ ಪ್ರತಿಭಟನಾ ಸಮಯ ಮತ್ತು ಕೋವಿಡ್ ನಂತಹ ಸಂಕಷ್ಟ ಸಂದರ್ಭದಲ್ಲಿ ಪುತ್ತೂರು ಹಾಗೂ ಸುಳ್ಯ ಮುಂತಾದ ಕಡೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯನ್ನು ಕಂಡವರು. ಪುತ್ತೂರು ಬಳಿಕ ಮಂಗಳೂರಿನ ಎಸ್ ಪಿ ಕಚೇರಿಯಲ್ಲಿ ಒಂದು ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ಮಂಗಳೂರು ದಕ್ಷಿಣ ಉಪ ವಿಭಾಗ ದಲ್ಲಿ ಎ ಸಿ ಪಿ ಯಾಗಿಯೂ ಕರ್ತವ್ಯ ನಿರ್ವಹಿಸಿ ಅಲ್ಲಿಂದ ರಾಮನಗರ ಕ್ಕೆ ಡಿ ವೈ ಎಸ್ ಪಿ ಯಾಗಿ ತೆರಳಿದರು. ಇದೀಗ ಕೊಡಗು ಜಿಲ್ಲಾ ಲೋಕಾಯುಕ್ತ ಕಚೇರಿಗೆ ಡಿ ವೈ ಎಸ್ ಪಿ ಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದು, ವೀರರ ನಾಡು ಎಂದೇ ಖ್ಯಾತಿ ಪಡೆದಿರುವ ಕೊಡಗಿನ ಮಣ್ಣಿನಲ್ಲಿ ಅವರ ಮುಂದಿನ ಕರ್ತವ್ಯದ ದಿನಗಳು ಮುಂದುವರಿಯಲಿದೆ.
*ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋದರು ಸಾಹಸ ಮೆರೆದು ಬದುಕಿ ಬಂದವರು*
2009 ರಲ್ಲಿ ಬಳ್ಳಾರಿಯಲ್ಲಿ ವೃತ್ತ ನಿರೀಕ್ಷರಾಗಿ ಸೇವೆಯಲ್ಲಿದ್ದ ಸಂಧರ್ಭ ಅಂದು ಸಂಭವಿಸಿದ್ದ ಭಾರಿ ಮಳೆಗೆ ಪ್ರದೇಶದಲ್ಲಿ ಉಂಟಾಗಿದ್ದ ಭೀಕರ ಪ್ರವಾಹದಲ್ಲಿ ರಕ್ಷಣಾ ಕಾರ್ಯದ ವೇಳೆ ಬೋಟ್ ಮುಳುಗಡೆ ಗೊಂಡು ಪ್ರವಾಹ ನೀರಿನಲ್ಲಿ ಕೊಚ್ಚಿ ಹೋಗಿದ್ದ ಸುಮಾರು ಹತ್ತು ಮಂದಿ ಪೊಲೀಸರಲ್ಲಿ ಇವರು ಕೂಡ ಓರ್ವರಾಗಿದ್ದರು. ಭೀಕರ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಸಂಧರ್ಭದಲ್ಲೂ ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳದ ಇವರು ಕ್ಷಣ ಮಾತ್ರದಲ್ಲಿ ಸಿಕ್ಕಿದ ಮರದ ರೆಂಬೆಯನ್ನು ಹಿಡಿದು ಜೀವ ರಕ್ಷಿಸಿ ಕ್ಕೊಂಡಿದ್ದರು. ಹಾಗೂ ಇವರ ತಂಡದ ಸದಸ್ಯರುಗಳು ಜೀವದ ಹಂಗು ತೊರೆದು ಪರಸ್ಪರ ಒಬ್ಬರನೊಬ್ಬರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು.
ಧರಿಸಿದ್ದ ಲೈಫ್ ಜಾಕೇಟು ಗಳನ್ನು ಉಪಯೋಗಿಸಿ ನೀರಿನಲ್ಲಿ ಮುಳುಗಲು ಸಿದ್ದವಾಗಿದ್ದ ಒಂದು ಕಟ್ಟಡದ ಮೇಲೇರಿ ಜೀವವನ್ನು ರಕ್ಷಸಿ ಕೊಂಡವರು. ಬೋರ್ಗರೆಯುತಿದ್ದ ನೀರಿನ ನಡುವೆ ಇದ್ದ ಮನೆಯಲ್ಲಿ ಸುಮಾರು 30 ಗಂಟೆಗಳ ಕಾಲ ಇದ್ದು ಬಳಿಕ ಎಲಿಕಾಫ್ಟರ್ ಮೂಲಕ ಸೇನಾ ಪಡೆಗಳ ಸಹಾಯದಿಂದ ಅಂದು ಬದುಕಿ ಬಂದಿದ್ದರು. ಅಲ್ಲದೆ ಪಿ ಎಸ್ ಐ ಯಾಗಿ ಇದ್ದ ಸಂಧರ್ಭ ಬೀದರ್ ನ ಕೊಂಚವರಮ್ ನಲ್ಲಿ ಓರ್ವ ನಕ್ಸಲ್ ವ್ಯಕ್ತಿಯನ್ನು ಸಾಹಸ ಮಯವಾಗಿ ಬಂಧಿಸಿರುವ ಇವರು 2001 ರಲ್ಲಿ ಶ್ರೀಗಂಧ ಕಳ್ಳತನದ ಆರೋಪಿಗೆ ಫೈರಿಂಗ್ ಮಾಡುವ ಮೂಲಕ ಆತನ ನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದವರು. ಮತ್ತೊಂದು ಘಟನೆಗೆ ಸಂಭಂದಿಸಿ ಬೀದರ್ ನ ಬಾಲ್ಕಿಯಲ್ಲಿ ಒಂಟಿ ಮಹಿಳೆಯ ಕೊಲೆ ಪ್ರಕರಣದ ಕೊಲೆಗಾರನನ್ನು ಹಿಡಿದು ಎಡೆಮುರಿ ಕಟ್ಟಿದ್ದರು. ಪಾಂಡೇಶ್ವರ ಡಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಸಿಗುವಂತೆ ಮಾಡಿದಲ್ಲದೆ ಮತ್ತೊಂದು ಪ್ರಕರಣದಲ್ಲಿ ಪ್ರಿಯಕರನ ಪತ್ನಿಯ ಕೊಲೆ ಮಾಡಿದ ಮಹಿಳೆಗೆ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ಆಗುವಂತೆಯೂ ಮಾಡಿದ್ದರು. ದೊಡ್ಡ ದೊಡ್ಡ ಸಮಾವೇಶ ಕಾರ್ಯಕ್ರಮಗಳಲ್ಲಿ ಮತ್ತು ಲಕ್ಷಾಂತರ ಮಂದಿ ಜನರು ಸೇರುವ ಕಾರ್ಯಕ್ರಮ ಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೂ ಪಾತ್ರರಾಗಿದ್ದರು. ಹೀಗೆ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ ಮತ್ತು ಸೇವಾ ಮನೋಭಾವವನ್ನು ಬೆಳೆಸಿ ಕ್ಕೊಂಡವರು. ಈ ಎಲ್ಲಾ ಗುಣಗಳಿಂದಲೇ 2010 ರಲ್ಲಿ ಇವರ ಉತ್ತಮ ಸೇವೆಗೆ ಕರ್ನಾಟಕ ರಾಜ್ಯ ಮುಖ್ಯ ಮಂತ್ರಿಯವರಿಂದ ಚಿನ್ನದ ಪದಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದು ನಮ್ಮ ಕರಾವಳಿಗೆ ಸಂದ ಗೌರವಗಳ ಸಾಲಿನಲ್ಲಿ ಒಂದಾಗಿದೆ. ದಿನಕರ್ ಶೆಟ್ಟಿ ಅವರ ವೃತ್ತಿಜೀವನದಲ್ಲಿ ಅವರ ನೈತಿಕತೆ, ವೃತ್ತಿಪರತೆ, ಪ್ರಾಮಾಣಿಕತೆ, ಧೈರ್ಯ ಮತ್ತು ಜನಸ್ನೇಹಿ ಕೆಲಸದ ಕಾರ್ಯ ಶೈಲಿಗಾಗಿ ಈಗಾಗಲೇ ಅನೇಕ ಸ್ಥಳಗಳಲ್ಲಿ ಗುರುತಿಸಿ ಕ್ಕೊಂಡಿರುವ ಅವರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ, ಅಪರಾಧವನ್ನು ತಡೆಗಟ್ಟುವಲ್ಲಿ ಮತ್ತು ಸಮುದಾಯದೊಂದಿಗೆ ಸಕ್ರಿಯವಾಗಿ ಸಂವಹನ ನಡೆಸುವಲ್ಲಿ ಅವರು ಯಶಸ್ವಿ ಯಾಗಿದ್ದು ಇಂದು ಅವರನ್ನು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಅಧಿಕಾರಿಗಳಲ್ಲಿ ಒಬ್ಬರನ್ನಾಗಿ ಮಾಡಿದೆ.ಸಮಾಜದಲ್ಲಿ ಶಾಂತಿ ಸುವ್ಯವಸ್ಧೆ ಕಾಪಾಡಲು ದಿನಕರ್ ಶೆಟ್ಟಿಯವರಂತಹ ಅಧಿಕಾರಿಗಳ ಅವಶ್ಯಕತೆ ಬಹು ಮುಖ್ಯವಾಗಿದ್ದು ಭ್ರಷ್ಟಾಚಾರ ರಹಿತ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕಾಗಿ
ಇವರ ಸೇವೆ ಸದಾ ಮುಂದುವರಿಯುತ್ತಾ ಇರಲಿ ಎಂದು ಆಶಿಸುತ್ತಾ…..
✍️ಹಸೈನಾರ್ ಜಯನಗರ ಪತ್ರ ಕರ್ತರು, ಸುಳ್ಯ.