ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಭಾರತ ದೇಶವು ತನ್ನ ವಿಭಿನ್ನ ಸಂಸ್ಕೃತಿ ಸಂಸ್ಕಾರಗಳಿಂದ ಜಗತ್ತಿನೆಲ್ಲೆಡೆ ಮನೆ ಮಾತಾಗಿರುವುದಂತೂ ಸತ್ಯ.ಉಳಿದೆಲ್ಲಾ ದೇಶಗಳಿಗೆ ಹೋಲಿಸಿದರೆ ಭಾರತ ದೇಶದ ಆಚರಣೆಗಳು, ಸಂಸ್ಕೃತಿಗಳೆಲ್ಲಾ ವಿಭಿನ್ನ ಕಾರಣ ನಮ್ಮ ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ.ವಿವಿಧ ಭಾಷೆಗಳನ್ನು ಮಾತಾನಾಡುವ, ವಿವಿಧ ಹಬ್ಬಗಳನ್ನು ಆಚರಿಸುವ ವಿವಿಧ ನಂಬಿಕೆಗಳನ್ನು ಪಾಲಿಸುವ ಜನರಿದ್ದಾರೆ ನಮ್ಮ ಭಾರತದಲ್ಲಿ.ಅದನ್ನೆಲ್ಲಾ ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ.
ಅದರಲ್ಲೂ ವಿಶೇಷವಾಗಿ ನಮ್ಮ ಭಾರತದಲ್ಲಿ ಹಲವಾರು ಹಬ್ಬಗಳನ್ನು ಸಂಭ್ರಮ-ಸಡಗರದಿಂದ ಆಚರಿಸುತ್ತಾರೆ. ಅಷ್ಟೇ ಅಲ್ಲ ಹೀಗೆ ಆಚರಿಸುವ ಹಬ್ಬ ಗಳಿಗೆ ಅದರದ್ದೇ ಆದ ಇತಿಹಾಸ, ಕಾರಣ ಮತ್ತು ಮಹತ್ವವಿದೆ ಒಂದು ರೀತಿಯಲ್ಲಿ ನಮ್ಮ ಭಾರತ ಹಬ್ಬಗಳ ತವರೂರು ಇದ್ದಂತೆ.ಇಲ್ಲಿ ವಿವಿಧ ಧರ್ಮ ಮತಗಳ ಜನರಿರುವ ಕಾರಣ ಅವರವರ ನಂಬಿಕೆಗೆ ತಕ್ಕಂತೆ ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸುತ್ತಾರೆ.
ಹೀಗೆ ಆಚರಿಸುವ ಹಬ್ಬಗಳಲ್ಲಿ ನಮ್ಮ ದೀಪಾವಳಿ ಹಬ್ಬ ಒಂದು ಮುಖ್ಯವಾದ ಹಬ್ಬ ಮತ್ತು ಬಹುದೊಡ್ಡ ಹಬ್ಬ.ಇದನ್ನು ಬೆಳಕಿನ ಹಬ್ಬ ಎಂದು ಕರೆಯುವಂತದ್ದು.ಈ ದೀಪಾವಳಿ ಹಬ್ಬ ಬಂತೆಂದರೆ ಸಾಕು ಮನೆ-ಮನಗಳಲ್ಲೆಲ್ಲಾ ಸಂಭ್ರಮ ಸಡಗರ.ಅಷ್ಟು ಮಾತ್ರವಲ್ಲದೆ ವರ್ಷಕೊಮ್ಮೆ ಬರುವ ಈ ದೀಪಾವಳಿ ಹಬ್ಬ ಸಂಬಂಧಗಳನ್ನು ಗಟ್ಟಿಗೊಳಿಸುವ ಹಬ್ಬವು ಕೂಡ ಹೌದು ಬಂಧು ಬಾಂಧವರೆಲ್ಲಾ ಸೇರಿ ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ.ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ ಮನೆಗಳಲ್ಲಿ ವಿವಿಧ ಸಿಹಿ ತಿಂಡಿಗಳನ್ನು ಮಾಡುತ್ತಾರೆ.ಅಷ್ಟೇ ಅಲ್ಲ ದೀಪಾವಳಿ ಹಬ್ಬವನ್ನು ಒಟ್ಟು ಐದು ದಿನ ಆಚರಿಸುತ್ತಾರೆ ಅದರಲ್ಲೂ ಮೂರು ದಿನಗಳಂತೂ ಬಹಳ ಮುಖ್ಯ ವಾಗಿರುತ್ತದೆ.ಈ ಮೂರು ದಿನಗಳಲ್ಲಿ ವಿವಿಧ ರೀತಿಯ ಆಚರಣೆಗಳನ್ನು ಮಾಡುತ್ತಾರೆ.ಇದೆಲ್ಲಾ ಒಂದು ಕಡೆ ಆದರೆ ಈ ದೀಪಾವಳಿ ಹಬ್ಬಕ್ಕೆ ಬಹು ದೊಡ್ಡ ಹಿನ್ನೆಲೆ ಇದೆ.ಪುರಾಣ ಕಥೆಗಳೂ ಇವೆ.ದೀಪಾಳಿಯ ಮೊದಲ ದಿನ ನರಕ ಚತುರ್ದಶಿ, ಎರಡನೆಯ ದಿನ ದೀಪಾವಳಿ, ಹಾಗು ಮೂರನೆಯ ದಿನವನ್ನು ಬಲಿ ಪಾಡ್ಯಮಿ ಎಂದು ಆಚರಿಸಲಾಗುತ್ತದೆ ಈ ಆಚರಣೆಗಳ ಹಿಂದೆ ಪುರಾಣ ಕಥೆಗಳಿವೆ.ಅವುಗಳತ್ತ ಗಮನ ಹರಿಸುವುದಾದರೆ:
ನರಕ ಚತುರ್ದಶಿಯ ಪೌರಾಣಿಕ ಹಿನ್ನೆಲೆ:-
ಹಿರಣ್ಯಾಕ್ಷ ನೆಂಬ ರಾಕ್ಷಸ ಭೂದೇವಿಯನ್ನು ಅಪಹರಿಸಿ ಸಮುದ್ರದ ಆಳದಲ್ಲಿ ಬಂಧಿಸಿ ಇಡುತ್ತಾನೆ.ಆಗ ಭೂದೇವಿಯು ತನ್ನನ್ನು ಈ ಅಸುರಿನಿಂದ ರಕ್ಷಿಸು ಎಂದು ಮಹಾ ವಿಷ್ಣುವಿನಲ್ಲಿ ಕೇಳಿಕೊಳ್ಳುತ್ತಾಳೆ.ಆಗ ಮಹಾವಿಷ್ಣು ಭೂದೇವಿಯನ್ನು ರಕ್ಷಿಸಲು ವರಹಾವತಾರವನ್ನು ತಾಳಿ ಸಮುದ್ರದ ಆಳದಲ್ಲಿ ಯುದ್ಧವನ್ನು ಮಾಡಿ ಭೂದೇವಿಯನ್ನು ರಕ್ಷಿಸುತ್ತಾನೆ . ತದನಂತರದಲ್ಲಿ ಭೂದೇವಿಯು ವಿಷ್ಣುವಿನಿಂದ ಗರ್ಭವತಿ ಆಗುತ್ತಾಳೆ ಆ ಸಂದರ್ಭದಲ್ಲಿ ಭೂದೇವಿ ಹಾಗು ವಿಷ್ಣುವಿಗೆ ಜನಿಸಿದ ಮಗುವೇ ನರಕಾಸುರ. ಇದೇ ಸಂದರ್ಭದಲ್ಲಿ ಭೂದೇವಿಯು ತನ್ನ ಮಗನಿಗಾಗಿ ವಿಷ್ಣುವಿನಿಂದ ಒಂದು ವರವನ್ನು ಪಡೆದಿದ್ದಳು ಈ ವರದಿಂದ ನರಕಾಸುರ ಅತ್ಯಂತ ಪ್ರಬಲ ಮತ್ತು ಶಕ್ತಿ ಶಾಲಿಯಾಗಿದ್ದ. ಅಷ್ಟೇ ಅಲ್ಲ ನರಕಾಸುರನು ಕೂಡ ಅತ್ಯಂತ ಕಠಿಣ ತಪಸ್ಸನ್ನು ಮಾಡಿ ಬ್ರಹ್ಮ ನಿಂದ ಸಾಕಷ್ಟು ವರವನ್ನು ಪಡೆದುಕೊಂಡು ಇನ್ನಷ್ಟು ಶಕ್ತಿa ಶಾಲಿಯಾದ. ಆದರೆ ನರಕಾಸುರ ಬಾಣಾಸುರನೆಂಬ ಮತ್ತೊಬ್ಬ ಅಸುರನ ಸಹವಾಸ ಮಾಡಿ ತುಂಬಾ ದುಷ್ಟನಾದ. ನರಕಾಸುರ ಎಷ್ಟು ಪರಾಕ್ರಮಿ ಆಗಿದ್ದನೆಂದರೆ ಅವನ ವಿರುದ್ಧ ಯಾರೇ ನಿಂತರೂ ಅವರನ್ನು ಅತ್ಯಂತ ಸುಲಭವಾಗಿ ಕೊಂದು ಹಾಕುತ್ತಿದ್ದ.ಅವನನ್ನು ಯಾರು ಕೊಲ್ಲಲು ಸಾಧ್ಯವಿರಲಿಲ್ಲ ಅದಕ್ಕೆ ಕಾರಣ ಅವನು ಕಠೋರ ತಪಸ್ಸನ್ನು ಮಾಡಿ ಬ್ರಹ್ಮನಿಂದ ಅಮರತ್ವದ ವರವನ್ನು ಪಡೆದು ಕೊಂಡಿದ್ದ.ಈ ವರದ ಪ್ರಕಾರ ಅವನ ತಾಯಿ ಮಾತ್ರ ಅವನನ್ನು ಕೊಲ್ಲಲು ಸಾಧ್ಯ. ಹಾಗಾಗಿ ತನಗೆ ಸಾವಿಲ್ಲ ಎಂದು ಬೀಗುತ್ತಿದ್ದ.ಎಲ್ಲಾ ರಾಜ ರೊಂದಿಗೆ ಯುದ್ಧವನ್ನು ಮಾಡಿ ಸೋಲಿಸಿ ಅವರ ಸ್ಥಾನಗಳನ್ನೆಲ್ಲಾ ಕಿತ್ತುಕೊಂಡಿದ್ದ. ಸ್ವತಃ ದೇವರಾಜ ಇಂದ್ರನೇ ನರಕಾಸುರನ ಎದುರು ಸೋತು ಹೋಗಿದ್ದ. ನರಕಾಸುರನ ಉಪಟಳ ತಾಳಲಾರದೆ ಭೂಲೋಕ ವಾಸಿಗಳು ಹಾಗು ದೇವಾನು ದೇವತೆಗಳು ತಮ್ಮನ್ನು ರಕ್ಷಿಸುವಂತೆ ಶ್ರೀ ಕೃಷ್ಣ ನ ಪತ್ನಿ ಸತ್ಯಭಾಮೆಯಲ್ಲಿ ಕೇಳಿ ಕೊಳ್ಳುತ್ತಾರೆ. ಸತ್ಯಭಾಮೆಯನ್ನೇ ಯಾಕೆ ಕೇಳಿಕೊಳ್ಳುತ್ತಾರೆ ಎಂದರೆ ಅವಳು ಭೂಮಿ ತಾಯಿಯ ಇನ್ನೊಂದು ಅವತಾರವೇ ಆಗಿದ್ದಳು. ಸ್ತ್ರೀಯರೊಂದಿಗಿನ ನರಕಾಸುರನ ವರ್ತನೆಯನ್ನು ಕೇಳಿ ಕೋಪಗೊಂಡ ಸತ್ಯಭಾಮೆಯು ಯುದ್ಧ ಮಾಡಲು ಅನುಮತಿಗಾಗಿ ನರಕಾಸುರನ ದುಷ್ಟ ವರ್ತನೆ ಯನ್ನು ತನ್ನ ಪತಿ ಶ್ರೀ ಕೃಷ್ಣನಿಗೆ ತಿಳಿಸಿದಳು.ಈ ವಿಷಯ ಕೇಳಿ ಕೋಪಗೊಂಡ ಶ್ರೀ ಕೃಷ್ಣನು ತನ್ನ ಪತ್ನಿಯೊಂದಿಗೆ ಗರುಡ ಪರ್ವತವನ್ನು ಸವಾರಿ ಮಾಡುತ್ತಾ ನರಕಾಸುರನ ವಾಸ ಸ್ಥಳಕ್ಕೆ ದಾಳಿ ಮಾಡುತ್ತಾನೆ. ಆ ಯುದ್ಧ ಭಯಂಕರ ವಾಗಿತ್ತು.ಆದರೆ ಶ್ರೀ ಕೃಷ್ಣನು ಎಷ್ಟು ಪ್ರಯತ್ನಿಸಿದರೂ ನರಕಾಸುರನನ್ನು ಸಂಹರಿಸಲು ಆಗಲಿಲ್ಲ.ಕೊನೆಗೆ ಆ ವರದ ಪ್ರಕಾರ ಸತ್ಯಭಾಮೆಯು ಅನೇಕ ಬಾಣಗಳನ್ನು ಬಿಟ್ಟು ನರಕಾಸುರನನ್ನು ಸಂಹಾರ ಮಾಡಿದಳು.ಹಾಗಾಗಿ ಅಂದಿನ ದಿನವನ್ನು ನರಕಾಸುರ
ಕಣ್ಮರೆ ಆದ ದಿನ ಮತ್ತು ಆ ರಾಕ್ಷಸನ ತೊಂದರೆ ಜನರಿಂದ ದೂರ ಆದ ಕಾರಣಕ್ಕಾಗಿ ಆ ದಿನವನ್ನು ಹಬ್ಬದ ದಿನ ಎಂದು ದೀಪವನ್ನು ಬೆಳಗಿಸುವ ಮೂಲಕ ಆಚರಿಸಲಾಗುತ್ತದೆ.
ಅಷ್ಟೇ ಅಲ್ಲ ಈ ದೀಪಾವಳಿ ಆಚರಣೆಗೆ ಇನ್ನೊಂದು ಬಲವಾದ ಕಾರಣ ವಿದೆ. ವಿಷ್ಣು ವಿನ ದಶಾವತಾರದಲ್ಲಿ ಏಳನೇ ಅವತಾರ ಶ್ರೀ ರಾಮನ ಅವತಾರ . ಶ್ರೀ ರಾಮನು ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ರಾವಣನನ್ನು ಸಂಹರಿಸಿ ಸೀತಾ ಮಾತೆಯನ್ನು ಕರೆದುಕೊಂಡು ಮರಳಿ ಅಯೋಧ್ಯೆಗೆ ಇದೇ ದಿನ ಮರಳುವಂತದ್ದು ಆದರೆ ಆ ದಿನ ಅಮಾವಾಸ್ಯೆ ಆದ ಕಾರಣ ಅಯೋಧ್ಯೆಯ ರಾಜ್ಯವೆಲ್ಲಾ ಕತ್ತಲೆಯಿಂದ ಕೂಡಿತ್ತು.ಆದ ಕಾರಣ ಪ್ರಜೆಗಳೆಲ್ಲಾ ಆ ಕತ್ತಲೆಯನ್ನು ಹೋಗಲಾಡಿಸಲು, ಶ್ರೀ ರಾಮನಿಗೆ ದೀಪಗಳನ್ನು ಹಿಡಿದು ಸ್ವಾಗತ ಕೋರುತ್ತಾರೆ ಹೀಗಾಗಿ ಪ್ರತಿ ವರ್ಷ ಆ ದಿನವನ್ನು ದೀಪವನ್ನು ಬೆಳಗಿಸಿ ಆಚರಿಸುತ್ತಾರೆ.
ದೀಪಾವಳಿಯನ್ನು ಆಚರಿಸಲು ಇನ್ನೊಂದು ಅತಿ ದೊಡ್ಡ ಕಾರಣವಿದೆ ಆ ಕಾರಣ ಏನೆಂದರೆ ಬಲಿ ಎಂಬ ಅಸುರ ರಾಜನಾಗಿದ್ದ.ಶ್ರೇಷ್ಟ ರಾಜರಲ್ಲಿ ಅವನು ಒಬ್ಬನಾಗಿದ್ದ.ಸತ್ಯ ಹಾಗು ಪ್ರಾಮಾಣಿಕತೆ ಹೊಂದಿದ್ದ. ಜೊತೆಗೆ ವಿಷ್ಣುವಿನ ಪರಮ ಭಕ್ತನಾಗಿದ್ದ.ಹೀಗಾಗಿ ದಿನದಿಂದ ದಿನಕ್ಕೆ ಅವನ ಶಕ್ತಿ ಹೆಚ್ಚುತ್ತಲೇ ಇತ್ತು. ಹೀಗಿರಲು ಒಮ್ಮೆ ಬಲಿ ಚಕ್ರವರ್ತಿ ಇಂದ್ರನೊಂದಿಗೆ ಯುದ್ಧ ಮಾಡಲು ಮುಂದಾದ.ಅಷ್ಟೇ ಅಲ್ಲದೆ ದೇವತೆಗಳನ್ನೆಲ್ಲಾ ದ್ವೇಷಿ ಸುತ್ತಿದ್ದ ಕಾರಣ ಅವರೊಂದಿಗೆ ಯುದ್ದ ಮಾಡಿ ಗೆದ್ದು ಇಂದ್ರನ ಸಿಂಹಾಸನವನ್ನು ಗೆಲ್ಲಬೇಕು ಎಂದುಕೊಂಡಿದ್ದ.ಇದರಿಂದ ಭಯಗೊಂಡ ಇಂದ್ರ ದೇವನು ವಿಷ್ಣುವಿನ ಬಳಿ ಹೋಗಿ ತನ್ನನ್ನು ರಕ್ಷಿಸುವಂತೆ ಬೇಡಿಕೊಳ್ಳುತ್ತಾನೆ . ಅದೇ ಸಮಯದಲ್ಲಿ ಬಲಿಯು ಎಲ್ಲಾ ಲೋಕವನ್ನು ತಾನೇ ಆಳಬೇಕೆಂಬ ದುರಾಸೆಯಿಂದ ಅಶ್ವಮೇಧ ಯಾಗ ಮಾಡಲು ಮುಂದಾಗುತ್ತಾನೆ ಇದನ್ನು ಹೇಗಾದರು ಮಾಡಿ ತಡೆಯಲೇ ಬೇಕೆಂಬ ಉದ್ದೇಶದಿಂದ ಕಶ್ಯಪ ಮತ್ತು ಅದಿತಿಯ ಮಗನಾಗಿ ವಾಮನ ಮೂರ್ತಿ ಎಂಬ ಹೆಸರಿನಿಂದ ವಿಷ್ಣುವು ಪುಟ್ಟ ಬಾಲಕನಾಗಿ ಜನಿಸುತ್ತಾನೆ .ಆ ಬಾಲಕನು ಬಲಿ ಚಕ್ರವರ್ತಿಯು ಅಶ್ವಮೇಧ ಯಾಗ ನಡೆಸುತ್ತಿದ್ದಂತಹ ಜಾಗಕ್ಕೆ ಬರುತ್ತಾನೆ.ತನ್ನನ್ನು ಭೇಟಿ ಆಗಲು ಬಂದಿರುವ ಬ್ರಾಹ್ಮಣ ನನ್ನು ಕಂಡು ಏನು ಬೇಕು ಎಂದು ಕೇಳುತ್ತಾನೆ ಆಗ ಆ ಬಾಲಕ’ನನಗೆ ಕೇವಲ ಮೂರು ಪಾದಗಳನ್ನು ಇಡುವಷ್ಟು ಜಾಗ ಕೊಡು ಎಂದು ಕೇಳುತ್ತಾನೆ. ಆಗ ಇದಕ್ಕೆ ಬಲಿ ಚಕ್ರವರ್ತಿ ಒಪ್ಪಿಕೊಳ್ಳುತ್ತಾನೆ.ಆಗ ಅಲ್ಲಿಗೆ ಬಂದ ಶುಕ್ರಾಚಾರ್ಯರಿಗೆ ಆ ಬಾಲಕ ವಿಷ್ಣು ಎಂದು ತಿಳಿದು ನೀನು ಇದಕ್ಕೆ ಒಪ್ಪಬೇಡ ಇಲ್ಲಿ ಏನೋ ತೊಂದರೆ ಇದೆ ಎಂದು ಬಲಿ ಚಕ್ರವರ್ತಿಗೆ ಹೇಳುತ್ತಾರೆ.ಆದರೆ ಬಲಿಚಕ್ರವರ್ತಿ ಕೊಟ್ಟ ಮಾತಿಗೆ ತಪ್ಪದೆ ಒಪ್ಪಿಕೊಂಡ.ಆಗ ನೋಡ ನೋಡುತ್ತಿದ್ದಂತೆ ಆ ಬಾಲಕ ದೊಡ್ಡದಾಗಿ ಬೆಳೆದು ಅವನ ಮೊದಲ ಹೆಜ್ಜೆಯನ್ನು ಬಲಿಯ ಪೂರ್ತಿ ಸಾಮ್ರಾಜ್ಯದ ಮೇಲೆ ಇಡುತ್ತಾನೆ ಮತ್ತೊಂದು ಹೆಜ್ಜೆಯನ್ನು ಎಲ್ಲಿ ಇಡಬೇಕೆಂದು ಕೇಳಿದಾಗ ಆಕಾದತ್ತ ಕೈ ತೋರಿಸುತ್ತಾನೆ ಆಗ ಆ ಬಾಲಕ ಇಡೀ ಆಕಾಶದಲ್ಲಿ ಹೆಜ್ಜೆ ಇರಿಸಿದ ಆಗ ಬಲಿ ಚಕ್ರವರ್ತಿಗೆ ಇವನು ಬೇರೆ ಯಾರೂ ಅಲ್ಲ ಮಹಾ ವಿಷ್ಣುವೇ ಎಂದು ತಿಳಿದಿತ್ತು.ಮೂರನೇ ಹೆಜ್ಜೆ ಎಲ್ಲಿ ಇಡಲಿ ಎಂದು ಕೇಳಿದಾಗ ತನ್ನ ತಲೆಯ ಮೇಲೆಯೇ ಇಡಲು ಹೇಳುತ್ತಾನೆ .ಆಗ ಮಹಾವಿಷ್ಣು ಅವನ ತಲೆಯ ಮೇಲೆ ಪಾದವನ್ನು ಇಟ್ಟು ಅವನನ್ನು ಪಾತಾಳಕ್ಕೆ ತುಳಿದು ಇವನು ನನ್ನ ಪರಮ ಭಕ್ತನಾದ ಕಾರಣ ಪ್ರತಿ ವರ್ಷ ಪೂಜಿಸಲಾಗುತ್ತದೆ ಎಂದು ಹೇಳುತ್ತಾನೆ ಆದುದರಿಂದ ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಿ ದೀಪವನ್ನು ಇಟ್ಟು ಪೂಜಿಸಲಾಗುತ್ತದೆ.
ಇನ್ನು ಈ ದೀಪಾವಳಿ ಹಬ್ಬದ ಆಚರಣೆಗಳ ಬಗ್ಗೆ ನೋಡುವುದಾದರೆ ದೀಪಾವಳಿ ಹಬ್ಬವನ್ನು ಐದು ದಿನಗಳ ಕಾಲ ಆಚರಣೆ ಮಾಡುವಂತದ್ದು ಆದರೆ ಹೆಚ್ಚಿನ ಕಡೆಗಳಲ್ಲಿ ಇದನ್ನು ಮೂರು ದಿನಗಳಿಗೆ ಸೀಮಿತಗೊಳಿಸುತ್ತಾರೆ . ಆದರೆ ದೀಪಾವಳಿ ಹಬ್ಬದ ನಿಜವಾದ ಆಚರಣೆ ಐದು ದಿನ.
ಮೊದಲನೆಯ ದಿನ ನೀರು ತುಂಬಿ ಇಡುವುದು: ತ್ರಯೋದಶಿಯ ರಾತ್ರಿಯಂದು ತಾಮ್ರದ ಪಾತ್ರೆಯನ್ನು ಶುದ್ದೀಕರಿಸಿ ಪವಿತ್ರ ಗಂಗೆಯನ್ನು ತುಂಬಿಸಿ ಪೂಜಿಸಿ ಇರುವಂತದ್ದು.ಅಲ್ಲದೆ ಇದು ಸ್ವಚ್ಛತೆಯ ಸಂಕೇತವಾಗಿದೆ.
ಎರಡನೇಯ ದಿನ ನರಕ ಚತುರ್ದಶಿ:-ಈ ದಿನದಂದು ಎಲ್ಲರೂ ಬೇಗನೆ ಎದ್ದು ಅಭ್ಯಂಜನ ಸ್ನಾನ ಮಾಡುವಂತದ್ದು ಅಂದರೆ ಈ ದಿನ ಮನೆಯವರೆಲ್ಲ ಎಣ್ಣೆ ಹಚ್ಚಿ ಸ್ನಾನ ಮಾಡುವುದು ಇದರ ಹಿಂದೆ ವೈಜ್ಞಾನಿಕ ಕಾರಣಗಳು ಕೂಡ ಇವೆ ಅಭ್ಯಂಜನ ಸ್ನಾನ ಮಾಡುವುದರಿಂದ ದೇಹದ ಸ್ನಾಯುಗಳು ಬಲಿಷ್ಠಗೊಳ್ಳುತ್ತವೆ , ತ್ವಚೆಯ ಕಾಂತಿ ಹೆಚ್ಚುತ್ತದೆ , ದೇಹದಲ್ಲಿ ರಕ್ತ ಸಂಚಾರಕ್ಕೆ ಸಹಕಾರಿಯಾಗುತ್ತದೆ ಹಾಗು ಮಾನಸಿಕ ಒತ್ತಡ ಕಡಿಮೆ ಆಗುತ್ತದೆ.
ಮೂರನೇಯ ದಿನ ಅಂದರೆ ದೀಪಾವಳಿಯಂದು ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ . ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡುವುದರಿಂದ ಲಕ್ಷ್ಮಿ ಸಂಪೂರ್ಣವಾಗಿ ಒಲಿಯುತ್ತಾಳೆ ಹಾಗು ಸಕಲ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಇದೆ.ಆದ ಕಾರಣ ಹಿರಿಯರೆಲ್ಲಾ ಸೇರಿ ಲಕ್ಷ್ಮಿ ಪೂಜೆಯನ್ನು ಅದ್ದೂರಿಯಾಗಿ ನೆರವೇರಿಸುತ್ತಾರೆ.ತದನಂತರದಲ್ಲಿ ಸಿಹಿ ಹಂಚುತ್ತಾರೆ.ಅಲ್ಲದೆ ಅದೇ ದಿನ ಅಂಗಡಿ ಪೂಜೆಯನ್ನು ಸಹ ಮಾಡುತ್ತಾರೆ.
ನಾಲ್ಕನೇಯ ದಿನ:-ಬಲಿ ಪಾಡ್ಯಮಿ ಈ ದಿನ ರಾಕ್ಷಸ ರಾಜನಾದ ಬಲಿ ಚಕ್ರವರ್ತಿಯನ್ನು ಅವನ ಉಪಟಳ ಮಿತಿಮೀರಿ ಹೋದಾಗ ಮಹಾವಿಷ್ಣು ವಾಮನ ಅವತಾರವನ್ನು ತಾಳಿ ವದಿಸಿದ ದಿನ.ದಾನ ಶೂರನಾಗಿದ್ದ ಬಲಿಯನ್ನು ಮೆಚ್ಚಿದ ಮಹಾವಿಷ್ಣು ಪ್ರತಿ ವರ್ಷ ಬಲಿಪಾಡ್ಯಮಿಯಂದು ಜನ ಬಲೀಂದ್ರ ಪೂಜೆ ಮಾಡುತ್ತಾರೆ ಎಂದು ಹೇಳಿ ಆತನಿಗೆ ಮೋಕ್ಷವನ್ನು ಪ್ರಸಾದಿಸುತ್ತಾನೆ.ಈ ದಿನದ ಮತ್ತೊಂದು ವಿಶೇಷತೆ ಎಂದರೆ ಗೋಪೂಜೆ ಈ ದಿನ ಗೋವುಗಳ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ ಗೋ ಪೂಜೆಯನ್ನು ಮಾಡಿ ಗೋವುಗಳಿಗೆ ಅಕ್ಕಿ, ಬೆಲ್ಲ , ಹಾಗು ಇನ್ನಿತರ ತಿನಿಸುಗಳನ್ನು ಕೊಡಲಾಗುವುದು.
ಇನ್ನು ದೀಪಾವಳಿಯ ಐದನೇಯ ದಿನ ಹಾಗು ಕೊನೆಯ ದಿನವನ್ನು ಯಮ ದ್ವಿತೀಯ ಎಂದು ಕರೆಯಲಾಗುತ್ತದೆ.ಈ ದಿನವನ್ನು ಸಹೋದರರ ಹಬ್ಬವೆಂದು ಕೂಡ ಕರೆಯುತ್ತಾರೆ.ಮದುವೆಯಾಗಿ ತಮ್ಮ ಗಂಡನ ಮನೆಯಲ್ಲಿರುವ ಅಕ್ಕ ತಂಗಿಯರು ತಮ್ಮ ಅಣ್ಣ ತಮ್ಮಂದಿರನ್ನು ಕರೆಸಿ ಎಣ್ಣೆ ಮತ್ತು ಅರಿಶಿಣವನ್ನು ಹಚ್ಚಿ ಹುತ್ತದ ಮಣ್ಣನ್ನು ಅವರ ಭುಜಕ್ಕೆ ಲೇಪಿಸಿ ಎರಡು ತಂಬಿಗೆ ನೀರನ್ನು ಹಾಕಿ ನೂರು ವರ್ಷ ಸುಖವಾಗಿ ಇರಲಿ,ದೃಡ ಕಾಯ ಶರೀರ ಹೊಂದಲಿ ಹಾಗು ಯಮನಿಂದ ಯಾವುದೇ ತೊಂದರೆ ಬಾರದಿರಲಿ ಹಾಗು ಆಯಸ್ಸು ವೃದ್ಧಿ ಆಗಲಿ ಎಂದು ಹರಸುತ್ತಾರೆ.ಆಗ ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆಯನ್ನು ನೀಡುತ್ತಾರೆ. ಈ ಆಚರಣೆಯನ್ನು ಯಮ ದ್ವಿತೀಯ ಎಂದು ಕರೆಯಲಾಗುತ್ತದೆ.
ಒಟ್ಟಿನಲ್ಲಿ ವರ್ಷಕ್ಕೆ ಒಮ್ಮೆ ಬರುವ ಈ ದೀಪಾವಳಿ ಹಬ್ಬವು ಮನೆ ಮನಗಳಲ್ಲಿ ಸಂಭ್ರಮ ತರುವ ಹಬ್ಬ ಅಜ್ಞಾನವೆಂಬ ಅಂಧಕಾರವನ್ನು ಅಳಿಸಿ ಸುಜ್ಞಾನ ಎಂಬ ಬೆಳಕಿನೆಡೆಗೆ ಕೊಂಡೊಯ್ಯುವ ಈ ದೀಪಾವಳಿ ಹಬ್ಬವನ್ನು ಹಬ್ಬಗಳ ರಾಜ ಎಂದು ಕೂಡ ಕರೆಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯು ಕೂಡ ಈ ದೀಪಾವಳಿ ಯಂದು ತನಗೆ ಅಂಟಿದ ಅಜ್ಞಾನ, ಅಹಂ,ಎಂಬ ಕೊಳೆಯನ್ನು ತೊಳೆದುಕೊಳ್ಳುವ ಮೂಲಕ ಪ್ರಜ್ವಲಿಸುವ ದೀಪದ ಬೆಳಕಿನಂತೆ ಇನ್ನೊಬ್ಬರ ಬಾಳಿಗೆ ಬೆಳಕಾಗಬೇಕು.
ಪ್ರಾಪ್ತಿ ಗೌಡ


