ಮೊಗರ್ಪಣೆ:  ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ (ಈದ್-ಉಲ್-ಫಿತರ್) ಹಬ್ಬವನ್ನು ಅತ್ಯಂತ ಸಡಗರ, ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಿದರು. ಮಸೀದಿ ಜಮಾಯಿಸಿದ ನೂರಾರು ಜನರು ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದರು.

ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಜಮಾಅತ್ ಖತೀಬರಾದ ಅಬ್ದುಲ್ ಖಾದರ್ ಅಲ್-ಖಾಮಿಲ್ ಸಖಾಫಿ , ಹಬ್ಬದ ನೈಜ ಅರ್ಥ ಕರುಣೆ, ತ್ಯಾಗ ಮತ್ತು ಸಹಬಾಳ್ವೆಯಲ್ಲಿದೆ ಎಂದು ಸಾರಿದರು. ಬಡವರ ಕಷ್ಟಗಳಿಗೆ ಸ್ಪಂದಿಸುವ ಮಹತ್ವವನ್ನು ಅವರು ವಿಶೇಷವಾಗಿ ಒತ್ತಿ ಹೇಳಿದರು.

“ರಂಜಾನ್ ತಿಂಗಳು ನಮಗೆ ತ್ಯಾಗ ಮತ್ತು ಕರುಣೆಯ ಪಾಠ ಕಲಿಸುತ್ತದೆ. ಸಮಾಜದಲ್ಲಿರುವ ಬಡವರು ಹಾಗೂ ನಿರ್ಗತಿಕರಿಗೆ ನಾವು ಸದಾ ಆಸರೆಯಾಗಬೇಕು, ಕಷ್ಟಕಾಲದಲ್ಲಿ ಅವರನ್ನು ಎಂದಿಗೂ ಒಂಟಿಯಾಗಿ ಬಿಡಬಾರದು. ಕಷ್ಟದಲ್ಲಿರುವವರ ಕೈಹಿಡಿದು ಮೇಲೆತ್ತುವುದು ಮತ್ತು ನಮ್ಮ ಸಂಪತ್ತಿನಲ್ಲಿ ಒಂದು ಭಾಗವನ್ನು ದಾನ (ಝಕಾತ್) ಮಾಡುವ ಮೂಲಕ ಅವರ ಬಾಳಿನಲ್ಲಿ ಭರವಸೆ ಮೂಡಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ,” ಎಂದು ಅವರು ಸಮಾಜಕ್ಕೆ ಕರೆ ನೀಡಿದರು. ತಮ್ಮ ನೆರೆಹೊರೆಯಲ್ಲಿ ಯಾರೇ ಕಷ್ಟದಲ್ಲಿದ್ದರೂ ಅವರನ್ನು ಗುರುತಿಸಿ, ಅವಶ್ಯಕತೆ ಇರುವವರಿಗೆ ಆಧಾರ ಸ್ತಂಭವಾಗಿ ನಿಲ್ಲುವಂತೆ ಹಾಗೂ ಸಮಾನತೆಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಅವರು ನೆನಪಿಸಿದರು.

ಪ್ರಾರ್ಥನೆಯ ನಂತರ ಎಲ್ಲರೂ ಪರಸ್ಪರ ಆಲಂಗಿಸಿಕೊಂಡು “ಈದ್ ಮುಬಾರಕ್” ಹೇಳುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹಾಗೂ ಎಸ್ಎಸ್ಎಫ್ ಮೊಗರ್ಪಣೆ ವತಿಯಿಂದ ತಂಪಾದ ಪಾನೀಯಗಳ ವ್ಯವಸ್ಥೆ ಮಾಡಲಾಗಿತ್ತು

Leave a Reply

Your email address will not be published. Required fields are marked *