ಶಾರ್ಜಾ, ಯುಎಇ: ಸುಳ್ಯದ ಅರಂಬೂರು ಮೂಲದ, ಶಾರ್ಜಾ ಜೇಮ್ಸ್ ಮಿಲೇನಿಯಮ್ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ ಈವಾ ಫಾತಿಮಾ ಬಶೀರ್ ಇಂಗ್ಲಿಷ್ ಕಥಾಪುಸ್ತಕಗಳನ್ನು ನಿರಂತರವಾಗಿ ಅತ್ಯಧಿಕ ಸಮಯ ಓದಿದ ಸಾಧನೆಗಾಗಿ ಪ್ರತಿಷ್ಠಿತ ಅರೇಬಿಯನ್ ವರ್ಲ್ಡ್ ರೆಕಾರ್ಡ್ಸ್ (AWR) ಅಚೀವರ್ಸ್ ಅವಾರ್ಡ್ ಗೆ ಪಾತ್ರರಾಗಿದ್ದಾರೆ.
ಕೆವಲ 9ನೇ ವಯಸ್ಸಿನಲ್ಲೇ ಈವಾ, 4 ಗಂಟೆ 31 ನಿಮಿಷ 38 ಸೆಕೆಂಡುಗಳ ಕಾಲ ನಿರಂತರವಾಗಿ ಆರು ಇಂಗ್ಲಿಷ್ ಕಥಾಪುಸ್ತಕಗಳನ್ನು ಸ್ಪಷ್ಟವಾಗಿ ಓದುವುದರ ಮೂಲಕ ಅದ್ಭುತ ದಾಖಲೆಯನ್ನು ನಿರ್ಮಿಸಿದ್ದಾರೆ. ಅವರ ಈ ಸಾಧನೆಯನ್ನು ಅರೇಬಿಯನ್ ವರ್ಲ್ಡ್ ರೆಕಾರ್ಡ್ಸ್ ಅಧಿಕೃತವಾಗಿ ಗುರುತಿಸಿದೆ. ಪ್ರಶಸ್ತಿ ಪ್ರದಾನವು ಇತ್ತೀಚಿಗೆ ದುಬೈಯ ಹೋಟೆಲ್ ಕ್ವೀನ್ ಎಲಿಜಬೆತ್ ನಲ್ಲಿ ನಡೆದ ಸಮಾರಂಭದಲ್ಲಿ ನಡೆಯಿತು.
ಇವಾ ಈ ಹಿಂದೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅವಾರ್ಡ್ ಪುರಸ್ಕೃತರಾಗಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾಳೆ. ಪ್ರತಿಷ್ಠಿತ ಸಂಸ್ಥೆಗಳು ಆಯೋಜಿಸಿರುವ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಒಲಿಂಪಿಯಾಡ್‌ಗಳಲ್ಲಿ ಹಲವು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದು, ಸ್ವಚ್ಛತಾ ಅಭಿಯಾನಗಳು, ಪರಿಸರ ಜಾಗೃತಿ ಕಾರ್ಯಕ್ರಮಗಳು, ಸಾಮಾಜಿಕ ಕಾರ್ಯಗಳಿಗಾಗಿ ನಿಧಿ ಸಂಗ್ರಹ, ಸುರಕ್ಷತಾ ಜಾಗೃತಿ ಅಭಿಯಾನಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಅರಂಬೂರಿನ ನಿವಾಸಿ ಮಹಮ್ಮದ್ ಬಶೀರ್ ಮತ್ತು ಹಸೀನಾ ದಂಪತಿಗಳ ಪುತ್ರಿಯಾಗಿರುವ ಈವಾ, ಪ್ರಸ್ತುತ ಪೋಷಕರೊಂದಿಗೆ ಶಾರ್ಜಾದಲ್ಲಿ ನೆಲೆಸಿದ್ದಾರೆ.