ಉಡುಪಿ ಅಗಸ್ಟ್ 29: ಮಂಗಳೂರಿನ ರೆಮೊನಾ ಇವೆಟ್ ಪಿರೇರಾ ಅವರು ನಿರ್ಮಿಸಿದ್ದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆಯನ್ನು ಬ್ರಹ್ಮಾವರ ದೀಕ್ಷಾ ವಿ ಅವರು ಮುರಿದಿದ್ದಾರೆ. ವಿದುಷಿ ದೀಕ್ಷಾ ವಿ. ಅವರು ಆಗಸ್ಟ್ 21 ರಿಂದ ಆರಂಭಿಸಿರುವ 216 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನವು ಗುರುವಾರ ಸಂಜೆ 5.30ಕ್ಕೆ 170 ಗಂಟೆಗಳನ್ನು ದಾಟಿತು. ಈ ಮೂಲಕ ಅವರು ಮಂಗಳೂರಿನ ರೆಮೊನಾ ಇವೆಟ್ ಪಿರೇರಾ ಅವರ ಈ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಉಡುಪಿಯ ಡಾ. ಜಿ. ಶಂಕರ್ ಮಹಿಳಾ ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ದೀಕ್ಷಾ ಅವರು 170 ಗಂಟೆಗಳ ಭರತನಾಟ್ಯ ಪ್ರದರ್ಶನ ಪೂರೈಸಿದಾಗ ನೆರೆದಿದ್ದವರು ಹೂಮಳೆ ಸುರಿಸುವ ಮೂಲಕ ಅವರನ್ನು ಅಭಿನಂದಿಸಿದರು.

ಈ ದಾಖಲೆಗೆ ಸಾಕ್ಷಿಯಾಗಿದ್ದ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ಸಂಸ್ಥೆಯ ಏಷ್ಯಾ ಮುಖ್ಯಸ್ಥ ಡಾ. ಮನೀಶ್ ವಿಷ್ಣೋಯಿ ಮತನಾಡಿ, ಸಣ್ಣ ಹಳ್ಳಿಯೊಂದರ ಸಾಮಾನ್ಯ ಕುಟುಂಬದ ಹುಡುಗಿ ದೀಕ್ಷಾ ಅವರು ದೊಡ್ಡ ಸಾಧನೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ ಎಂದರು. 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿದ್ದ ರೆಮೊನಾ ಅವರ ದಾಖಲೆಯನ್ನು ದೀಕ್ಷಾ ಅವರು ಮುರಿದಿದ್ದಾರೆ ಎಂಬುದನ್ನು ಅಧಿಕೃತವಾಗಿ ಹೇಳುತ್ತೇನೆ. ದೀಕ್ಷಾ ಅವರು 216 ಗಂಟೆಗಳ ಗುರಿ ಹೊಂದಿದ್ದು, ನೃತ್ಯ ಮುಂದುವರಿಸಿದ್ದಾರೆ. ಎಷ್ಟು ಗಂಟೆಗಳ ವರೆಗೆ ಅವರು ನೃತ್ಯ ಮುಂದುವರಿಸುತ್ತಾರೆ ಎಂಬುದನ್ನು ಕಾದು ನೋಡುವ ಎಂದು ಹೇಳಿದರು.
