ಮಾಲ್ಡೀವ್ಸ್ ಸಮೀಪ ನಡೆದ ದುರಂತ ಸ್ಪೀಡ್ ಬೋಟ್ ಅಪಘಾತದಲ್ಲಿ ರೇಮಂಡ್‌ ಗ್ರೂಪ್‌ ಮಾಲೀಕ ಗೌತಮ್‌ ಸಿಂಘಾನಿಯಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರು ಭಾರತೀಯರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ.

ಶುಕ್ರವಾರ ಮುಂಜಾನೆ ಮಾಲ್ಡೀವ್ಸ್‌ನ ವಿ ಫೆಲಿಧೂ ಪ್ರದೇಶದ ಸಮೀಪ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸ್ಪೀಡ್ ಬೋಟ್ ಏಕಾಏಕಿ ಮಗುಚಿ ಬಿದ್ದಿದೆ. ಈ ದುರಂತದಲ್ಲಿ ಒಟ್ಟು ಏಳು ಮಂದಿ ಪ್ರಯಾಣಿಕರು ಇದ್ದರು. ಅವರಲ್ಲಿ ರೇಮಂಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಗೌತಮ್ ಸಿಂಘಾನಿಯಾ ಕೂಡ ಸೇರಿದ್ದರು.

ಗಾಯಗೊಂಡ ಸಿಂಘಾನಿಯಾ – ಮುಂಬೈನಲ್ಲಿ ಚಿಕಿತ್ಸೆ

ಅಪಘಾತದ ನಂತರ ಗೌತಮ್ ಸಿಂಘಾನಿಯಾ ಅವರನ್ನು ತಕ್ಷಣ ರಕ್ಷಿಸಿ ಏರ್‌ ಲಿಫ್ಟ್ ಮಾಡಿ ವಿಮಾನದ ಮುಂಬೈಗೆ ಕರೆತರಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ವಕ್ತಾರರು ನೀಡಿದ ಮಾಹಿತಿಯಂತೆ, “ದುರದೃಷ್ಟಕರ ಅಪಘಾತದಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರ ಆರೋಗ್ಯ ಈಗ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದ್ದಾರೆ. ಜೊತೆಗೆ, ಈ ಘಟನೆಗೆ ಸಂಬಂಧಿಸಿದಂತೆ ಆತಂಕ ವ್ಯಕ್ತಪಡಿಸಿ, ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ನಾಪತ್ತೆಯಾದ ಭಾರತೀಯರು

ಮಾಲ್ಡೀವ್ಸ್ ಅಧಿಕಾರಿಗಳ ಪ್ರಕಾರ, ಈ ಬೋಟ್‌ನಲ್ಲಿ ಯುನೈಟೆಡ್ ಕಿಂಗ್‌ಡಮ್ ಮತ್ತು ರಷ್ಯಾದ ಇಬ್ಬರು ಮಹಿಳೆಯರು ಹಾಗೂ ಐದು ಭಾರತೀಯ ಪುರುಷರು ಇದ್ದರು. ಅಪಘಾತದ ವೇಳೆ ರಷ್ಯಾದ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾರೆ. ಇವರಲ್ಲಿ ಇಬ್ಬರು ಭಾರತೀಯರು ಇನ್ನೂ ನಾಪತ್ತೆಯಾಗಿದ್ದು, ಅವರಲ್ಲಿ ಭಾರತದ ದಂತಕಥೆ ರ‍್ಯಾಲಿ ಚಾಲಕ ಹರಿ ಸಿಂಗ್ ಮತ್ತು ಅವರೊಂದಿಗೆ ದೋಣಿಯಲ್ಲಿದ್ದ ಮತ್ತೊಬ್ಬ ಸ್ನೇಹಿತ ಇನ್ನೂ ನಾಪತ್ತೆಯಾಗಿದ್ದಾರೆ. ಅವರು ಸಮುದ್ರದಲ್ಲಿ ಕಳೆದು ಹೋಗಿ ಬಹಳ ಸಮಯವಾಗಿದ್ದು ಸಾವನ್ನಪ್ಪಿರಬಹುದು ಎಂದು ಸ್ಥಳೀಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಇಬ್ಬರೂ ಆಪ್ತ ಸ್ನೇಹಿತರು

ಗೌತಮ್ ಸಿಂಘಾನಿಯಾ ಮತ್ತು ಹರಿ ಸಿಂಗ್ ದೀರ್ಘಕಾಲದ ಸ್ನೇಹಿತರು ಇವರಿಬ್ಬರಿಗೂ ಸಾಹಸ ಕ್ರೀಡೆಗಳ ಬಗ್ಗೆ ಅತೀವ ಆಸಕ್ತಿ. ಸಿಂಘಾನಿಯಾ ಸ್ವತಃ ವೃತ್ತಿಪರ ರೇಸರ್ ಆಗಿದ್ದು, ಹರಿ ಸಿಂಗ್ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರ್ಯಾಲಿ ಪ್ರಶಸ್ತಿಗಳನ್ನು ಗೆದ್ದು ಭಾರತಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ. ಸ್ನೇಹಿತರೆಲ್ಲ ರಜೆ ಮತ್ತು ಪವರ್ ಬೋಟಿಂಗ್‌ಗಾಗಿ ಮಾಲ್ಡೀವ್ಸ್‌ಗೆ ತೆರಳಿದ್ದರು.

Leave a Reply

Your email address will not be published. Required fields are marked *