ಮಕ್ಕಳಿಗೆ ಪರಿಸರವನ್ನು ಪ್ರೀತಿಸುವ ಜೀವನ ಮೌಲ್ಯಗಳನ್ನು ಕಲಿಸಿ: ಅಶೋಕ್ ಚೂಂತಾರ್

ಶಾಲಾ ಆವರಣದಲ್ಲಿ ಹಣ್ಣಿನ ತೋಟ, ಔಷಧಿಯ ಸಸ್ಯೋದ್ಯಾನ ನಿರ್ಮಾಣ

ಗಿಡಗಳ ಅತ್ಯುತ್ತಮ ಪೋಷಣೆಗೆ ಬಹುಮಾನ ಘೋಷಣೆ

ಎನ್ನೆಂಸಿ, ಸೆ.22; ನೆಹರೂ ಸ್ಮಾರಕ ಪದವಿ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ವತಿಯಿಂದ ಶೇಣಿ ಶಾಲಾ ಅಭಿವೃದ್ಧಿ ಸಮಿತಿ ಸಹಯೋಗದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶೇಣಿ, ಚೊಕ್ಕಾಡಿಯಲ್ಲಿ ‘ಹಸಿರು ಉಸಿರು’ ಸಸ್ಯೋದ್ಯಾನ ನಿರ್ಮಾಣ ಮತ್ತು ಶ್ರಮದಾನ ಕಾರ್ಯಕ್ರಮವನ್ನು ಸೆಪ್ಟೆಂಬರ್ 20 ಶನಿವಾರದಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಅಮರ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ, ಎನ್.ಎಂ.ಸಿ ಹಿರಿಯ ವಿದ್ಯಾರ್ಥಿ ಅಶೋಕ್ ಚೂಂತಾರ್ ಅವರು ಶಾಲಾ ಮಕ್ಕಳಿಗೆ ಗಿಡಗಳನ್ನು ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ, “ಮಕ್ಕಳಲ್ಲಿ ಪ್ರಕೃತಿ ಪ್ರೇಮ ಬೆಳೆಸಲು ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯ. ಗಿಡ ನೆಡುವುದಷ್ಟೇ ಅಲ್ಲ, ಅವನ್ನು ಪೋಷಿಸಿ ಬೆಳೆಸುವಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ಅವರಿಗೆ ಪರಿಸರ ಪ್ರೀತಿಯ ಜೀವನ ಮೌಲ್ಯಗಳನ್ನು ಕಲಿಸುತ್ತದೆ. ಈ ಕಾರ್ಯಕ್ರಮವನ್ನು ಆಯೋಜಿಸಿರುವ ನೇಚರ್ ಕ್ಲಬ್‌ನ ಕಾರ್ಯ ಶ್ಲಾಘನೀಯವಾಗಿದೆ” ಎಂದರು. ಅವರ ಪದವಿ ವಿದ್ಯಾಭ್ಯಾಸದ ನಂತರ ತೊಡಗಿಸಿಕೊಂಡ ತನ್ನ ಕೃಷಿ ಬದುಕಿನ ಅನುಭವಗಳನ್ನು ಹಂಚಿಕೊಂಡರು.

ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪ್ರಶಾಂತ್ ಪಾಡಾಜೆ ಮಾತನಾಡಿ, “ಶಾಲಾ ಆವರಣದಲ್ಲಿ ಹಣ್ಣಿನ ತೋಟ ಹಾಗೂ ಔಷಧೀಯ ತೋಟವನ್ನು ನಿರ್ಮಿಸುವುದು ಮಕ್ಕಳಿಗೆ ನೈಸರ್ಗಿಕ ಪಾಠಶಾಲೆಯಂತೆ ಕಾರ್ಯನಿರ್ವಹಿಸುತ್ತದೆ. ಇಂದಿನ ಮಕ್ಕಳು ನಾಳೆಯ ಪರಿಸರ ಸಂರಕ್ಷಕರು ಎಂಬ ನಂಬಿಕೆ ನಮ್ಮದಾಗಿದೆ” ಎಂದರು.

ಶಾಲಾ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಮಾಧವ ಪಿಂಡಿಬನ ಮಾತನಾಡುತ್ತಾ “ಪೋಷಕರ ಸಹಕಾರ ಮತ್ತು ವಿದ್ಯಾರ್ಥಿಗಳ ಶ್ರಮದಾನ ಶಾಲೆಯ ಸಸ್ಯೋದ್ಯಾನವನ್ನು ಸಮೃದ್ಧಗೊಳಿಸುತ್ತದೆ. ಈ ಕಾರ್ಯ ಕ್ರಮ ಕೇವಲ ಗಿಡ ನೆಡುವುದಲ್ಲ, ಪರಿಸರದೊಂದಿಗೆ ಶಾಲೆಯ ಬಾಂಧವ್ಯವನ್ನು ಗಾಢಗೊಳಿಸುವ ಪ್ರಯತ್ನವಾಗಿದೆ” ಎಂದು ಅಭಿಪ್ರಾಯಪಟ್ಟರು.

ಎನ್ನೆಂಸಿ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಮತ್ತು ನೇಚರ್ ಕ್ಲಬ್ ಸಂಯೋಜಕರಾದ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನೇಚರ್ ಕ್ಲಬ್ ಸದಸ್ಯರಾದ ಅಭಿಜ್ಞಾ ಪ್ರಾರ್ಥಿಸಿ, ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಜಿತೇಶ್ ಜಿ.ಎಚ್. ವಂದಿಸಿದರು. ನೇಚರ್ ಕ್ಲಬ್ ಕಾರ್ಯದರ್ಶಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರಾದ ಕೃತಿಕಾ, ಪಲ್ಲವಿ, ಹರ್ಷಿತಾ, ಅಭಿಜ್ಞಾ, ಭಾವನಾ ಮತ್ತು ಲ್ಯಾಬ್ ಸಹಾಯಕಿ ಭವ್ಯ ಹಾಗೂ ಶೇಣಿ ಶಾಲಾ ಶಿಕ್ಷಕ ವೃಂದದವರು ಸಹಕರಿಸಿದರು.

ಸಭಾ ಕಾರ್ಯಕ್ರಮದ ನಂತರ ಉದ್ಘಾಟಕರಾದ ಅಶೋಕ್ ಚೂಂತಾರ್ ಅಮೂಲ್ಯ ಔಷಧೀಯ ಗುಣಗಳುಳ್ಳ ಸೀತಾ ಅಶೋಕ ಗಿಡವನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಅಭಿವೃದ್ಧಿ ಸಂಘದ ಸದಸ್ಯರು ಮತ್ತು ಪೋಷಕ ಬಳಗದವರು ಅಗತ್ಯ ಸಲಕರಣೆ ಒದಗಿಸಿ ಶಾಲಾ ಆವರಣದ ಸ್ವಚ್ಚತೆಗೆ ತೊಡಗಿಸಿಕೊಂಡರು.
ಕಾಲೇಜಿನ ನೇಚರ್ ಕ್ಲಬ್ ಸದಸ್ಯರು ಸುಮಾರು 46 ವಿವಿಧ ಜಾತಿಯ ಹಣ್ಣಿನ ಮತ್ತು ಔಷಧೀಯ ಗಿಡಗಳನ್ನು ನೆಟ್ಟು ಕೊನೆಯ ಅವಲೋಕನ ಅವಧಿಯ ನಂತರ ಶಾಲಾ ಅಭಿವೃದ್ಧಿ ಸಮಿತಿ, ಶಿಕ್ಷಕ ವೃಂದ ಮತ್ತು ಮಕ್ಕಳಿಗೆ ಪೋಷಿಸುವ ಜವಾಬ್ದಾರಿ ವಹಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕರಾದ ವಿನಯ ಪ್ರಸಾದ್ ಕಾರ್ಯಕ್ರಮದ ಅಂತ್ಯದಲ್ಲಿ ಮಾತನಾಡಿ, “ಗಿಡಗಳನ್ನು ಪ್ರೀತಿಯಿಂದ ಬೆಳೆಸಿ ಉತ್ತಮವಾಗಿ ಪೋಷಿಸಿದ ಮಕ್ಕಳಿಗೆ ವಿಶೇಷ ಬಹುಮಾನ ನೀಡಲಾಗುವುದು” ಎಂದು ಘೋಷಿಸಿ ಮಕ್ಕಳಲ್ಲಿ ಹಸಿರು ಸಂರಕ್ಷಣೆಯ ಪ್ರೇರಣೆ ಮೂಡಿಸಿದರು. ಶಾಲಾಭಿವೃದ್ಧಿ ಸಮಿತಿ ವತಿಯಿಂದ ಮಧ್ಯಾಹ್ನದ ಭೋಜನ, ಸ್ಥಳೀಯರಾದ ಶಾಲೆಯ ಹಿತೈಷಿ ತಿಮ್ಮಪ್ಪ ಪೂಜಾರಿ ಮತ್ತು ಮನೆಯವರು ಸಂಜೆಯ ಚಹಾ ಉಪಹಾರದ ವ್ಯವಸ್ಥೆ ಮಾಡಿ ಸಹಕರಿಸಿದರು.

Leave a Reply

Your email address will not be published. Required fields are marked *