‘ಹಿಂದೆ ಗುರು ಇರಲು ಮುಂದೆ ಗುರಿ ಇರಲು ಅದೋ ಸಾಗುತಿದೆ ನೋಡು ಧೀರರ ಹಿಂಡು ‘ ಎನ್ನುವಂತ ಮಾತಿದೆ. ಅಂದರೆ ನಮ್ಮಲ್ಲಿ ಒಂದು ನಿರ್ದಿಷ್ಟ ಗುರಿ ಇದ್ದು , ನಮ್ಮ ಹಿಂದೆ ಒಬ್ಬ ಗುರು ಇದ್ದರೆ ನಾವು ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಪ್ರತಿ ಒಬ್ಬರ ಜೀವನದಲ್ಲಿ ಒಬ್ಬ ಗುರು ಇದ್ದೇ ಇರುತ್ತಾರೆ. ಪ್ರಪಂಚದ‌ ಸರ್ವ ಶ್ರೇಷ್ಠ ವೃತ್ತಿ ಯಾವುದೆಂದರೆ ಅದು ಗುರುವಿನ ವೃತ್ತಿ ಅಥವಾ ಶಿಕ್ಷಕ ವೃತ್ತಿ , ವೃತ್ತಿ ಎನ್ನುವುದಕ್ಕಿಂತ ಅದೊಂದು ಪುಣ್ಯದ ಕೆಲಸ.

ಯಾಕೆ ಶಿಕ್ಷಕ ವೃತ್ತಿ ಜಗತ್ತಿನ ಸರ್ವಶ್ರೇಷ್ಠ ವೃತ್ತಿ ಎಂದರೆ ಒಂದು ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ದೇಶದ ಭವಿಷ್ಯದ ಪ್ರಜೆಗಳನ್ನು ರೂಪಿಸುವಂತಹ ಪುಣ್ಯ ಕೆಲಸ ಅದು , ಮತ್ತು‌ ಅದನ್ನು ರೂಪಿಸುವವರು ಶಿಕ್ಷಕರು. ಈ ಪ್ರಪಂಚದಲ್ಲಿ ಅದೆಷ್ಟೇ ದೊಡ್ಡ ಹುದ್ದೆಯಲ್ಲಿ ಇದ್ದರೂ ಕೂಡ ಪ್ರತಿಯೊಬ್ಬರನ್ನೂ ಕೂಡ ತಲೆ ಬಾಗುವಂತೆ ಮಾಡುವುದು ಶಿಕ್ಷಕ ವೃತ್ತಿ.‌ ಒಂದು ಮಗುವಿಗೆ ತಾಯಿಯೇ ಮೊದಲ ಗುರು ಮನೆಯೇ ಮೊದಲ ಪಾಠಶಾಲೆ ಆಗಿರುತ್ತದೆ . ಆದರೆ‌ ಯಾವಾಗ ಆ ಮಗು ವಿದ್ಯಾ ದೇಗುಲಕ್ಕೆ ಕಾಲು ಇರಿಸುತ್ತದೋ ತದನಂತರ ಅದರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವವರು ಒಬ್ಬ ಗುರು ಆಗಿರುತ್ತಾರೆ. ಪ್ರಾರಂಭದಲ್ಲಿ ನಾವೊಂದು ಕಲ್ಲಾಗಿರುತ್ತೇವೆ ,ಆದರೆ ಆ ಕಲ್ಲನ್ನು ಕೆತ್ತಿ ಶಿಲೆಯ ರೂಪಕ್ಕೆ ತರುವವರೇ‌ ನಮ್ಮ ಗುರುಗಳು. ನಾವು ತಪ್ಪು ಮಾಡಿದಾಗ ಆ ತಪ್ಪನ್ನು ತಿದ್ದಿ, ನಮ್ಮನ್ನು ಸರಿದಾರಿಗೆ ತರಲು ಪ್ರಯತ್ನಿಸುತ್ತಾರೆ , ಆಗಲೂ ಅವರ ಮಾತನ್ನು ಕೇಳಲಿಲ್ಲ ಎಂದರೆ ದಂಡಿಸುತ್ತಾರೆ , ಆಗ ವಿದ್ಯಾರ್ಥಿ ಆದವನಿಗೆ ಕೋಪವೂ ಬರುವುದು ಉಂಟು ಅದು ಸಹಜ. ಆದರೆ ತಪ್ಪು ಮಾಡಿದಾಗ ದಂಡಿಸುವುದು ಗುರುವಿನ ಕರ್ತವ್ಯ. ಒಬ್ಬ ಗುರು ಆದವರು ನಮ್ಮನ್ನು ಯಾಕೆ ದಂಡಿಸುತ್ತಾರೆ ಎಂದರೆ ನಾವು ಭವಿಷ್ಯದಲ್ಲಿ ಎಂದೂ ಆ ತಪ್ಪನ್ನು ಮಾಡಬಾರದು ಎಂದು.

ಪ್ರತಿಯೊಬ್ಬರ ಜೀವನದಲ್ಲಿ ಗುರು ಎಷ್ಟು ಮುಖ್ಯ‌ ಎಂದರೆ ಕೆಲವೊಮ್ಮೆ ನಾವು ಪೋಷಕರೊಂದಿಗೂ ಹೇಳಿಕೊಳ್ಳಲಾಗದ ವಿಚಾರಗಳನ್ನು ನಮ್ಮ ಗುರುಗಳೊಂದಿಗೆ ಹಂಚಿಕೊಳ್ಳುವುದುಂಟು, ಅವರು ಸಹಾಯ ಮಾಡುವುದೂ ಉಂಟು. ಒಬ್ಬ ಗುರು ಕೇವಲ ಗುರು ಅಲ್ಲ, ಉತ್ತಮ ಸ್ನೇಹಿತನೂ ಆಗಬಲ್ಲ, ನಮ್ಮ ಸಮಸ್ಯೆಗಳನ್ನೂ ಪರಿಹರಿಸ‌ಬಲ್ಲ.

ಪ್ರತಿಯೊಬ್ಬರಿಗೂ ಕೂಡ ಒಬ್ಬ ನೆಚ್ಚಿನ ಶಿಕ್ಷಕರು ಇದ್ದೇ ಇರುತ್ತಾರೆ. ಅವರಲ್ಲಿ ಅವರಿಗೆ ಇಷ್ಟ ಆಗುವಂತಹ ಅನೇಕ ಗುಣಗಳು ಇರಬಹುದು, ಕೆಲವರಿಗೆ ಅವರೇ ಸ್ಫೂರ್ತಿಯ ಚಿಲುಮೆಯೂ ಆಗಿರಬಹುದು.

ಒಬ್ಬ ಗುರು ಮನಸ್ಸು ಮಾಡಿದರೆ ಒಬ್ಬ ಕಳ್ಳ ಕೂಡ ಉತ್ತಮ ವ್ಯಕ್ತಿ ಆಗಬಹುದು. ಇಂತಹ ಅದೆಷ್ಟೋ ಕತೆಗಳನ್ನು ನೀವು ಕೇಳಿರಬಹುದು, ಓದಿರಲೂ ಬಹುದು. ಅದೆಲ್ಲೋ ಓದಿದ ನೆನಪು , ಒಂದು ತರಗತಿಯಲ್ಲಿ ಒಬ್ಬ ಹುಡುಗ ಇರುತ್ತಾನೆ , ಅವನಿಗೆ ಕೈಯಲ್ಲಿ ಆರು ಬೆರಳುಗಳು ಇರುತ್ತವೆ .ಅವನು ಯಾವಾಗಲೂ ‘ನನಗೆ ಮಾತ್ರ ಯಾಕೆ ಕೈಯಲ್ಲಿ ಆರು ಬೆರಳುಗಳು ಇವೆ ಉಳಿದವರಿಗೆ ಕೇಲವ ಐದು ಬೆರಳು ಇರುವಂತದ್ದು ,ನನಗೆ ಮಾತ್ರ ಯಾಕೆ ಹೀಗೆ ‘ಅಂತ ಯೋಚನೆ ಮಾಡ್ತಾ ಇರ್ತಾನೆ. ತರಗತಿಯಲ್ಲಿ ಇದ್ದ ಅವನ ಗುರುಗಳಿಗೆ ಈ ಹುಡ್ಗ ಏನೋ ಚಿಂತೆಯಲ್ಲಿ ಇರುವುದು ತಿಳಿಯುತ್ತದೆ . ಗುರುಗಳು ಅವನನ್ನು ಕರೆದು ವಿಚಾರಿಸುತ್ತಾರೆ . ಆಗ ಆ ಹುಡುಗ ಕೇಳ್ತಾನೆ “ಸರ್ ಎಲ್ಲರ ಕೈಯಲ್ಲಿ ಐದು ಬೆರಳುಗಳಿವೆ, ಆದರೆ ನನ್ನ ಕೈಯಲ್ಲಿ ಮಾತ್ರ ಆರು ಬೆರಳುಗಳು ಇವೆ” ಅಂತ ಹೇಳ್ತಾನೆ ಅದಕ್ಕೆ ಅವನ ಗುರುಗಳು”ನೀನು ಅದರ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ, ಬದಲಾಗಿ ನೀನು ನನ್ನಲ್ಲಿ ಏನೋ ವಿಶೇಷತೆ ಇದೆ, ಉಳಿದವರಲ್ಲಿ ಇಲ್ಲದ್ದು ಎಂದುಕೊ,ನೀನು ಚಿಂತಿಸಬೇಡ ನಿನ್ನ ಓದಿನ ಕಡೆ ಗಮನ ಕೊಡು” ಎಂದು ಸಮಾಧಾನ ಮಾಡಿ ಕಳುಹಿಸುತ್ತಾರೆ. ಗುರುಗಳ ಈ ಮಾತು ಆ ಹುಡುಗನಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿತು, ಮುಂದೆ ಅವನು ಚೆನ್ನಾಗಿ ಓದಿ ಒಳ್ಳೆಯ ಹುದ್ದೆಯಲ್ಲಿ ಉದ್ಯೋಗ ಪಡೆದುಕೊಳ್ಳುತ್ತಾನೆ, ಅಷ್ಟೇ ಅಲ್ಲ ಒಂದು ದಿನ ತನಗೆ ಆತ್ಮ ವಿಶ್ವಾಸ ತುಂಬಿದ ಗುರುವನ್ನು ಅಪ್ಪಿಕೊಂಡು ಕೃತಜ್ಞತೆ ಸಲ್ಲಿಸುತ್ತಾನೆ‌ ,ಇದೇ ಅಲ್ಲವೇ ಗುರುವಿನ ನಿಜವಾದ ಶಕ್ತಿ.‌ ಅಷ್ಟೇ ಏಕೆ ಕೊಲೆ, ಸುಲಿಗೆ, ಡಕಾಯಿತಿಯನ್ನೇ ಬದುಕಾಗಿಸಿಕೊಂಡಿದ್ದ ರತ್ನಾಕರ ಎಂಬ ಬೇಡನು ಮುಂದೆ ಮನ ಪರಿವರ್ತನೆ ಆಗಿ ವಾಲ್ಮೀಕಿ ಎಂಬ ಋಷಿ ಆಗಿ ರಾಮಾಯಣ ಬರಿಯುವಂತಾದದ್ದು ಕೂಡ ಒಬ್ಬ ಗುರುವಿನಿಂದಲೆ.

ಶಿಕ್ಷಕರಾದವರು ತಮ್ಮ ಸ್ವಂತ ಹಣವನ್ನೇ ಬಡ ವಿದ್ಯಾರ್ಥಿಗಳಿಗೆ ನೀಡಿ ಅದೆಷ್ಟೋ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಉದಾಹರಣೆಗಳೂ ಇವೆ.

ಗುರುವಿಗೆ ಹಾಗು ಗುರುವಿನ ಸ್ಥಾನಕ್ಕೆ ವೇದಗಳ ಕಾಲದಿಂದಲೂ ಸಾಕಷ್ಟು ಗೌರವವಿದೆ, ಪ್ರಾಮುಖ್ಯತೆಯೂ ಇದೆ. ಉದಾಹರಣೆ ಹೇಳಬೇಕೆಂದರೆ ಏಕಲವ್ಯನ ಗುರುಭಕ್ತಿ, ಗುರು ದ್ರೋಣಾಚಾರ್ಯರು ಗುರು ದೀಕ್ಷೆಯಾಗಿ ಏಕಲವ್ಯನ ಹೆಬ್ಬೆರಳನ್ನು ಕೇಳಿದಾಗ ಕ್ಷಣವೂ ಯೋಚಿಸದೆ ಹೆಬ್ಬೆರಳನ್ನು ಕತ್ತರಿಸಿ ಕೊಡುತ್ತಾನೆ ,ಇದೇ ಅಲ್ಲವೇ ನಿಜವಾದ ಗುರು ಭಕ್ತಿ.

ಒಟ್ಟಿನಲ್ಲಿ ಗುರುವಿನ ಬಗ್ಗೆ, ಗುರುವಿನ ಸ್ಥಾನದ ಬಗ್ಗೆ ಎಷ್ಟು ಬರೆದರೂ, ಎಷ್ಟು ಹೇಳಿದರೂ ಸಾಲದು.’ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ‘ಇವು ಸತ್ಯ ಸಾಲುಗಳು ಗುರು ಎಂದರೆ ಅಜ್ಞಾನವೆಂಬ ಅಂಧಕಾರವನ್ನು ಅಳಿಸಿ ಸುಜ್ಞಾನ ಎಂಬ ಜ್ಞಾನ ದೀವಿಗೆಯನ್ನು ಬೆಳಗುವವರು. ನಾವು ಹಸಿ ಮಣ್ಣಾದರೆ ಅದನ್ನು ತಟ್ಟಿ ಒಂದು ಆಕಾರಕ್ಕೆ ತರುವಂತವರು ಗುರುಗಳು.

ಪ್ರಾಪ್ತಿ ಗೌಡ

Leave a Reply

Your email address will not be published. Required fields are marked *