ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಸೋಮವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಡುವಿನ ಐಪಿಎಲ್ 2026 ಟೂರ್ನಿಯ 12ನೇ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಮೈದಾನ ಒದ್ದೆಯಾಗಿದ್ದ ಕಾರಣ ಪಂದ್ಯವನ್ನು ಕೈಬಿಡಲಾಗಿದ್ದು, ಉಭಯ ತಂಡಗಳಿಗೂ ತಲಾ ಒಂದು ಅಂಕವನ್ನು ಹಂಚಲಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ತಂಡದ ನಿರ್ಧಾರವು ಆರಂಭದಲ್ಲೇ ಆಘಾತ ತಂದಿತು. ಪಂಜಾಬ್ ಕಿಂಗ್ಸ್ ವೇಗಿ ಕ್ಸೇವಿಯರ್ ಬಾರ್ಟ್ಲೆಟ್ ಅವರ ಭರ್ಜರಿ ಬೌಲಿಂಗ್ ದಾಳಿಗೆ ಸಿಲುಕಿದ ಕೆಕೆಆರ್, ಕೇವಲ 3.4 ಓವರ್‌ಗಳಲ್ಲಿ 25 ರನ್ ಗಳಿಸುವಷ್ಟರಲ್ಲಿ 2 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಾರ್ಟ್ಲೆಟ್ ಅವರು ಆರಂಭಿಕ ಆಟಗಾರ ಫಿನ್ ಅಲೆನ್ (6) ಮತ್ತು ಕ್ಯಾಮರೂನ್ ಗ್ರೀನ್ (4) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.
ಕ್ರೀಸ್‌ನಲ್ಲಿ ನಾಯಕ ಅಜಿಂಕ್ಯ ರಹಾನೆ (8) ಮತ್ತು ಅಂಗಕೃಷ್ ರಘುವಂಶಿ (7) ಬ್ಯಾಟಿಂಗ್ ಮುಂದುವರಿಸಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಕಟ್-ಆಫ್ ಸಮಯದವರೆಗೂ ಕಾದು ನೋಡಿದರೂ ಮಳೆ ನಿಲ್ಲದ ಕಾರಣ ಮತ್ತು ಔಟ್‌ಫೀಲ್ಡ್ ಸಂಪೂರ್ಣವಾಗಿ ಒದ್ದೆಯಾಗಿದ್ದರಿಂದ, ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್‌ಗಳು ನಿರ್ಧರಿಸಿದರು.





