ಕ್ರಾಂತಿ ಗೀತೆಗಳ ನೃತ್ಯ ವೈಭವ, ಸಾಧಕರಿಗೆ ಕನ್ನಡ ರತ್ನ ಪ್ರಶಸ್ತಿ ಗೌರವ

ಕನ್ನಡ ಭಾಷೆ ಮತ್ತು ಸರ್ಕಾರಿ ಕನ್ನಡ ಶಾಲೆಗಳ ಅಸ್ತಿತ್ವಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವ ಕರ್ನಾಟಕ ರಾಜ್ಯ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯ ಮಟ್ಟದ ಬೃಹತ್ ಸಮಾವೇಶ ಫೆಬ್ರವರಿ 11ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಅಭಿಯಾನದ 75ನೇ ಸಂಭ್ರಮದ ಅಂಗವಾಗಿ ಈ ಸಮಾವೇಶವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಕನ್ನಡ ಶಾಲೆಯ ಅಭಿವೃದ್ಧಿ ಮತ್ತು ಉಳಿವಿಗಾಗಿ ಶ್ರಮಿಸಿದ ಅನೇಕ ಸಾಧಕರುಗಳನ್ನು ಗುರುತಿಸಿ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಅಲ್ಲದೆ ಸರ್ಕಾರಿ ಶಾಲೆಗಳ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಉತ್ತಮ ಕಾರ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅತ್ಯುತ್ತಮ ಎಸ್ ಡಿ ಎಂ ಸಿ ಗಳನ್ನು ಗುರುತಿಸಿ ರಾಜ್ಯ ಪ್ರಶಸ್ತಿಯನ್ನು ನೀಡುವುದು ಹಾಗೂ ಸರಕಾರಿ ಶಾಲೆಗಳ ಉತ್ತಮ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸುವುದು, ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ವೀಲ್ ಚೇರ್ ವಿತರಣೆ, ಶಾಲೆಗಳಿಗೆ ಜಾರು ಬಂಡಿ ವಿತರಣೆ ಹಾಗೂ ಇನ್ನಿತರ ಉಪಕರಣಗಳ ವಿತರಣೆ ಕಾರ್ಯಕ್ರಮಗಳು ಕೂಡ ನಡೆಯಲಿದೆ.

ಸಮಾವೇಶದದಲ್ಲಿ ಕನ್ನಡ ಶಾಲೆಯ ಉಳಿವಿಗಾಗಿ ಮೂಡಿಬಂದಿರುವ ಕ್ರಾಂತಿ ಗೀತೆಗಳಿಗೆ ನಾಡಿನ ಹೆಸರಾಂತ ಕಲಾತಂಡಗಳು ಹೆಜ್ಜೆ ಹಾಕಲಿದ್ದು ಶಿಕ್ಷಣ ಕ್ಷೇತ್ರದಲ್ಲಿನ ತಾರತಮ್ಯವನ್ನು ಪ್ರಶ್ನಿಸುವ ಮತ್ತು ಕನ್ನಡದ ಅಸ್ಮಿತೆಯನ್ನು ಸಾರುವ ನೃತ್ಯ ವೈಭವ ನಡೆಯಲಿದೆ.

ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಲಿದ್ದು ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಸಭಾ ಕಾರ್ಯಕ್ರಮ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸರ್ಕಾರದ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ರವರು ವಹಿಸಲಿದ್ದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಚಿವರಾದ ದಿನೇಶ್ ಗುಂಡೂರಾವ್, ಶಾಸಕರಾದ ಸುರೇಶ್ ಕುಮಾರ್ ಮತ್ತು ವೇದವ್ಯಾಸ ಕಾಮತ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

​ ಈ ಒಂದು ಕಾರ್ಯಕ್ರಮದ ಯಶಸ್ವಿಗೆ ​ಎಲ್ಲಾ ಕನ್ನಡಾಭಿಮಾನಿಗಳು ಫೆಬ್ರವರಿ 11ರಂದು ಮಂಗಳೂರಿನ ಪುರಭವನದಲ್ಲಿ ಉಪಸ್ಥಿತರಿದ್ದು ಕನ್ನಡ ಶಾಲೆಗಳ ಉಳಿವಿಗಾಗಿ ಹಮ್ಮಿಕೊಂಡಿರುವ ಈ ಬೃಹತ್ ಅಭಿಯಾನದಲ್ಲಿ ಕೈಜೋಡಿಸುವಂತೆ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ಹಸೈನಾರ್ ಜಯನಗರ ರವರು ಸುಳ್ಯ ತಾಲೂಕು ಘಟಕ ಸಮಿತಿ ವತಿಯಿಂದ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *