ಅದೊಂದು ಕಾಲವಿತ್ತು.ಅಲ್ಲಿ ಮಾನವೀಯ ಮೌಲ್ಯಗಳಿಗೆ ಸಂಭಂದಗಳಿಗೆ, ಭಾವನೆಗಳಿಗೆ ಬೆಲೆ ಇತ್ತು.ಅಲ್ಲಿ ಮಾನವೀಯತೆಗಿಂತ ಯಾವುದೂ ದೊಡ್ಡದಾಗಿ ಇರಲಿಲ್ಲ. ಆದರೆ ಈಗ ಕಾಲ ಸಂಪೂರ್ಣ ಬದಲಾಗಿದೆ.ಸಂಭಂಧಗಳಿಗೆ, ಭಾವನೆಗಳಿಗೆ ಬೆಲೆಯೇ ಇಲ್ಲವಾಗಿದೆ ಈ ಸ್ವಾರ್ಥ ಪ್ರಪಂಚದಲ್ಲಿ ಸ್ವಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ.
ಹಾಗಾದರೆ ಇದಕ್ಕೆಲ್ಲಾ ಕಾರಣವೇನು? ಮನುಷ್ಯ ತನ್ನ ಮನುಷ್ಯತ್ವ ವನ್ನೇ ಕಳೆದುಕೊಳ್ಳಲು ಕಾರಣವೇನು? ಮನುಷ್ಯನ ಮನುಷ್ಯತ್ವವನ್ನೇ ಮರೆಸಿದ ಆ ವಸ್ತು ಯಾವುದು? ಬೇರೆ ಯಾವುದೂ ಅಲ್ಲ ಅದು ದುಡ್ಡು.ಈ ದುಡ್ಡು ಎನ್ನುವ ಒಂದು ಕಾಗದದ ಚೂರು ಇಂದು ಮನುಷ್ಯನನನ್ನು ಎಷ್ಟರ ಮಟ್ಟಿಗೆ ಆಟ ಆಡಿಸುತ್ತಿದ್ದೆ ಎಂದರೆ ಒಬ್ಬ ವ್ಯಕ್ತಿ ಯನ್ನೇ ಕೊಲೆ ಮಾಡುವಷ್ಟು,ನ್ಯಾಯವನ್ನೇ ಕೊಂಡುಕೊಳ್ಳುವಷ್ಟು.ಇಂದು ಮಾನವ ದುಡ್ಡಿನ ಹಿಂದೆ ಹಗಲು ರಾತ್ರಿ ಎನ್ನದೆ ಓಡುತ್ತಿದ್ದಾನೆ ದುಡ್ಡು ಒಂದು ಇದ್ದರೆ ಏನು ಬೇಕಾದರೂ ಮಾಡಬಹುದು ಎಂದು ಕೊಂಡಿದ್ದಾರೆ.ಆದರೆ ಅವನಿಗೆ ಗೊತ್ತಿಲ್ಲ ದುಡ್ಡಿನಿಂದ ನೆಮ್ಮದಿ, ಪ್ರೀತಿ, ಆರೋಗ್ಯವನ್ನು ಖರೀದಿಸಲು ಸಾಧ್ಯವಿಲ್ಲ ಎಂದು.
ಬಹುಶಃ ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎನ್ನುವ ಮಾತು ಪ್ರಸ್ತುತ ಕಾಲಕ್ಕೆ ಹೇಳಿ ಮಾಡಿಸಿದಂತಿದೆ.ಈ ಕುರುಡು ಕಾಂಚಾಣದ ಮಹಿಮೆ ಇಂದ ಬಡವರ ಅದೆಷ್ಟೋ ಸಾವು ನೋವುಗಳು ಮುಚ್ಚಿ ಹೋದವು ಬಡವರಿಗೆ ಬಡವರ ಸಾವು ನೋವಿಗೆ ಬೆಲೆಯೇ ಇಲ್ಲದಾಯಿತು.ಕೊಲೆ ಅತ್ಯಾಚಾರ ಪ್ರಕರಣಗಳು ಮಿಂಚಿ ಮರೆಯಾದವು.ದೇಶವನ್ನು ಆಳಬೇಕಿದ್ದವರು , ಜನರಿಗೆ ನ್ಯಾಯ ಒದಗಿಸಿಕೊಡಬೇಕಾದವರು ದುಡ್ಡಿನ ಹಿಂದೆ ಹೋದರು.
ಇಂದು ಯಾವುದೇ ಕ್ಷೇತ್ರಕ್ಕೆ ಹೋದರು ಕೂಡ ಅಲ್ಲಿ ಪ್ರತಿಭೆಗಿಂತ ಹಣಕ್ಕೆ ಬೆಲೆ ಜಾಸ್ತಿ.ಇಂದಿನ ಸಮಾಜದಲ್ಲಿ ಒಬ್ಬ ವ್ಯಕ್ತಿಯನ್ನು ಅವನ ಪ್ರತಿಭೆಗಿಂತ ಹೆಚ್ಚಾಗಿ ಹಣದಿಂದ ಅಳೆಯುವವರೇ ಜಾಸ್ತಿ.ಹೀಗಾದರೆ ನಿಜವಾದ ಪ್ರತಿಭಾವಂತರಿಗೆ ಬೆಲೆ ಎಲ್ಲಿದೆ?
ಬಡತನ ಮತ್ತು ನಿರುದ್ಯೋಗ ಸಂಪೂರ್ಣವಾಗಿ ತೊಲಗಬೇಕೆಂದರೆ ನಮ್ಮ ದೇಶದಲ್ಲಿ ಭ್ರಷ್ಟಾಚಾರಕ್ಕೆ ಮೊದಲು ಕಡಿವಾಣ ಬೀಳಬೇಕು.ಬ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಾಗ ಬಡತನ ಮತ್ತು ನಿರುದ್ಯೋಗದ ಸಮಸ್ಯೆಗಳು ಕಡಿಮೆ ಆಗುತ್ತವೆ.ಸರ್ಕಾರವು ಯಾವುದಾದರು ಒಂದು ಯೋಜನೆ ಜಾರಿ ಗೊಳಿಸಿದರೆ ಅದರಿಂದ ಬಡವರಿಗೆ ಆಗುವ ಪ್ರಯೋಜನಕ್ಕಿಂತ ಬ್ರಷ್ಟ ಅಧಿಕಾರಿಗಳಿಗೆ ಆಗುವ ಪ್ರಯೋಜನಗಳೇ ಹೆಚ್ಚು ಹೀಗಾದರೆ ಏನು ಪ್ರಯೋಜನ?ದೇಶ ಮುಂದುವರಿಯಲು ಸಾಧ್ಯವೇ? ಹಾಗಾಗಿ ಸರ್ಕಾರ ತಾನು ಜಾರಿಗೊಳಿಸಿದ ಯೋಜನೆಗಳ ಬಗ್ಗೆ ಅದರ ಫಲಾನುಭವಿಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿದಾಗ ಮಾತ್ರ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ.
ಅದೇನೇ ಇರಲಿ ಈ ದುಡ್ಡು ಎಂಬುದು ಮನುಷ್ಯನ ಬೇಕು ಬೇಡಗಳನ್ನು ಈಡೇರಿಸುವಂತೆ ಇರಬೇಕೇ ಹೋರತು ದುಡ್ಡೇ ಜೀವನ ದುಡ್ಡೇ ಸರ್ವಸ್ವ ಆಗಿರಬಾರದು.ಯಾಕೆಂದರೆ ನಮಗೆ ಹಸಿವಾದಾಗ ದುಡ್ಡನ್ನು ತಿನ್ನಲು ಸಾಧ್ಯವಿಲ್ಲ ಅನ್ನವನ್ನೇ ತಿನ್ನಬೇಕು ಹಾಗೆಯೇ ನಾಳೆ ನಾವು ಸತ್ತಾಗ ಹೋಗುವುದು ನಾವು ಒಬ್ಬರೇ ನಮ್ಮೊಂದಿಗೆ ಈ ದುಡ್ಡು ಬರುವುದಿಲ್ಲ.
ಪ್ರಾಪ್ತಿ ಗೌಡ