ಪ್ರಕೃತಿಯೊಡನೆ ಬದುಕುವ ಕಲಿಕೆ, ಕೃಷಿ ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದು: ದಿನೇಶ್ ಪಿ ಬಿ
ಎನ್.ಎಂ.ಸಿ, ಅ.10; ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ (ರಿ.) ಮತ್ತು ರೇಂಜರ್ಸ್ ಅಂಡ್ ರೋವರ್ಸ್ ಘಟಕದ ವತಿಯಿಂದ ಮಡಿಕೇರಿ ತಾಲೂಕಿನ ಭಾಗಮಂಡಲ ನಾಡಿನ ಕೋಪಟ್ಟಿ ಗ್ರಾಮದ ಪೊಡನೊಳನ ಕುಟುಂಬದ ಮುಕ್ಕಾಟಿಗುತ್ತು ಹೊಲದಲ್ಲಿ ‘ಬತ್ತದ ಬದುಕು’ ಎಂಬ ಕೆಸರುಗದ್ದೆ ಕ್ರೀಡಾಕೂಟಗಳು, ನೇಜಿ ನೆಡುವುದು ಮತ್ತು ಸನ್ಮಾನ ಕಾರ್ಯಕ್ರಮವನ್ನು ಆಗಸ್ಟ್ 10 ಆದಿತ್ಯವಾರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಪೊಡನೊಳನ ಕುಟುಂಬದ ಹಿರಿಯರಾದ ನಾಟಿ ವೈದ್ಯೆ ನೀಲಮ್ಮ ಪಿಎನ್ ಉದ್ಘಾಟಿಸಿದರು.
ಪ್ರಕೃತಿಯೊಡನೆ ನಂಟು ಬೆಸೆಯುವ ಉದ್ದೇಶದಿಂದ ವಿದ್ಯಾರ್ಥಿಗಳು ಹಳ್ಳಿಯ ರೈತರ ಮಾರ್ಗದರ್ಶನದಲ್ಲಿ ಭತ್ತದ ತಯಾರಿ, ಗದ್ದೆ ಸಿದ್ಧತೆ ಮತ್ತು ನಾಟಿ ವಿಧಾನವನ್ನು ಅನುಭವಿಸಿದರು. ಕೈಯಲ್ಲಿ ನೆಟ್ಟ ಬತ್ತದ ಸಸಿಗಳು, ಕಾಲಿನ ಕೆಳಗಿನ ಮಣ್ಣಿನ ಸೊಂಪು ವಿದ್ಯಾರ್ಥಿಗಳಿಗೆ ಕೃಷಿಯ ಶ್ರಮ ಮತ್ತು ಸಂತೋಷವನ್ನು ಪರಿಚಯಿಸಿದವು.
ಸಭೆಯ ಅಧ್ಯಕ್ಷತೆ ವಹಿಸಿದ ಕುಂಡಚೇರಿ ಚೆಟ್ಟಿಮನಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಪಿ ಬಿ ಮಾತನಾಡಿ “ಪ್ರಕೃತಿಯೊಡನೆ ಬದುಕುವ ಕಲಿಕೆ ಕೃಷಿ ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಬತ್ತವು ಕೇವಲ ಆಹಾರವಲ್ಲ, ನಮ್ಮ ಬದುಕಿನ ಶಕ್ತಿ. ಹಳ್ಳಿಯ ಆರ್ಥಿಕತೆಯ ಆಧಾರ. ಭತ್ತದ ಹೊಲ ಕೇವಲ ಗದ್ದೆಯಲ್ಲ, ರೈತನ ಶ್ರಮದ ಪವಿತ್ರ ನೆಲ. ಅದು ನಮ್ಮ ಪೀಳಿಗೆಯ ಗುರುತು, ಸಂಸ್ಕೃತಿ, ಹಬ್ಬ ಹರಿದಿನಗಳ ಮೂಲ. ಇದನ್ನು ಉಳಿಸುವುದು ಎಂದರೆ ನಮ್ಮ ಅಸ್ತಿತ್ವ ಉಳಿದಂತೆ” ಎಂದರು.
ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ನಾಟಿವೈದ್ಯೆ ನೀಲಮ್ಮ, ಕಾರ್ಯಕ್ರಮ ಆಯೋಜನೆಗೆ ಸಂಪೂರ್ಣ ಸಹಕರಿಸಿದ ಬತ್ತದ ಕೃಷಿಕರಾದ ದಿನೇಶ್ ಪಿ ಬಿ, ಪೊಡನೊಳನ ಕುಟುಂಬದ ನಾಣಯ್ಯ ನಂಜಪ್ಪ ಮತ್ತು ಗಿರೀಶ್ ನಂಜಪ್ಪರನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಮುಟ್ಟಾಳೆ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. ನಂತರ ಕೆಸರು ಗದ್ದೆಯ ಹಲವಾರು ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ನೇಚರ್ ಕ್ಲಬ್ ಸಂಯೋಜಕರಾದ ಕುಲದೀಪ್ ಪೆಲ್ತಡ್ಕ ಪ್ರಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿ, ಕು. ಮನಸ್ವಿ ಪ್ರಾರ್ಥಿಸಿ, ಕ್ಲಬ್ ಕಾರ್ಯದರ್ಶಿ ಕು. ಅಕ್ಷತಾ ವಂದಿಸಿದರು. ಕಾರ್ಯಕ್ರಮದ ನೆನಪಿಗಾಗಿ ಒಂದು ತೆಂಗಿನ ಗಿಡವನ್ನು ನೆಡಲಾಯಿತು.
ನೆಹರು ಮೆಮೊರಿಯಲ್ ಕಾಲೇಜು ಸುಳ್ಯದ ರೇಂಜರ್ ಅಂಡ್ ರೋವರ್ ಘಟಕದ ಅಧಿಕಾರಿಗಳಾದ ಉಮೇಶ್ ಮತ್ತು ಪಲ್ಲವಿ, ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಕೃತಿಕಾ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಜಿತೇಶ್, ಇತಿಹಾಸ ಉಪನ್ಯಾಸಕರಾದ ಲತೀಶ್, ಕಾಲೇಜು ಕಚೇರಿಯ ಪವನ್ ಹಾಗೂ ವಿದ್ಯಾರ್ಥಿಗಳ ಪೋಷಕರು ಮತ್ತು ಊರಿನ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಿತೈಷಿಗಳು ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.