ಡಿ. 28: ಇಲ್ಲಿನ ಸರಕಾರಿ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಊರಿನ ನಾಗರಿಕರು ಹಾಗೂ ಪೋಷಕರ ಸಹಕಾರದೊಂದಿಗೆ ಆದಿತ್ಯವಾರದಂದು ‘ಮಕ್ಕಳ ಹಬ್ಬ’ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ‘ಹಳೆ ಬೇರು ಹೊಸ ಚಿಗುರು’ ಎಂಬ ಪರಿಕಲ್ಪನೆಯಡಿಯಲ್ಲಿ ಈ ಕಾರ್ಯಕ್ರಮ ಜರುಗಿತು.

​ಕಾರ್ಯಕ್ರಮದ ಆರಂಭದಲ್ಲಿ, ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದ ಸಂಸ್ಥಾಪಕರಾದ ಉನೈಸ್ ಪೆರಾಜೆ ಅವರು ಮಕ್ಕಳ ಜಾರುಬಂಡಿ ಹಾಗೂ ನೂತನ ಆಟೋಪಕರಣಗಳನ್ನು ಉದ್ಘಾಟಿಸಿದರು. ಬಳಿಕ ಮುಖ್ಯ ಅತಿಥಿಗಳಾದ ಮಂಗಳೂರು ಗೋಕರ್ಣನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಗಂಗಾಧರ ಬನಾರಿ ಅವರು, ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥವಾಗಿ ಗಿಡಕ್ಕೆ ನೀರು ಉಣಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಮ್ಮ ಭಾಷಣದಲ್ಲಿ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಲ್ಲದೆ, ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಬೇಕೆಂಬ ಆಶಯ ವ್ಯಕ್ತಪಡಿಸಿದರು.

ಶಿಕ್ಷಣವೇ ನಿಜವಾದ ಆಸ್ತಿ:

ಕಾರ್ಯಕ್ರಮದಲ್ಲಿ ಮಾತನಾಡಿದ ಪಂಚಾಯತ್ ಉಪಾಧ್ಯಕ್ಷರಾದ ಅಬ್ದುಲ್ ರೆಹಮಾನ್, “ಪೋಷಕರು ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ, ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು,” ಎಂದು ಕಿವಿಮಾತು ಹೇಳಿದರು. ಉನೈಸ್ ಪೆರಾಜೆ ಮಾತನಾಡಿ, ಮುಚ್ಚುವ ಹಂತದಲ್ಲಿರುವ ಕನ್ನಡ ಶಾಲೆಗಳಲ್ಲಿ ಆಟೋಪಕರಣಗಳ ಅಳವಡಿಕೆಯು ಮಕ್ಕಳನ್ನು ಆಕರ್ಷಿಸಲು ಮತ್ತು ದಾಖಲಾತಿ ಹೆಚ್ಚಿಸಲು ಸಹಕಾರಿ ಎಂದರು.

ದಾಖಲಾತಿ ಹೆಚ್ಚಳಕ್ಕೆ ವಿನೂತನ ಕೊಡುಗೆ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಕೃಷ್ಣಕುಮಾರ್ ಕಮ್ಮಾಜೆ ಅವರು ಮಾತನಾಡಿ, ಶಾಲಾ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ 1 ರಿಂದ 5ನೇ ತರಗತಿಗೆ ಸೇರ್ಪಡೆಯಾಗುವ ಮಕ್ಕಳ ಖಾತೆಯಲ್ಲಿ ಠೇವಣಿ ಇಡುವ ಹಾಗೂ ಅವರಿಗೆ ಉಚಿತ ಬ್ಯಾಗ್, ಪುಸ್ತಕ ಮತ್ತು ಬರವಣಿಗೆ ಉಪಕರಣಗಳನ್ನು ನೀಡುವ ಮಹತ್ವದ ಘೋಷಣೆ ಮಾಡಿದರು.

​ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕುಕ್ಕಾಜೆ ಹಾಗೂ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್ ಅವರು ಕಾರ್ಯಕ್ರಮದ ಸಂಘಟನೆ ಮತ್ತು ಶಾಲಾ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ಮೊಯಿದು ಕುಂಞಿ, ಬುಶ್ರಿಯಾ, ಅಬ್ದುಲ್ ಮಜೀದ್, ಎಸ್‌ಡಿಎಂಸಿ ಅಧ್ಯಕ್ಷರಾದ ಕಮರುನ್ನೀಸಾ, ನೌಫಲ್ ಸಾಲೆತೂರ್, ರಂಗಕರ್ಮಿ ರಾಜಶೇಖರ್ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ಶಾರದಾ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು ಮತ್ತು ಊರ ಪ್ರಮುಖರು ಉಪಸ್ಥಿತರಿದ್ದರು.

ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ:

ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳು ಮತ್ತು ಸಾಧಕರನ್ನು ಸನ್ಮಾನಿಸಲಾಯಿತು. ದಾನಿಗಳು ನೀಡಿದ ಮಿಕ್ಸಿ ಮತ್ತು ಡಯಾಸ್‌ಗಳನ್ನು ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ಮುಂದಿನ ವರ್ಷಕ್ಕೆ ದಾಖಲಾದ ಮಗುವನ್ನು ಅಭಿನಂದಿಸಲಾಯಿತು. ಮಧ್ಯಾಹ್ನ ಸವಿರುಚಿ ಭೋಜನದ ಬಳಿಕ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಜೆ ಹಳೆ ವಿದ್ಯಾರ್ಥಿಗಳಿಂದ ‘ಮದಿಮೆದ ಇಲ್ಲಡ್’ ಎಂಬ ತುಳು ನಾಟಕ ಪ್ರದರ್ಶನಗೊಂಡು ರಂಜಿಸಿತು.

​ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸೆಕೀನಾ ಸ್ವಾಗತಿಸಿ, ವಂದಿಸಿದರು. ಅತಿಥಿ ಶಿಕ್ಷಕಿ ವನಿತಾ ಮತ್ತು ರಾಜೇಂದ್ರ ಸರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *